Thursday, May 16, 2024

ಪ್ರಾಯೋಗಿಕ ಆವೃತ್ತಿ

ಪ್ರಸ್ತುತ ಹೆಚ್ಚು ರಕ್ತದಾನ ಶಿಬಿರಗಳ ಅವಶ್ಯಕತೆ ಇದೆ- ಮೀರಾ ಶಿವಲಿಂಗಯ್ಯ

ಪ್ರಸ್ತುತ ದಿನಗಳಲ್ಲಿ ರಕ್ತದ ಕೊರತೆ ಬಹಳವಿದೆ, ತುಂಬ ಜನ ಅನಿಮೀಯಾ ವಿರುದ್ದ ಹೋರಾಡುತ್ತಿದ್ದಾರೆ, ಹಾಗಾಗಿ ಸಮಾಜದಲ್ಲಿ ರಕ್ತದಾನ ಶಿಬಿರಗಳ ಅವಶ್ಯಕತೆಯಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.

ಮಂಡ್ಯ ನಗರದ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋವರ್ಸ್, ಎನ್.ಸಿ.ಸಿ, ಎನ್ ಎಸ್ ಎಸ್ ಘಟಕಗಳು ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಹೆಚ್ಚು ರಕ್ತದಾನ ಮಾಡುವ ಯುವಜನತೆ ಅಗತ್ಯವಿದೆ, ಮಹಿಳೆಯರಲ್ಲಿ ರಕ್ತದ ಕೊರತೆ ಹೆಚ್ಚು ಕಾಡುತ್ತಿದೆ, ಅತ್ಯಗತ್ಯ ಪೂರೈಕೆಗಾಗಿ ರಕ್ತದಾನ ಅಭಿಯಾನ ಬಿಟ್ಟರೆ ಬೇರೆ ಮಾರ್ಗವಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯ ಔಷಧ, ಅದನ್ನು ಬಿಟ್ಟರೆ ಕೃತಕ ರಕ್ತ ಸಂಶೋಧನೆಯಾಗಿಲ್ಲ, ಮಾನವನ ರಕ್ತವೇ ಮನುಷ್ಯನಿಗೆ ಔಷಧವಾಗಿದೆ, ಈ ನಿಟ್ಟಿನಲ್ಲಿ ಯುವ ಜನತೆ ರಕ್ತದಾನ ಮಾಡುವ ಮೂಲಕ ಶ್ರೇಷ್ಠತೆಯನ್ನು ಮೆರೆಯಿರಿ, ಜೀವ ಉಳಿಸಿದ ತೃಪ್ತಿ ನಿಮ್ಮದಾಗುತ್ತದೆ ನುಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಮಾತನಾಡಿ, ಜಗತ್ತಿನಲ್ಲಿ ರಕ್ತವನ್ನು ತಯಾರಿಸುವ ಯಾವುದೇ ಪ್ಯಾಕ್ಟರಿ ಇಲ್ಲ, ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷವೂ ರಕ್ತದಾನ ಅಭಿಯಾನ ನಡೆಸಿ, ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ, ಈ ವರ್ಷವೂ ಪ್ರಥಮ ಸ್ಥಾನ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳಬೇಕು ಎಂದರು.

ಇದೇ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ರಕ್ತದಾನಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜನತಾ ಶಿಕ್ಷಣ ಪ್ರಶ್ನೆ ಅಧ್ಯಕ್ಷ ವಿಜಯ ಆನಂದ್ ರಕ್ತದಾನಿಗಳನ್ನು ಅಭಿನಂದಿಸಿದರು. ಮಿಮ್ಸ್ ರಕ್ತನಿಧಿ ಕೇಂದ್ರದ ವೈದ್ಯರು, ಸಿಬ್ಬಂದಿಗಳು ಸುಮಾರು 200 ಯುನಿಟ್ ರಕ್ತವನ್ನು ಸಂಗ್ರಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರೊ.ಜಯರಾಮ್, ರೋವರ್ಸ್ ಮುಖ್ಯಸ್ಥ ಪ್ರೊ.ಎಸ್ ಕೆ ವೀರೇಶ್, ಎನ್.ಎಸ್.ಎಸ್ ಮುಖ್ಯಸ್ಥ ಡಾ.ಶಿವಕುಮಾರ್, ಎನ್‌ಸಿಸಿ ಮುಖ್ಯಸ್ಥ ಪ್ರೊ. ರಮೇಶ್, ಉಪನ್ಯಾಸಕ ಪ್ರೊ.ಜೋಗಿಗೌಡ, ಭಾರತೀಯ ರೇಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಕೆ.ಟಿ.ಹನುಮಂತು, ಸಿಬ್ಬಂದಿ ರಾಮು, ಜಗದೀಶ್ ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!