ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡಬೇಕೆಂಬ ವಿಚಾರಕ್ಕೆ ವಿವಿಧ ಪ್ರಗತಿಪರ ಸಂಘಟನೆಗಳು ಧ್ವನಿಗೂಡಿಸಿದ್ದು, ಸಮ್ಮೇಳನದ ಸಂಘಟಕರು ತಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ತೀರ್ಮಾನಕ್ಕೆ ಬಂದಿದ್ಧಾರೆ.
ಮಂಡ್ಯ ನಗರದ ಡಿಸಿ ಕಚೇರಿ ಮುಂಭಾಗದ ಉದ್ಯಾನವನದ ಪಲ್ಮಿಡಿ ಶಾಸನದ ಮುಂದೆ ಬುಧವಾರ ಸಂಜೆ ಸಭೆ ಸೇರಿದ ಮುಖಂಡರು, ಸಮ್ಮೇಳನದಲ್ಲಿ ಮಾಂಸಾಹಾರ ಇರಬೇಕೆಂದು ನಮ್ಮ ಗಟ್ಟಿ ನಿರ್ಧಾರವಾಗಿದೆ, ಇದು ಬಹುಜನರ ಆಹಾರ ಸಂಸ್ಕೃತಿಯ ಪ್ರಶ್ನೆಯಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈ ಹೋರಾಟವನ್ನು ಮುಂದಿನ ಹಂತಕ್ಕೆ ವಿಸ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಮ್ಮ ಬೇಡಿಕೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಜನಾಭಿಪ್ರಾಯ ಮೂಡಿಸಲಾಗುವುದು, ಈಗಾಗಲೇ ರಾಜ್ಯದ ವಿವಿಧೆಡೆ ಹಲವು ಸಂಘಟನೆಗಳ, ಯುವಕರು ಸ್ವಯಂ ಪ್ರೇರಿತರಾಗಿ ತಾವೇ ಸ್ವತಃ ವಾಟ್ಸಾಪ್ ಗ್ರೂಪ್ ಗಳನ್ನು ರಚನೆ ಮಾಡಿಕೊಂಡು ತಮ್ಮ ಬೆಂಬಲಕ್ಕೆ ನಿಂತಿದ್ದು, ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ತಮ್ಮ ಹೋರಾಟವನ್ನು ಹಳ್ಳಿ ಹಳ್ಳಿಗಳಿಗೆ ವಿಸ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾಳೆ ಡಿ.12ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹಾಗೂ ಸಂಸದರ ಕಚೇರಿಗೆ ಈ ಬಗ್ಗೆ ಮನವಿ ಪತ್ರವನ್ನು ಸಲ್ಲಿಸುವ ಹಾಗೂ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿಗೌಡ, ಸಿಪಿಐಎಂ ಟಿ.ಎಲ್.ಕೃಷ್ಣೇಗೌಡ, ಪ್ರೊ.ಹುಲ್ಕೆರೆ ಮಹದೇವು,ಪರಿವರ್ತನ ಸಂಸ್ಥೆಯ ಟಿ.ಡಿ.ನಾಗರಾಜು,ವಕೀಲ ಬಿ.ಟಿ.ವಿಶ್ವನಾಥ್, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಜಾಗೃತ ಕರ್ನಾಟಕದ ಸಂತೋಷ್, ಚಿತ್ರಕೂಟದ ಅರವಿಂದ ಪ್ರಭು, ಕರವೇ ಮುಖಂಡ ಹೆಚ್.ಡಿ.ಜಯರಾಂ,ಸಮಾನ ಮನಸ್ಕರ ವೇದಿಕೆಯ ಚೀರನಹಳ್ಳಿ ಲಕ್ಷ್ಮಣ್, ಮುಕುಂದ, ಕರ್ನಾಟಕ ಸ್ವಾಭಿಮಾನಿ ಸಮಾಜದ.ನರಸಿಂಹಮೂರ್ತಿ, ಡಿಎಸ್ಎಸ್ ಎಂ.ವಿ.ಕೃಷ್ಣ, ಅಂಬೇಡ್ಕರ್ ವಾರಿಯರ್ಸ್ ಗಂಗರಾಜು, ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯ ಬೂದನೂರು ಸತೀಶ್, ವಕೀಲ ರಾಮಯ್ಯ,ಕೀಲಾರ ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




