-ಯೋಗೇಶ್ ಮಾಸ್ಟರ್
ಆಪ್ತ ಸಮಾಲೋಚಕರು, ಲೇಖಕರು
ಮಾಟ ಮಂತ್ರ ಯಂತ್ರ ತಂತ್ರಗಳಿಗೆ ಸೋಲುವುದೇಕೆ ಮನವು?
Black Mind
One minute psychology….
ಮಾಟ ಮಂತ್ರದಲ್ಲಿ ನಂಬಿಕೆ ಹುಟ್ಟಲು ಕಾರಣ ವ್ಯಕ್ತಿಯಲ್ಲಿ ಅಡಗಿರುವ ಸಂಕಟ ಮತ್ತು ದೌರ್ಬಲ್ಯ. ಮಾನಸಿಕವಾಗಿ ಪೆಟ್ಟುಗಳು ಬಿದ್ದಾಗ, ಅದನ್ನು ತಡೆದುಕೊಳ್ಳುವಷ್ಟು ಮನೋಬಲ ಇಲ್ಲದೇ ಹೋದಾಗ ಆತಂಕ, ಖಿನ್ನತೆ, ಮನೋವೇದನೆ ಉಂಟಾಗಿ ಅದರಿಂದ ಬದುಕನ್ನು ನಡೆಸುವುದರ ಬಗ್ಗೆ ಭಯ ಉಂಟಾಗುತ್ತದೆ.
ಎಷ್ಟೆಷ್ಟೋ ಸಿನಿಮಾಗಳಲ್ಲಿ ಮತ್ತು ಕೇಳಿರುವ ಕತೆಗಳಲ್ಲಿ ನಡೆದಿರುವ ಸಂಗತಿಗಳಿಗೆ ತಮ್ಮ ಜೀವನದ ಪ್ರಸಂಗಗಳನ್ನು ತಾಳೆ ಹಾಕಿಕೊಳ್ಳುತ್ತಾ ಈ ಮಾಟ ಮಂತ್ರಗಳನ್ನು ನಂಬುತ್ತಾರೆ. ತಮ್ಮ ಸಂಕಟ ಮತ್ತು ತೊಂದರೆಗಳಿಗೆ ಕಾರಣ ಕಂಡುಕೊಳ್ಳಲಾಗದೇ ಹೋದಾಗ, ತಾವೇ ಅದನ್ನು ಸರಿಪಡಿಸುವ ಭರವಸೆ ಇಲ್ಲದೇ ಹೋಗಿದ್ದಾಗ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಮಾಟ ಮಂತ್ರ ತಂತ್ರ ಯಂತ್ರಗಳಿಗೆ ಮೊರೆ ಹೋಗುತ್ತಾರೆ.
ಅಷ್ಟೇ ಅಲ್ಲದೇ ಎಷ್ಟೇ ವಿದ್ಯಾವಂತರಾಗಿದ್ದರೂ, ಬುದ್ದಿವಂತರಾಗಿದ್ದರೂ, ಸ್ವಯಂ ವಿಜ್ಞಾನಿಗಳೇ ಆಗಿದ್ದರೂ ವ್ಯಕ್ತಿ ಮಾನಸಿಕವಾಗಿ ತನ್ನನ್ನು ತಾನು ಅರಿತುಕೊಳ್ಳದೇ ಹೋದರೆ, ಮತ್ತು ತನ್ನ ಸುಪ್ತಚೇತನ ಅಂದರೆ ಸಬ್ ಕಾನ್ಸಶನ್ ಮೈಂಡಿನ ಪ್ರಭಾವ ಮತ್ತು ಕೆಲಸ ಮಾಡುವ ರೀತಿಗಳನ್ನು ತಿಳಿಯದೇ ಹೋದರೆ ಅವನೂ ಕೂಡಾ ಮಾಟ ಮಂತ್ರ ತಂತ್ರಗಳಿಗೆ ಮೊರೆ ಹೋಗುತ್ತಾನೆ. ಏಕೆಂದರೆ ಅವನ ಸುಪ್ತ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಭಯ ಮತ್ತು ನಂಬಿಕೆಯ ಮುಂದೆ ಹೊಸದಾಗಿ ಹೊರಗಡೆಯಿಂದ ಬಂದಿರುವ ತಿಳುವಳಿಕೆ ಬಲವಾದ ಪ್ರಭಾವವನ್ನು ಬೀರುವುದಿಲ್ಲ.
ಆದರೆ ಮಾಟ ಮಂತ್ರ ಯಂತ್ರ ತಂತ್ರ ಇವುಗಳಿಗೆ ಮೊರೆ ಹೋಗುವ ಬದಲಾಗಿ, ಅರಿವಿನ ಪುಸ್ತಕಗಳನ್ನು ಓದುವುದು, ಧ್ಯಾನ, ಪ್ರಾರ್ಥನೆ, ಮನೋಬಲವನ್ನು ಹೆಚ್ಚಿಸುವಂತಹ, ಆತ್ಮಸ್ಥೈರ್ಯವನ್ನು ಮೂಡಿಸುವಂತಹ ಶಿಬಿರಗಳಿಗೆ ಹೋಗುವುದು ಹೆಚ್ಚಿನ ಪರಿಣಾಮಕಾರಿ.

ಮನಸ್ಸಿನ ಆಳದಲ್ಲಿ ಬೇರೂರಿರುವ ಭಯ ಮತ್ತು ಆತಂಕಗಳನ್ನು ನಿವಾರಿಸಿಕೊಳ್ಳಲು ಸಾಧ್ಯ. ಮನೋಬಲ ಮತ್ತು ಆತ್ಮಸ್ಥೈರ್ಯವೇ ಮದ್ದು.
ಇಲ್ಲದೇ ಹೋದರೆ ಮಾಟ ಮಂತ್ರ ಯಂತ್ರ ತಂತ್ರಗಳ ನೆಪದಿಂದ ಮುಗ್ಧರು ಮತ್ತು ನೊಂದವರು ಶೋಷಣೆಗೆ ಒಳಗಾಗುತ್ತಾರೆ.




