ಮಂಡ್ಯದಲ್ಲಿ 25 ಶ್ರಮಿಕ ನಗರ (ಸ್ಲಂ)ಗಳಿವೆ. ಇಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ಮಂಡ್ಯದಲ್ಲಿ ಒಬ್ಬರು ನಿರ್ದಿಷ್ಟವಾಗಿ ಗೆಲ್ಲಬೇಕೆಂದರೆ ಸ್ಲಂ ಜನರ ಮತಗಳು ನಿರ್ಣಾಯಕ ಮತಗಳಾಗಿವೆ. ಹಿಂದೆ ಸಚಿವರಾಗಿದ್ದವರು ಒಂದು ಸ್ಲಂ ವಿಚಾರವಾಗಿ ಮೋಸ ಮಾಡಿದ್ದರಿಂದ ಎಲ್ಲಾ ಸ್ಲಂ ಜನರು ಒಗ್ಗಟ್ಟಾಗಿ ನನ್ನನ್ನು ಸೋಲಿಸಿ ಬಿಟ್ಟರೆಂದು ಹೇಳಿರುವ ಉದಾಹರಣೆ ಇದೆ. ಅಷ್ಟು ಶಕ್ತಿ ಈ ನಮ್ಮ ಶ್ರಮಿಕ ಜನರಿಗಿದೆ. ಕರ್ನಾಟಕ ಜನಶಕ್ತಿಯ ಸಿದ್ದರಾಜು ತಮ್ಮ ಹೋರಾಟದ ಅನುಭವವನ್ನು ಇಲ್ಲಿ ದಾಖಲಿಸಿದ್ದಾರೆ.
ಮಂಡ್ಯದ ಶ್ರಮಿಕ ಜನರು ಪೂರ್ವಜರ ತಲೆಮಾರುಗಳಿಂದ ಈಗಿನ ಹೊಸ ತಲೆಮಾರುಗಳ ತನಕ ಸಾಕಷ್ಟು ಕಷ್ಟ, ನಷ್ಟ, ನೋವನ್ನು ಕಂಡುಂಡು ಒಗ್ಗಟ್ಟಿನಿಂದ ಶ್ರಮಿಕ ನಿವಾಸಿಗಳ ಒಕ್ಕೂಟ ಕಟ್ಟಿ, ಕರ್ನಾಟಕ ಜನಶಕ್ತಿ ಸಂಘಟನೆ ಜೊತೆಗೂಡಿ ಹೋರಾಡಿ, ತಮ್ಮ ಹಕ್ಕುಗಳನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟು ಸಾಗುತ್ತಿರುವುದು ಒಂದು ಹೊಸ ಬದಲಾವಣೆಯ ಸಂಕೇತ.
ಯಾವ ಸರಕಾರವಾಗಲಿ, ಜನ ಪ್ರತಿನಿಧಿಗಳಾಗಲಿ ಜನರ ಬಳಿ ಮತ ಕೇಳಲು ಮಾತ್ರ ಬರುತ್ತಾರೆ. ಗೆದ್ದ ನಂತರ ನೀವ್ಯಾರು ಎಂದು ಕೇಳಿರುವ ಉದಾಹರಣೆ ಇಲ್ಲ. ಈ ತಲೆಮಾರಿನ ನಮ್ಮ ಮಂಡ್ಯದ ಶಾಸಕರು ಒಂದು ನೂತನ ಪ್ರಯತ್ನ ಮಾಡಿದ್ದಾರೆ. ಗೆದ್ದ ನಂತರ ಎಲ್ಲಾ ಸ್ಲಂಗಳಿಗೆ ಭೇಟಿ ನೀಡಿ ಸಮಾಸ್ಯೆಗಳನ್ನು ಆಲಿಸಿ ಜನರಿಗೊಂದು ಭರವಸೆ ನೀಡಿದ್ದಾರೆ. ಜನರಿಗೂ ಸಹ ಒಂದು ಹೊಸ ಹುಮ್ಮಸ್ಸು, ಭರವಸೆ ತಂದು ಕೊಂಡಿದ್ದಾರೆ. ನಮ್ಮ ಶಾಸಕರಿಗೆ ಹೃದಯವಂತಿಕೆ ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೌಲ್ಯವಾದ ಗುಣವು ಇದೇ. ಮಂಡ್ಯದ 35 ವಾರ್ಡ್ಗಳ ರಸ್ತೆ ಕಾಮಾಗಾರಿ, ಹೈಟೆಕ್ ಪುಟ್ಪಾತ್ ನಿರ್ಮಾಣ ಮಾಡಿ, ನಗರವನ್ನು ಸುಂದರ ಪಡಿಸುತ್ತಿರುವುದಕ್ಕೆ ನಮಗೆ ಸಂತೋಷ ಇದೆ.
ನಗರವನ್ನು ಸುಂದರ ಪಡಿಸಲು ದುಡಿಯುವ ಶ್ರಮಿಕರ ಬದುಕು ಕೂಡ ಸುಂದರವಾಗಬೇಕು ಅಲ್ಲವೆ ಎನ್ನುವುದು ನಮ್ಮ ತರ್ಕ.ಇವರುಗಳ ಕಾಲಘಟ್ಟದಲ್ಲಾದರು 70 ವರ್ಷಗಳ ಜನರ ಕಷ್ಟಗಳಿಗೆ ಕೊನೆ ಹಾಡಲಿ. ಅಭಿವೃದ್ದಿಯ ಕೆಲಸಗಳನ್ನು ಮಾಡಿ, ಜನರ ಮನದಲ್ಲಿ ಚಿರಾಯುವಾಗಿ ಉಳಿಯಬಲ್ಲರೇ? ಇಲ್ಲವೇ ವಂಚಿಸಿ ಸುಳ್ಳು ಬರವಸೆಗಳನ್ನು ನೀಡಿ ಮತ ಪಡೆದ ರಾಜಕಾರಣಿಗಳ ಸಾಲಿಗೆ ಇವರು ಸೇರುವರೇ? ಭಿನ್ನ ಎನಿಸಿಕೊಳ್ಳವರೇ? ಮುಂದಿನ 3 ವರ್ಷಗಳಲ್ಲಿ ಇವರು ಬದಲಾವಣೆ ತರುತ್ತಾರೋ ಎಂದು ಭರವಸೆಯಿಂದ ಕಾದು ನೋಡುತ್ತೇವೆ. ಸ್ಲಂಗಳ ಕೆಲವು ಮುಖ್ಯವಾದ ಸಮಾಸ್ಯೆಗಳನ್ನು ಮುಂದಿಡಲು ನಮ್ಮ ಸಂಘಟನೆ ಬಯಸುತ್ತದೆ
ಕಾಳಿಕಾಂಭ ಶ್ರಮಿಕ ಜನರ ಜಾಗದ ವಿಚಾರವಾಗಿ ಶಾಸಕರಾದ ಹೊಸದರಲ್ಲಿ ನಮ್ಮ ಸಂಘಟನೆಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಒಳಗೊಂಡಂತೆ ಸ್ಥಳದ ಸಮಸ್ಯೆಯನ್ನು ಬಗ್ಗೆ ಹರಿಸಲು ಪೂರ್ವ ಸಿದ್ಧತೆ ಇಲ್ಲದೆ ಸಭೆ ಮಾಡಿ ಇದುವರೆಗೂ ಸ್ಲಂ ಜನರ ಜಾಗ ಮತ್ತು ಮನೆಗಳ ವಿಚಾರ ಬಗೆ ಹರಿಯದೆ ಜ್ವಲಂತ ಸಮಸ್ಯೆಯಾಗಿ ಉಳಿದಿದೆ ಇತ್ತ ಗಮನ ಹರಿಸಿ ಎಂದು ಒತ್ತಾಯಿಸುತ್ತೇವೆ.
ನಗರ ಪ್ರದೇಶ ಮತ್ತು ನಗರದ ಸುತ್ತ ಮುತ್ತಲಿನಲ್ಲಿ ಬಲಾಡ್ಯರು ಅಕ್ರಮವಾಗಿ ಸರಕಾರದ ಜಾಗಗಳನ್ನು ಒತ್ತುವರಿ ಮಾಡಿ ಕೊಂಡಿರುವುದನ್ನು ದಾಖಲೆಗಳ ಸಹಿತ ಪರಿಶೀಲಿಸಿ, ಪತ್ತೆ ಹಚ್ಚಿ ಬಿಡಿಸಿಕೊಂಡು, ಜಾಗದ ಸಮಸ್ಯೆ ಇರುವ ಬಡ ಜನರಿಗೆ ಹಂಚಿಕೆ ಮಾಡಬೇಕು. ಮಂಡ್ಯದಲ್ಲಿ ಹಲವು ಏರಿಯಾಗಳು ಸ್ಲಂಗಳೆಂದು ಘೋಷಣೆ ಆಗಿವೆ. ಸಣ್ಣ ಪುಟ್ಟ ಸಮಾಸ್ಯೆಗಳಿವೆ ಅವುಗಳನ್ನು ಬಗ್ಗೆಹರಿಸಿ ಹಕ್ಕುಪತ್ರ ನೀಡಿ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಸಬೇಕಿದೆ.
ಬಹಳ ಮುಖ್ಯವಾಗಿ ಹಲವು ಸ್ಲಂಗಳಲ್ಲಿ 15×15 ಅಳತೆಯ ಜಾಗದಲ್ಲಿ ಎರಡರಿಂದ ಮೂರು ಕುಟುಂಬಗಳು ವಾಸ ಮಾಡುತ್ತಿವೆ. ಇಂತಹ ಕುಟುಂಗಳನ್ನು ಸರ್ವೆ ನಡೆಸಿ 20 ಎಕರೆ ಜಾಗವನ್ನು ಮಂಡ್ಯ ತಾಲೂಕಿನ 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಗುರುತಿಸಿ ಹಂಚಿಕೆ ಮಾಡುವ ತುರ್ತು ಕೆಲಸ ಆಗಬೇಕಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಸಹ ಎಸಿ ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದಾರೆ. ಕಂದಾಯ ಸಚಿವರಿಗೂ ಸಹ ಮನವಿ ಕೊಟ್ಟು ಮಾತಾಡಲಾಗಿದೆ.
ಸಚಿವರು ಸಹ ಅದ್ಯತೆಯ ಮೇರೆಗೆ ಈ ವಿಚಾರವಾಗಿ ತುರ್ತಾಗಿ ಗಮನ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತಾರೆ. ನಮ್ಮ ಸಂಘಟನೆಯಿಂದ ಸಹ ನಿರಂತರ ಪಾಲೋ ಅಪ್ ಮಾಡಲಾಗುತ್ತಿದೆ. ಇದರಲ್ಲಿ ಶಾಸಕರ ಪಾತ್ರವೇನು? ಏನು ಮಾಡಬಹುದು ಎಂದು ಅರಿತು, ತೊಡಕುಗಳನ್ನು ಶೀಘ್ರ ಬಗೆಹರಿಸಲಿ ಎಂಬುದು ನಮ್ಮ ಕಾಳಜಿಯುತ ಒತ್ತಾಯ.
ದುಡಿಯುವ ಕೈಗಳಿಗೆ ಕೆಲಸಗಳನ್ನು ನೀಡಲು ಹೊಸ ಕೈಗಾರಿಕೆಗಳನ್ನು ತರಲು ಸರ್ಕಾರದಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವ ಸಮುದಾಯವು ಕೆಲಸ ಅರಸಿ ದೂರ ಹೋಗಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಬದುಕು ಸಾಗಿಸಲು ಎಷ್ಟು ಕಷ್ಟದ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅರಿತು ಉದ್ಯೋಗ ಸೃಷ್ಟಿ ಮಾಡಬೇಕು.
ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಬಲಿಷ್ಠ ಪಡಿಸಿ ರೈತ ವರ್ಗಕ್ಕೆ ಅನುಕೂಲ ಕಲ್ಪಿಸಬೇಕು ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಇಂತಹ ಕೆಲಸ ಕಾರ್ಯಗಳನ್ನು ಮಾಡಿದರೆ ನಮಗೂ ಖುಷಿ ಮತ್ತು ಮಂಡ್ಯದ ಜನತೆಯನ್ನು ತಮ್ಮ ಬಾಹುಗಳಿಂದ ನಿರಂತರವಾಗಿ ಬಿಗಿದು ಅಪ್ಪಿಕೊಳ್ಳುತ್ತಾರೊ ಎಂದು ಕಾದು ನೊಡೋಣ.




