ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟಕರ. ಆದರೆ ಪ್ರತಿಯೊಬ್ಬರಿಗೂ ಕೈಯಲ್ಲಿ ಉದ್ಯೋಗ ಸಿಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸ್ವ ಉದ್ಯೋಗ ಯೋಜನೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ನಿರುದ್ಯೋಗಿಗಳಿಗೆ ಒದಗಿಸಿಕೊಡಿ ಎಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀದಿ ಬದಿ ವ್ಯಾಪರಿಗಳಿಗೆ ಪಿ.ಎಂ.ಸ್ವನಿಧಿ ಯೋಜನೆಯಡಿ ಮೊದಲ ಬಾರಿಗೆ ರೂ 10,000 ನಂತರ 20,000 ಮೂರನೇ ಬಾರಿಗೆ 50,000ರೂ ಸಾಲ ನೀಡಬಹುದು ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಿಗೆ ತಲುಪಿಸಿ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಯೋಜನೆ ಸಿದ್ಧಪಡಿಸಿ ಕಳುಹಿಸಿಕೊಡಬೇಕು. ಅಧಿಕಾರಿಗಳು ವಿವಿಧ ಯೋಜನೆಯಡಿ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕಲ್ಪಿಸಿಕೊಟ್ಟರೆ ಅವರ ಜೀವನ ಕಟ್ಟಿ ಕೊಟ್ಟಂತೆ ಎಂದರು.
ಜಿಲ್ಲೆಯಲ್ಲಿ ಸ್ಥಳ ಲಭ್ಯವಿದ್ದು, ಸ್ಚಂತ ಕಟ್ಟಡವಿಲ್ಲದ ಅಂಗನವಾಡಿಗಳ ಪಟ್ಟಿ ಮಾಡಿ ನೀಡಿದರೆ. ಅಂಗನವಾಡಿ ನಿರ್ಮಾಣಕ್ಕೆ ಬೇಕಿರುವ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಕಳೆದ ಬಾರಿ ದಿಶಾ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ದಿಶಾ ಸಭೆಯನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಪ್ರಸ್ತುತವಾಗಿರುವ ಅನೇಕ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಉಂಟು ಮಾಡಬೇಕಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಜನರಿಗೆ ದೊಡ್ಡ ಮಟ್ಟದ ನೆರವನ್ನು ನೀಡಲು ಮುಂದೆ ಇದೆ. ಕೇವಲ ಭತ್ತ, ಕಬ್ಬು ಬೆಳೆಯನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸಬಲರಾಗುವುದಿಲ್ಲ. ಬೆಳೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾರ್ವಜನಿಕರ ಸಹಕಾರದಿಂದ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲೆಯಲ್ಲಿ ನೈರುತ್ಯ ಮನ್ಸೂನ್ ನಲ್ಲಿ 59 ಮನೆ ಹಾನಿಯಾಗಿದ್ದು, ಪೂರ್ಣಮನೆ ಹಾನಿಯಾದವರಿಗೆ 1,20,000 ರೂ ಪರಿಹಾರವನ್ನು, ಶೇ. 50% ರಿಂದ 75 % ಮನೆ ಹಾನಿಗೆ 50,000 ರೂ, ಶೇ. 20 ರಿಂದ 50% ಮನೆ ಹಾನಿಗೆ 30,000 ರೂ ಹಾಗೂ 15% ರಿಂದ 20% ಮನೆಹಾನಿಯಾದವರಿಗೆ 6500 ರೂ ಪರಿಹಾರವನ್ನು ನೀಡಲಾಗಿದೆ. ಬೆಳೆ ಹಾನಿಯಾದ ರೈತರಿಗೆ ಒಟ್ಟಾರೆ 5,74,334 ರೂ ಪರಿಹಾರವನ್ನು ನೀಡಲಾಗಿದೆ ಎಂದರು.
ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2019 – 20ನೇ ಸಾಲಿನಿಂದ 2023- 24ನೇ ಸಾಲಿನವರೆಗೆ ಒಟ್ಟಾರೆ 2906.69 ಲಕ್ಷಗಳ ಅಂದಾಜಿನಲ್ಲಿ 350 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಅದರಲ್ಲಿ, 228 ಕಾಮಗಾರಿ ಪೂರ್ಣಗೊಂಡಿವೆ ಎಂದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹನಕೆರೆ ಮತ್ತು ಗೌಡನಹಳ್ಳಿಯ ಬಳಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಪ್ರಧಾನ ಕಚೇರಿಯಿಂದ ಅನುಮೋದನೆ ದೊರೆತಿದ್ದು, ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಹಾಗೂ ಗಣಂಗೂರಿನ ಟೋಲ್ ಬಳಿ ಇರುವ ಎರಡೂ ಬದಿಯ ಶೌಚಾಲಯದ ಕಾಮಗಾರಿ ಪೂರ್ಣವಾಗಿದೆ ಎಂದು ಹೇಳಿದರು.
ಪ್ರಸ್ತುತ 49.452 ಟಿ ಎಂ ಸಿ (ಶೇ. 100%) ನೀರು ಲಭ್ಯ: ಡಾ.ಕುಮಾರ
ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, 2024 ನೇ ಸಾಲಿನಲ್ಲಿ ಅಕ್ಟೊಬರ್ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೆ ಮುಂಗಾರು ಮಳೆಯು ವಾಡಿಕೆ ಮಳೆಗಿಂತ 304 ಮಿಲಿ ಮೀಟರ್ ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಎಲ್ಲಾ ಜಲಾಶಯಗಳಲ್ಲಿ 96.605 ಟಿ ಎಂ ಸಿ (ಶೇ. 84% ರಷ್ಟು)ನೀರು ಲಭ್ಯವಿದ್ದು, ಹೇಮಾವತಿ – 26.268 ಟಿ ಎಂ ಸಿ (ಶೇ. 70.80%), ಹಾರಂಗಿ – 3.725 ಟಿ ಎಂ ಸಿ ( ಶೇ. 43.82%), ಕೆ ಆರ್ ಎಸ್ ಅಣೆಕಟ್ಟು – 49.452 ಟಿ ಎಂ ಸಿ (ಶೇ. 100%), ಕಬಿನಿ – 17.16 ಟಿ ಎಂ ಸಿ (ಶೇ. 87.91%) ರಷ್ಟು ನೀರು ಲಭ್ಯವಿದೆ. ಕಳೆದ 10 ವರ್ಷಗಳ ದತ್ತಾಂಶವನ್ನು ಪರಿಶೀಲನೆ ಮಾಡಿದಾಗ ಡಿಸೆಂಬರ್ ಮಾಹೆಯಲ್ಲಿ ಕೆ ಆರ್ ಎಸ್ ಆಣೆಕಟ್ಟಿನಲ್ಲಿ 124 ಅಡಿ ನೀರು ತುಂಬಿರುವುದು ಇದೇ ಮೊದಲು. ಆಗಸ್ಟ್ ಮಾಹೆಯಿಂದ ಡಿಸೆಂಬರ್ ವರೆಗೆ ಸತತವಾಗಿ ನೀರನ್ನು ರೈತರ ಬೆಳೆಗೆ ಹರಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ 2,558 ಅಂಗನವಾಡಿಗಳಿದ್ದು, 237 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಿದೆ. ಇದರಲ್ಲಿ ಬಹುತೇಕ ಅಂಗನವಾಡಿಗಳು ನಗರ ಪ್ರದೇಶದಲ್ಲಿರುತ್ತದೆ. ನಗರ ಪ್ರದೇಶದಲ್ಲಿ ಸಿ.ಎ ನಿವೇಶನ ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಅವರು ಮಾತನಾಡಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮದಡಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೊಲೀಸ್ ಸೇವೆ, ಕಾನೂನು ಸೇವೆ, ಆಪ್ತ ಸಮಾಲೋಚನೆ ಮತ್ತು ತಾತ್ಕಾಲಿಕ ಆಶ್ರಯವನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರವು 2015 – 16ನೇ ಸಾಲಿನಿಂದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ದೀರ್ಘಾವಧಿ ಆಶ್ರಯದ ಅವಶ್ಯಕತೆ ಇರುವ ಮಹಿಳೆಯರಿಗಾಗಿ ಸ್ವಧಾರಗೃಹಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಮನರೇಗಾ, ಆವಾಸ್, ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಬಗ್ಗೆ ಸಭೆಗೆ ಸ್ವವಿವರವಾಗಿ ವಿವರಿಸಿದರು.
ಸಭೆಯಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಶಾಸಕ ಹೆಚ್ ಟಿ ಮಂಜು, ಮಾಜಿ ಸಚಿವ ಹಾಗೂ ನಾಮ ನಿರ್ದೇಶಿತ ಸದಸ್ಯ ಸಿ ಎಸ್ ಪುಟ್ಟರಾಜು, ನಾಮ ನಿರ್ದೇಶಿತ ಸದಸ್ಯ ಅನ್ನದಾನಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ ಬಿ ಸಿ ಶಿವಾನಂದಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




