ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿಲ್ಲವೆಂದು ಹೇಲಕುತ್ತಿರುವ ಸಿ.ಟಿ.ರವಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಅಶ್ಲೀಲ ಪದ ಬಳಸಿಲ್ಲ ಎಂಬುದೇ ನಿಜವಾದರೆ ಅವರು ಧರ್ಮಸ್ಥಳಕ್ಕೆ ಕುಟುಂಬ ಸಮೇತ ಬಂದು ಪ್ರಮಾಣ ಮಾಡಲಿ.ನಾನೂ ಕೂಡ ನನ್ನ ಕುಟುಂಬದ ಜೊತೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಪಂಥಾಹ್ವಾನ ನೀಡಿದ್ದಾರೆ.
ಸಿ.ಟಿ.ರವಿ ನಿತ್ಯವೂ ಮಾಧ್ಯಮಗಳ ಮುಂದೆ ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ವಾದಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರ ಮಾತು ನಿಜವಾಗಿದ್ದರೆ, ಧರ್ಮಸ್ಥಳದಲ್ಲಿ ನನ್ನ ಉಪಸ್ಥಿತಿಯಲ್ಲಿ ಈ ಕುರಿತು ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ನಾಯಕಿ ಸವಾಲು ಹಾಕಿದರು.
ಸಿ.ಟಿ. ರವಿ ನನ್ನ ವಿರುದ್ಧ ಬಳಸಿರುವ ಪದ ಸಭ್ಯ ನಾಗರಿಕರು ಬಳಸುವಂತದ್ದಲ್ಲ. ಅದನ್ನು ನಾನು ತಪ್ಪಿಯೂ ನನ್ನ ಬಾಯಿಂದ ಆಡಲಾರೆ. ಆದರೆ ಅವರ ಪದ ಬಳಕೆಯಿಂದ ನನಗೆ ಆಗಿರುವ ನೋವು ಮಾತ್ರ ಅಗಾಧ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕರಾಗಿ ನುಡಿದಿದ್ದಾರೆ.




