ಅರವಿಂದ ಮಾಲಗತ್ತಿ, ಸಾಹಿತಿ
(ಫೇಸ್ ಬುಕ್ ವಾಲ್ ನಿಂದ )
ಸ್ವಾಮೀಜಿಯೊಬ್ಬರು ಶರಣ ಚಳವಳಿಯ ನೆರಳಿನಲ್ಲಿ ಕೊಡೆ ಹಿಡಿದು ಹೊರ ‘ಸರ್ಕಾರ ವೆಜ್ ಬೇರೆ, ನೋನ್ ವೆಜ್ ಬೇರೆ ಶಾಲೆ ತೆರೆಯಲಿ’ ಎಂದು ಮಹಾನ್ ಸಲಹೆಯನ್ನು ಕೊಟ್ಟಿದ್ದರು.
‘ಮಾಂಸಾಹಾರ ನಿಷೇಧ’ ಎನ್ನುವ ಪದ ಮಾಂಸಾಹಾರಿಗಳನ್ನು ಕೆಣಕಿತು. ಹೀಗಾಗಿ ಸ್ವಾಭಿಮಾನದ ಮಾತುಗಳು ಹೊರ ಬಿದ್ದವು. ಈ ಮಾತುಗಳಿಗೆ ಅಷ್ಟೇ ಅವಹೇಳನಕಾರಿ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಮಾಂಸಾಹಾರಕ್ಕೆ ‘ಹೊಲಸು’ ಎನ್ನುವುದಾಗಲಿ ‘ಮೂಗು ಮುರಿಯುವುದಾಗಲಿ’ ಸೇವಿಸುವವರಿಗೆ ‘ಕ್ರೂರಿಗಳು’ ಎಂದು ಬಿಂಬಿಸುವುದಾಗಲಿ ಇವೆಲ್ಲ ವಿವೇಚನಾ ರಹಿತ ಮತ್ತು ಮಂದಮತಿಗಳ ಮಾತುಗಳಾಗಿ ಹೊರಬಂದವು. ಸಸ್ಯಾಹಾರಿಗಳಾದ ‘ವಿದ್ಯಾ ವಿನಯ ಸಂಪನ್ನರು’ ಇಂತಹ ಮಾತುಗಳನ್ನು ಉಲ್ಲೇಖಿಸಬಾರದಾಗಿತ್ತು.
ಧರ್ಮ ಗ್ರಂಥಗಳಲ್ಲಿ ಮಾಂಸನ್ನಕ್ಕೆ ನೇರವಾಗಿ ‘ಅಮೇಧ್ಯ’ ಎಂದೇ ಸಂಬೋಧಿಸಲಾಗಿದೆ. ‘ಅಮೇಧ್ಯ’ ಎಂದರೆ ನೇರ ಅರ್ಥದಲ್ಲಿ ‘ಮಲ’ ಎಂದಾಗುತ್ತದೆ. ಅನುವಾದಿಸಿದ ಕೆಲವರು ‘ಹೊಲಸು’ ಎಂದು ಅನುವಾದಿಸಿದ್ದಾರೆ! ಹೀಗಾಗಿ ಆ ಶಬ್ದಗಳೆಲ್ಲ ಧರೆಗಿಳಿದವು ಮತ್ತು ಸ್ವಾಭಿಮಾನಿಗಳಿಗೆ ಇನ್ನಷ್ಟು ಕೆಣಕುವಂತೆ ಮಾಡಿದವು. ಹಿಂದಿನ ದಿನಗಳಲ್ಲಿ ಅನಕ್ಷರಸ್ಥರು ಇಂಥದ್ದನ್ನೆಲ್ಲ ಕೇಳಿಸಿಕೊಂಡು ತಲೆಕೆಳಗೆ ಹಾಕಿ ಮುಂದೆ ಹೋಗುವುದು ಸರ್ವೇಸಾಮಾನ್ಯವಾಗಿತ್ತು. ಆದರೆ ಅವರಲ್ಲಿಯ ಅಕ್ಷರಸ್ಥರು ಈಗ ಸ್ವಾಭಿಮಾನಿಗಳಾಗಿದ್ದಾರೆ. ಹೀಗಾಗಿ ಶ್ಲೋಕ ಪ್ರೇಮಿಗಳು ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.
ಶೇಕಡ 80ರಷ್ಟು ಜನ ಮಾಂಸಾಹಾರಿಗಳೇ ಆಗಿರುವಾಗ ಅಂಥವರ ಅನ್ನವನ್ನು ‘ಅನ್ನವಲ್ಲ’ ಎಂದು ಹೇಳುವುದು, ಬುದ್ಧಿವಂತರಿಗೆ ಭೂಷಣವಲ್ಲ. ವೈಜ್ಞಾನಿಕವಾಗಿ ಮಾಂಸಹಾರದಲ್ಲಿ ಸಶಕ್ತವಾದ ಅಂಶಗಳಿವೆ ಎಂದು ಸಾಬೀತಾಗಿರುವುದರಿಂದ ಮುಂದೆ ‘ಸಾತ್ವಿಕ’ ಮತ್ತು ‘ತಾಮಸ’ ಶಬ್ದಗಳ ವ್ಯಾಖ್ಯಾನಗಳನ್ನೇ ಮರುವ್ಯಾಖ್ಯಾನ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಸಾಂಪ್ರದಾಯಿಕ ವ್ಯಾಖ್ಯಾನಗಳು ನಾಲೆಯಲ್ಲಿ ಹರಿಯುವ ನೀರಿನಂತಿವೆ.
ಕಾಲ ಬದಲಾಗಿದ್ದರಿಂದ ನಮ್ಮ ಇರುವಿಕೆಗಳೂ ಮಾತಿನ ಶೈಲಿಗಳೂ ಬದಲಾಗಬೇಕಿದೆ. ಬಾಡನ್ನದ ಸ್ವಾಭಿಮಾನಿಗಳು ಆವೇಶಕ್ಕೆ ಒಳಗಾದದ್ದೂ ಆ ಸಂದರ್ಭದಲ್ಲಿ ಸರಿ ಅನಿಸಿದರೂ ಈಗ ಅದು ಉಚಿತವಲ್ಲ. ಪರಸ್ಪರ ನಾವೆಲ್ಲ ಅರಿತುಕೊಂಡು ಗೌರವದಿಂದ ಬಾಳಬೇಕಿದೆ. ಹೀಗಾದಾಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ.
ಮಾಂಸಾಹಾರಿಗಳು ಸಸ್ಯಾಹಾರಿಗಳಾಗುವುದು ಅಥವಾ ಮಾಂಸಾಹಾರಿಗಳನ್ನು ಸಸ್ಯಹಾರಿಗಳನ್ನಾಗಿ ಪರಿವರ್ತಿಸುವುದು ಎಂದರೆ; ಶ್ರೇಷ್ಠತೆಯ ವ್ಯಸನವನ್ನು ತುಂಬಿಕೊಂಡು ನಾವು ಮೇಲು ಜಾತಿಯವರಿಗಿಂತಲೂ ಶ್ರೇಷ್ಠವೆಂತಲೊ, ಸಮಾನವೆಂತಲೋ ಸಾಧಿಸಲು ಸ್ಪರ್ಧೆಗೆ ನಿಂತದ್ದು ಚರಿತ್ರೆಯಲ್ಲಿವೆ. ಮೂಲತಃ ಶರಣ ಚಳುವಳಿಯಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದರು, ಅನಂತರದಲ್ಲಿ ಅವರ ಆಲೋಚನಾ ಕ್ರಮದಲ್ಲಿ ಬದಲಾವಣೆಗಳಾಗಿ, ಆಲೋಚನೆಗಳನ್ನು ಹೇರುವುದಕ್ಕಿಂತ ಸೃಷ್ಟಿಕ್ರಿಯೆಯಂತೆ ಸಾಗಬೇಕಿದೆ ಎನ್ನುವುದು ಮನವರಿಕೆಯಾದಾಗ ಸಾಮಾನ್ಯ ಜನತೆಯ ಕಾಯಕ ಪ್ರತಿನಿಧಿತ್ವದ ಧಾರಣೀಕರಣವನ್ನು ಮಾಡಿಕೊಂಡು ಮಾಂಸಹಾರಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ವೃತ್ತಿಗಳಿಗೆ ಮಾನ್ಯತೆ ನೀಡಿದ್ದು ನಮ್ಮ ಕಣ್ಣೆದುರಿಗಿದೆ. ‘ಕೈಯಲ್ಲಿ ಕತ್ತಿ ಬಲದ ಕೈಯಲ್ಲಿ ಮಾಂಸ. ..’ ಅದಕ್ಕೆ ಬಸವಣ್ಣನವರ ಈ ವಚನ ಸಾಕ್ಷಿಯಾಗುತ್ತದೆ. ಇದಕ್ಕೆ ಸಂಬಂಧಿಸಿದ ಪೂರಕ ವಚನಗಳು ಇವೆ. ಈ ಚಿಂತನೆ ಬಹುತೇಕ ಬುದ್ಧನ ಚಿಂತನೆಯ ಮುಂದುವರಿಕೆಯ ಕ್ರಮವೇ ಆಗಿದೆ.
ಈ ಕ್ರಮವನ್ನು ತಕ್ಕಮಟ್ಟಿಗೆ ಸಾಹಿತ್ಯ ಸಮ್ಮೇಳನ ಪ್ರಾಥಮಿಕ ಹಂತದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಆಹಾರ ಹೇರಿಕೆಯ ನೀತಿ ಸರಿಯಲ್ಲ ಎನ್ನುವುದನ್ನು ಪರೋಕ್ಷವಾಗಿ ಸಾರಿದೆ ಮತ್ತು ಅನ್ನಭೇದ ನೀತಿ ನಾವು ಒಪ್ಪುವುದಿಲ್ಲ ಎಂದು ಹೇಳಿದಂತಾಗಿದೆ. ಭಾರತೀಯ ಚರಿತ್ರೆಯಲ್ಲಿಯೇ ಈ ನಿರ್ಣಯ ಚಾರಿತ್ರಿಕವಾದುದಾಗಿದೆ. ಅನ್ನಭೇದ ನೀತಿಯನ್ನು ಮುರಿದು, ಅವರವರ ಅನ್ನ ಅವರವರದು ಎನ್ನುವ – ಅನ್ನ ಮಾನ್ಯ ನೀತಿ ಬಳಕೆಗೆ ತಂದಂತಾಗಿದೆ. ಹೀಗಾಗಿ ಸಮ್ಮೇಳನದ ಎಲ್ಲ ರೂವಾರಿಗಳಿಗೂ ಒಂದು ಸೆಲ್ಯೂಟ್ ಸಲ್ಲಿಸಲೇಬೇಕಿದೆ.
ಅವರವರ ಅನ್ನವನ್ನು ಒಂದೇ ಟೇಬಲ್ ನಲ್ಲಿ ಕುಳಿತು ಎಲ್ಲರೂ ಊಟ ಮಾಡುವ ಕಾಲ ಬಂದಾಗ ಅದು ದೊಡ್ಡ ಕ್ರಾಂತಿಕಾರಕ ಬದಲಾವಣೆ ಎಂದೇ ಪರಿಗಣಿಸಬೇಕಾಗುತ್ತದೆ. ಅದಕ್ಕೆ ಸಮ್ಮೇಳನದ ‘ಮೊಟ್ಟೆ ಮೊದಲಾದದ್ದು ಕೋಳಿ ನಂತರ ಹುಟ್ಟಿದ್ದು’ ಎನ್ನುವ ತತ್ವಕ್ಕೆ ಬಂದಂತಾಗಿದೆ! ಕುವೆಂಪು ಅವರು ಹೇಳುವ ಹಾಗೆ ‘ತೃಣದಿಂದಲೇ ಮಹತ್ ಸಿದ್ಧಿಸಾಧ್ಯ’ ಎನ್ನುವ ಮಾತು ಈ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಂಸ್ಕೃತಿಯನ್ನು ಮುರಿದು ಕಟ್ಟುವುದು ಎಂದರೆ ಇದೇ ಆಗಿದೆ. ಇದೆಲ್ಲವೂ ಪ್ರಜಾಪ್ರಭುತ್ವದ ವಿಚಾರಗಳ ಜೊತೆಗೆ ಸಾಗುತ್ತಿರುವುದು ಮಹತ್ವದ ನಡೆಯಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಗೆಲುವಾಗಿದೆ.




