ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯಬೇಕು. ರಾಜ್ಯ ಸರ್ಕಾರ 700 ರೂ ಪ್ರೋತ್ಸಾಹ ಧನ ನೀಡಿ ಕ್ವೀಂಟಾಲ್ ಭತ್ತಕ್ಕೆ 3000 ರೂ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಭರತರಾಜ್ ಸರ್ಕಾರಕ್ಕೆ ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೀಘ್ರ ಭತ್ತ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ಎಂ ಎಸ್ ಪಿ ಜೊತೆಗೆ ಹೆಚ್ಚುವರಿಯಾಗಿ 700 ರೂ. ನೀಡುವ ಮೂಲಕ ಕ್ವಿಂಟಲ್ ಭತ್ತಕ್ಕೆ ಕನಿಷ್ಠ 3000 ರೂಗಳ ಬೆಂಬಲ ಬೆಲೆ ನೀಡಬೇಕು ಹಾಗೂ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗಾರರ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.
ಸಹಜವಾಗಿ ಜೂನ್ ಜುಲೈನಲ್ಲಿ ಮುಂಗಾರು ಪ್ರಾರಂಭವಾಗಿ ಭತ್ತದ ನಾಟಿ ಮಾಡುತ್ತಾರೆ ನಂತರ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಭತ್ತ ಕಟಾವು ಮಾಡುತ್ತಾರೆ. ಕೆಲವು ಸಲ ಮುಂಗಾರು ವಿಳಂಬವಾದರೆ ಜುಲೈ ಆಗಸ್ಟ್ ನಲ್ಲಿ ನಾಟಿ ಮಾಡಿ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಕಟಾವು ಮಾಡುತ್ತಾರೆ ಈ ಪರಿಸ್ಥಿತಿಗೆ ಅನುಗುಣವಾಗಿ ನವೆಂಬರ್ ತಿಂಗಳಲ್ಲೆ ಭತ್ತ ಖರೀದಿ ಕೇಂದ್ರ ತೆರೆಯಬೇಕಾಗಿತ್ತು. ಆದರೆ ಜನವರಿ ಬಂದರು ಭತ್ತ ಖರೀದಿ ಕೇಂದ್ರ ತೆರೆಯಲಿಲ್ಲ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ನೀಡುತ್ತಿಲ್ಲ ಭತ್ತ ಖರೀದಿ ಏಜೆನ್ಸಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಕ್ಕೆ ವಹಿಸಿದ್ದಾರೆ. ಅವರು ಖರೀದಿಗೆ ಸಂಬಂಧಪಟ್ಟಂತೆ ಸಾಫ್ಟ್ವೇರ್ ಇನ್ನೂ ತಯಾರಿಸಿಲ್ಲ. ಸಾಗಾಣಿಕೆಗೆ ಟೆಂಡರ್ ಆಗಿಲ್ಲ ಹಮಾಲಿಗಳು ನಿಗದಿಯಾಗಿಲ್ಲ ಎಂದು ಹೇಳುತ್ತಾರೆ. ಈ ವ್ಯವಸ್ಥೆಯನ್ನು ನೋಡಿದರೆ ಭತ್ತ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ರಾಜ್ಯ ಸರ್ಕಾರ ದೂಡುತಿದೆ ಎಂದು ಆರೋಪಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ. ಮಹದೇವು, ಮುಖಂಡರಾದ ಹಿಪ್ಜುಲ್ಲಾ,ಸತೀಶ್ ಗುಳಘಟ್ಟ, ಉಪಸ್ಥಿತರಿದ್ದರು.




