ಬ್ರಹ್ಮಗಂಟು ಖ್ಯಾತಿಯ ಕನ್ನಡದ ಕಿರುತೆರೆ ಮತ್ತು ಸಿನಿಮಾ ನಟಿ ಶೋಭಿತಾ(30) ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟಿ ಶೋಭಿತಾ ಶಿವಣ್ಣ ಭಾನುವಾರ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಗಚಿಬೌಲಿಯ ಶ್ರೀರಾಮನಗರ ಕಾಲೋನಿಯ ಸಿ-ಬ್ಲಾಕ್‌ನಲ್ಲಿರುವ ತನ್ನ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ದೂರು ಸ್ವೀಕರಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಅವರು ನಟಿಯ ಶವವನ್ನು ಪತ್ತೆ ಹಚ್ಚಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಟಿಯ ಸಾವಿಗೆ ಕಾರಣವಾದ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಬ್ರಹ್ಮಗಂಟು,ನಿನ್ನಿಂದಲೇ ಧಾರಾವಾಹಿಗಳಲ್ಲಿ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಕಳೆದ ವರ್ಷ ವಿವಾಹವಾಗಿದ್ದರು. ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು.
ಹಾಸನದ ಸಕಲೇಶಪುರದಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶೋಭಿತಾ ಕನ್ನಡದ 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. ಗಾಳಿಪಟ, ಮಂಗಳಗೌರಿ, ಕೋಗಿಲೆ, ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು ಮತ್ತು ಮನೆದೇವರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕನ್ನಡ ಸಿನಿಮಾಲ್ಲಿ ಎರಡೊಂದ್ಲ ಮೂರು ಸಿನಿಮಾದಲ್ಲಿ ಚಂದನ್ ಮತ್ತು ಶ್ವೇತಾ ಪಂಡಿತ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು.
ಹೈದರಾಬಾದ್‌ನಲ್ಲಿ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರೋ ಸಾಧ್ಯತೆ ಇದೆ.




