ಕೃಷ್ಣರಾಜಸಾಗರ ಅಣೆಕಟ್ಟೆಯಿಂದ 500 ಎಂಎಲ್ಡಿ ನೀರು ಶಾಶ್ವತವಾಗಿ ಬೆಂಗಳೂರಿಗೆ ಕೊಂಡೊಯ್ಯವ ಯೋಜನೆಯು ಮಂಡ್ಯ ಜಿಲ್ಲೆಯ ವಿ.ಸಿ ನಾಲಾ ವ್ಯಾಪ್ತಿಯ ಕೊನೆ ಭಾಗರ ರೈತರಿಗೆ ಮರಣ ಶಾಸನವಾಗಲಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಮೂಲಕ ಬೆಂಗಳೂರಿಗೆ ನೀರು ಕೊಂಡೊಯ್ಯಲು 6939 ಕೋಟಿ ರೂ.ಗಳ ಯೋಜನೆ ತಯಾರಿಸಿ ಭೂ ಸ್ವಾಧಿನಕ್ಕೂ ಆದೇಶ ಹೊರಡಿಸಲಾಗಿದೆ. ಸದರಿ ಯೋಜನೆಯಿಂದ ಮದ್ದೂರು, ಮಳವಳ್ಳಿ, ನಾಗಮಂಗಲ ತಾಲೂಕಿನ ಕೊಪ್ಪ ಹೋಬಳಿ ಭಾಗದ ಜಮೀನುಗಳಿಗೆ ಸರಬರಾಜಾಗುತ್ತಿರುವ ನೀರು ಎರಡನೇ ಬೆಳೆಗೆ ದೊರೆಯದಂತಾಗುತ್ತದೆ ಎಂದು ಹೇಳಿದರು.
ಬೆಂಗಳೂರಿಗೆ ನೀರು ಕೊಡಬೇಡಿ ಎನ್ನುವುದಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೇನೆ, ಬೆಂಗಳೂರಿಗೆ ಕುಡಿಯುವ ನೀರು ಬಹಳ ಮುಖ್ಯ. ಆದರೆ ಪರ್ಯಾಯ ಮೂಲಗಳಿಂದ ನೀರು ಉಳಿಸಿ, ಬೆಂಗಳೂರಿಗೆ ನೀಡಿ ಎಂದು ಸಲಹೆ ನೀಡಿದರು.
ಐಶ್ವರ್ಯಗೌಡ ಮಾಡಿರುವುದೆಲ್ಲವೇ 420 ಕೆಲಸ
ಐಶ್ವರ್ಯಗೌಡ ನನ್ನ ಜೊತೆ ವ್ಯವಹಾರ ನಡೆಸಿರುವುದಾಗಿ ಹೇಳಿಕೊಂಡಿರುವುದಕ್ಕೆ ಮಾಧ್ಯಮಗಳ ಮುಂದೆ ಸಾಕ್ಷಿ ಒದಗಿಸಲಿ, ಯಾವುದೇ ಆರೋಪ ಮಾಡಬೇಕಾದರೆ ಅದರಲ್ಲಿ ತಿರುಳಿರಬೇಕು. ತಿರುಳಿಲ್ಲದೇ, ಸಾಕ್ಷಿ ಒದಗಿಸದೇ ಆರೋಪ ಮಾಡಿದರೆ, ಮಾನ ನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಅನ್ನದಾನಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಐಶ್ವರ್ಯಗೌಡ ಮಾಡಿರುವುದೆಲ್ಲವೇ 420 ಕೆಲಸ, ಈ ಸಂಬಂಧ ಪ್ರಕರಣ ದಾಖಲಾಗಿದೆ. ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಎಲ್ಲರನ್ನೂ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದೀರಿ. ನನ್ನೊಂದಿಗೆ ವ್ಯವಹಾರ ಮಾಡಿದ್ದೇನೆ ಎಂದು ಹೇಳಿದ್ದು, ಜನ ತಪ್ಪು ತಿಳಿಯಲಿದ್ದಾರೆ ಎಂದರು.
ಕಾಂಗ್ರೆಸ್ ನದಿಗೆ ಮೇಕೆದಾಟು ಕಡೆಗೆ ಪಾದಯಾತ್ರೆಯನ್ನು ಮಾಡಿ, 1,000 ಕೋಟಿ ರೂ ಮೀಸಲಿಟ್ಟಿದ್ದು, ಇದುವರೆಗೂ ಏಕೆ ಕಾಂಗ್ರೆಸ್ ಸರ್ಕಾರ ಮೇಕೆದಾಟು ನಿರ್ಮಿಸಿಲ್ಲ, ಮೇಕೆದಾಟು ನಿರ್ಮಿಸಿದ್ದರೆ 60 ಟಿಎಂಸಿ ನೀರು ಉಳಿಯುತ್ತಿತ್ತು. ಅಲ್ಲಿಂದಲೇ ನೀರು ಬೆಂಗಳೂರಿನಗೆ ನೀಡಬಹುದಿತ್ತು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕೃಪಾ ಕಟಾಕ್ಷದಿಂದ ಒಂದು ಬೆಳೆಯನ್ನಾದರೂ ಬೆಳೆದು ನೆಮ್ಮದಿಯಿಂದಿರುವ ಪರಿಸ್ಥಿತಿಯಿದ್ದು, ಇದನ್ನು ಹಾಳು ಮಾಡಿ ಹುರುಳಿ, ರಾಗಿ, ನವಣೆ ಬೆಳೆಯುವ ಸ್ಥಿತಿಯನ್ನು ತಂದೊಡ್ಡಬೇಡಿ. ಮಂಡ್ಯ ರೈತರಿಗೆ ತೆಂಗು, ಹೈನುಗಾರಿಕೆ, ರೇಷ್ಮೆ ಆದಾಯದ ಮೂಲಗಳಾಗಿದ್ದು, ರೈತರ ಈ ಆದಾಯದ ಮೂಲಗಳೂ ಹಾಳಾದಲ್ಲಿ ಕೊನೆ ಭಾಗದ ಜನ ಮತ್ತೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕೆಆರ್ಎಸ್ ನಿರ್ಮಾಣವಾದಾಗಿನಿಂದ ಇದುವರೆಗೆ ಒಂದೂವರೆ ತಿಂಗಳು ಸತತವಾಗಿ 124 ಅಡಿ ನೀರು ಸಂಗ್ರಹ ಹೊಂದಿರುವ ಇತಿಹಾಸ ಸೃಷ್ಠಿಸಿದ್ದು, ಈಗಲೂ ಕಡೇ ಭಾಗದ ರೈತರು ನೀರಿಗಾಗಿ ಪ್ರತಿಭಟನೆ ಮಾಡುವುದನ್ನು ಕಾಣುತ್ತಿದ್ದೇವೆ. 124 ಅಡಿ ನೀರಿದ್ದರೂ ವಿ.ಸಿ. ನಾಲೆಯ ಕೊನೆ ಭಾಗಕ್ಕೆ ಏಕೆ ನೀರು ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈಗ 500 ಎಂಎಲ್ಡಿ ನೀರು ಬೆಂಗಳೂರಿಗೆ ನೀಡುವುದಾದರೆ, ಮುಂದೆ ಈ ಭಾಗದ ರೈತರ ಪರಿಸ್ಥಿತಿ ಏನಾಗಬೇಕು ? ಇಲ್ಲಿನ ರೈತರು ಇನ್ನೂ ಧರಣಿ ಮಾಡಿ, ನೀರಿಗಾಗಿ ಬಿಕ್ಷೆ ಬೇಡಬೇಕೇ? ಸರ್ಕಾರ ಈ ಯೋಜನೆ ಕೈ ಬಿಡಬೇಕು. ಇಲ್ಲವಾದಲ್ಲಿ ಹೋರಾಟಗಳನ್ನು ಮಾಡಬೇಕಿದೆ ಎಂದು ಎಚ್ಚರಿಸಿದರು.
ಈಗಲಾದರೂ ರೈತರು ನಿದ್ರೆ ಮಾಡದೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಮುಂದಿನ ಪೀಳಿಗೆ ನಷ್ಟವನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ಈ ಯೋಜನೆ ಪ್ರಾರಂಭವಾಗದಂತೆ ಎಚ್ಚರವಹಿಸಬೇಕು. ಕಾಂಗ್ರೆಸ್ ಸರ್ಕಾರವೂ ನ್ಯಾಯಾಲಯದ ಮೂಲಕ ಹೋರಾಟ ಮಾಡಿ ಮೇಕೆದಾಟು ಯೋಜನೆ ಜಾರಿಗೆ ತರಲಿ. ಇದರಿಂದ ಬೆಂಗಳೂರಿನ ಸಮಸ್ಯೆ ಪರಿಹಾರ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಈಗ ನೇರವಾಗಿ ಕೆಆರ್ಎಸ್ನಿಂದ ನೀರು ಒದಗಿಸಲು ಮುಂದಾಗಿದ್ದಾರೆ. ಬೆಂಗಳೂರಿಗೆ ನೀರು ಕೊಡಬೇಡಿ ಎಂದು ಹೇಳಲಾಗದು, ಇದರೆ ಇತರ ನದಿಗಳ ಅಣೆಕಟ್ಟು ಮೂಲಗಳಿಂದ ನೀರು ಕೊಡಲಿ. ನಮಗೆ ಮೀಸಲಿಟ್ಟ ನೀರು ಕೊಂಡೊಯ್ದರೆ, ಮಂಡ್ಯ ಜಿಲ್ಲೆಯ ರೈತರ ಬದುಕೇನಾಗಬೇಕೆಂದು ಪ್ರಶ್ನಿಸಿದರು.
ಈಗಾಗಲೇ ಬೆಂಗಳೂರಿಗೆ ಹಲವು ಯೋಜನೆಗಳ ಮೂಲಕ ನೀರು ನೀಡಲಾಗುತ್ತಿದೆ. ನಾಲ್ಕನೇ ಮತ್ತು ಐದನೇ ಯೋಜನೆಗೆ ನೀರು ನೀಡಲಾಗುತ್ತಿದ್ದು, ಈಗ ಆರನೇ ಯೋಜನೆಗೂ ನೀರು ನೀಡುವುದಾದರೆ, ಮಂಡ್ಯ ಜಿಲ್ಲೆಯ ರೈತರ ಪರಿಸ್ಥಿತಿ ಏನು ? ಡಿ.ಕೆ.ಶಿವಕುಮಾರ್ ಅವರು ಏನೋ ಮಾಡಲು ಹೋಗಿ ಮತ್ತೇ ಏನೋ ಮಾಡುವ ಪರಿಸ್ಥಿತಿಯಿಂದ ದೂರವಿರಲಿ ಎಂದು ಕಿವಿ ಮಾತು ಹೇಳಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮ್ ಇದ್ದರು




