ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನಾಭರಣ ಅಂಗಡಿ ಮಾಲೀಕರಿಗೆ 9 ಕೋಟಿ ರೂ.ಗಳಷ್ಟು ವಂಚನೆ ಮಾಡಿರುವ ಐಶ್ವರ್ಯ ಗೌಡ ಮಂಡ್ಯದಲ್ಲೂ ವಂಚಿಸಿರುವ ಹಿನ್ನಲೆಯಲ್ಲಿ ಆಕೆಯ ಮೇಲೆ ಮಂಡ್ಯದ ಪೂರ್ವ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಐಶ್ವರ್ಯ ಗೌಡ ಅಲಿಯಾಸ್ ನವ್ಯಶ್ರೀ, ಆಕೆಯ ಪತಿ ಕೆ.ಎನ್.ಹರೀಶ್ ಹಾಗೂ ಆಕೆಯ ತಮ್ಮ ಹಳ್ಳಿ ಮಂಜುನಾಥ್ ಸೇರಿ ನನಗೆ ಹಾಗೂ ನನ್ನಕ್ಕನಿಗೆ ಚಿನ್ನಾಭರಣ ಸೇರಿ ಒಟ್ಟು 62 ಲಕ್ಷ ರೂ.ಗಳಷ್ಟು ವಂಚಿಸಿದ್ದಾರೆಂದು ಆರೋಪಿಸಿ ಮಂಡ್ಯ ನಗರದ ಗುತ್ತಲು ರಸ್ತೆಯಲ್ಲಿರುವ ವಿನಾಯಕ ಎಲೆಕ್ಟ್ರಿಕಲ್ ಸರ್ವೀಸ್ ಅಂಗಡಿ ಮಾಲೀಕ ಎಂ.ಎಲ್.ರವಿಕುಮಾರ್ ಮಂಡ್ಯದ ಪೂರ್ವ ಪೋಲಿಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಎಫ್ಐಆರ್ ನಲ್ಲಿ ಇರೋದೇನು ?
ಮಂಡ್ಯದ ಗುತ್ತಲು ನಿವಾಸಿಯಾದ ಎಂ.ಎಲ್.ರವಿಕುಮಾರ್ ಅವರು ನೀಡಿರುವ ದೂರಿನಲ್ಲಿರುವ ಪ್ರಕಾರ,
ನನ್ನ ಸಂಬಂಧಿ ಅರ್ಪಿತಾ ಎಂಬುವರು ಗುತ್ತಲು ಗ್ರಾಮದಲ್ಲಿ ಸೋಲಾರ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. 2016 ರಲ್ಲಿ ಕಿರುಗಾವಲು ಗ್ರಾಮದ ಹಳ್ಳಿ ಮಂಜುನಾಥ ಎಂಬುವವರು ನನ್ನ ಸಂಬಂಧಿ ಅರ್ಪಿತಾರವರ ಅಂಗಡಿಗೆ ಹೋಗಿ ಅವರ ಮನೆಗೆ ಸೋಲಾರ್ ಖರೀದಿ ಮಾಡಿ ಹಾಕಿಸಿಕೊಂಡಿರುತ್ತಾರೆ. ಆ ಸಮಯದಲ್ಲಿ, ಹಳ್ಳಿ ಮಂಜುನಾಥ ಮತ್ತು ಅವರ ಅಕ್ಕ ಐಶ್ವರ್ಯಗೌಡ @ ನವ್ಯಶ್ರೀ ಅವರು ಅರ್ಪಿತಾಳ ಮನೆಗೆ ಹಲವು ಬಾರಿ ಬಂದು ಹೋಗುತ್ತಿದ್ದ ಸಂದರ್ಭದಲ್ಲಿ ನನಗೂ ಪರಿಚಯವಾದರು. ಆ ಸಂದರ್ಭದಲ್ಲಿ, ಐಶ್ವರ್ಯಗೌಡ ತಾನು ಸಂಸದರಾದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿ ನನಗೆ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರ್ ಸ್ವಾಮಿಯ ಬಹಳ ಪರಿಚಿತರಾಗಿದ್ದು, ನಿಮಗೆ ಅವರ ಕಡೆಯಿಂದ ಸಹಾಯ ಬೇಕಾದರೆ ಹೇಳಿ ಮಾಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದರು. ನಂತರ ಐಶ್ವರ್ಯಗೌಡ ರವರು ನಮ್ಮ ಮನೆಗೆ ಹೋಗಿ ಬಂದು ಮಾಡುತ್ತಿದ್ದು ನಮ್ಮ ಕುಟುಂಬಕ್ಕೆ ಆತ್ಮೀಯರಾದರು.ಒಂದು ದಿನ ಐಶ್ವರ್ಯಗೌಡ ಅವರು ನಮ್ಮ ಮನೆಗೆ ಬಂದು ತಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ತನಗೆ ಸಾಲವಾಗಿ ಹಣ ಕೊಟ್ಟರೆ, ಆ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಒಂದೆರಡು ವರ್ಷದಲ್ಲಿಯೇ ಅಧಿಕ ಲಾಭ ಮಾಡಿ ನಿಮ್ಮ ಹಣಕ್ಕೆ ಹೆಚ್ಚಿಗೆ ಹಣ ಸೇರಿಸಿ ವಾಪಸ್ಸು ಕೊಡುವುದಾಗಿ ನಂಬಿಸಿದ್ದರು.
ಅವರ ಮಾತಿನಂತೆ ನಾನು 2016 ರಿಂದ 2019 ರ ವರೆಗೆ ಹಂತ ಹಂತವಾಗಿ ಒಟ್ಟು 40 ಲಕ್ಷ ರೂಪಾಯಿಗಳಷ್ಟು ಹಣವನ್ನು ಐಶ್ವರ್ಯ ಗೌಡ ಸಾಲವಾಗಿ ಪಡೆದುಕೊಂಡಿದ್ದರು. ಅವರು ಸಾಲ ಪಡೆದುಕೊಳ್ಳುವ ಹಲವು ಸಂದರ್ಭಗಳಲ್ಲಿ ಆಕೆಯ ಗಂಡ ಹರೀಶ್ ಮತ್ತು ಕೆಲವು ಸಾರಿ ಆಕೆಯ ತಮ್ಮ ಮಂಜುನಾಥ್ ಕೂಡ ಜೊತೆಯಲ್ಲಿದ್ದರು. ನಾನು ಹಣ ನೀಡುವ ಸಂದರ್ಭಗಳಲ್ಲಿ ನನ್ನ ಹೆಂಡತಿ ಮತ್ತು ನನ್ನ ಸಂಬಂಧಿಕರುಗಳು ಇದ್ದರು. ಆದರೆ ನಂತರದಲ್ಲಿ ಐಶ್ವರ್ಯಗೌಡ ನಮ್ಮಿಂದ ಪಡೆದುಕೊಂಡಿರುವ ಹಣವನ್ನು ನಮಗೆ ನಿಗದಿತ ಸಮಯದಲ್ಲಿ, ವಾಪಸ್ಸು ಕೊಡದೆ ಇದ್ದಾಗ ನಾನು ಅನೇಕ ಸಾರಿ ಬೆಂಗಳೂರಿನಲ್ಲಿರುವ ಅವರ ಮನೆಗೆ ಹೋಗಿ ನನ್ನ ಕಷ್ಟಗಳನ್ನು ಹೇಳಿಕೊಂಡು ಮನೆಯನ್ನು ಅಡಮಾನ ಮಾಡಿ ಹಣ ನೀಡಿದ್ದೇನೆ, ವಾಪಸ್ಸು ಕೊಡು ಮನೆ ಬಿಡಸಬೇಕು ಎಂದು ಕೇಳಿದಾಗಲೆಲ್ಲಾ ಇಂದು ನಾಳೆ ಎಂದು ಸತಾಯಿಸುತ್ತಿದ್ದು ಹಣವನ್ನು ವಾಪಸ್ಸು ನೀಡಿರುವುದಿಲ್ಲ. ಮತ್ತು ಅಕೆಯ ಗಂಡ ಹರೀಶ್ ಮತ್ತು ಆಕೆಯ ತಮ್ಮ ಮಂಜುನಾಥ್ ರವರುಗಳನ್ನು ಬೇಟಿ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡುವಂತೆ ಕೇಳಿದ್ದು ಅವರು ಸಹ ಐಶ್ವರ್ಯಗೌಡಳ ಜೊತೆ ಷಾಮೀಲಾಗಿದ್ದು ನನಗೆ ಹಣವನ್ನು ವಾಪಸ್ಸು ನೀಡಿರುವುದಿಲ್ಲ. ಅಲ್ಲದೆ ಹಣ ಕೇಳಿದಾಗಲೆಲ್ಲಾ, ನನಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ, ಐಶ್ವರ್ಯಗೌಡಳು ನಮ್ಮ ಮನೆಗೆ ಬಂದು ತಾನು ರಿಯಲ್ ಎಸ್ಟೆಟ್ ಮಾಡುತ್ತಿರುವುದಾಗಿ ನಂಬಿಸಿ ನನ್ನಿಂದ ಹಂತ ಹಂತವಾಗಿ 40 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದುಕೊಂಡು ವಾಪಸ್ಸು ಕೊಡದೆ ವಂಚಿಸಿದ್ದಾರೆ.
ಐಶ್ವರ್ಯಗೌಡ ಅವರು ನನ್ನಿಂದ ಹಣ ಪಡೆದುಕೊಳ್ಳುವ ಸಮಯದಲ್ಲಿಯೇ ನನಗೆ ಇನ್ನು ಯಾರಾದರೂ ಹಣವನ್ನು ಇನ್ವೆಸ್ಟ್ ಮಾಡುವವರಿದ್ದರೆ ತಿಳಿಸಿ ಅವರಿಗೂ ಲಾಭ ಮಾಡಿಕೊಡುತ್ತೇನೆ ಎಂದು ಹೇಳಿದ್ದರಿಂದ ನಾನು ನನ್ನ ಅತ್ತಿಗೆ ಗುತ್ತಲು ಅರಕೇಶ್ವರ ಬಡಾವಣೆ ನಿವಾಸಿ ಪೂರ್ಣಿಮಾ ಜಿ.ಸಿ. ಕೋಂ ಪ್ರಕಾಶ್ ಅವರನ್ನು ಐಶ್ವರ್ಯಗೌಡಳಿಗೆ ಪರಿಚಯ ಮಾಡಿಕೊಟ್ಟೆ.ಆಗ ಐಶ್ವರ್ಯಗೌಡ ಅವರನ್ನು ನಂಬಿಸಿ ಅವರಿಂದ 2016 ರಿಂದ 2019 ರವರೆಗೆ ಹಂತ ಹಂತವಾಗಿ 100 ಗ್ರಾಂ ಚಿನ್ನದ ಒಡವೆಗಳು ಹಾಗೂ 15 ಲಕ್ಷ ನಗದು ಹಣವನ್ನು ನಮ್ಮ ಮನೆಯಲ್ಲಿಯೇ ಪಡೆದು, ವಾಪಸ್ಸು ಕೊಡದೆ ಅವರಿಗೂ ಮೋಸ ಮಾಡಿರುತ್ತಾರೆ. ಐಶ್ವರ್ಯಗೌಡ ಆಕೆಯ ಪತಿ ಕೆ.ಎನ್.ಹರೀಶ್,ಆಕೆಯ ತಮ್ಮ ಮಂಜುನಾಥ್ ಇವರುಗಳು ಒಳಸಂಚು ರೂಪಿಸಿಕೊಂಡು ನನ್ನನ್ನು ಮತ್ತು ನನ್ನ ಅತ್ತಿಗೆಯವರನ್ನು ನಂಬಿಸಿ ಒಟ್ಟಾರೆಯಾಗಿ 55 ಲಕ್ಷ ರೂ. ನಗದು ಹಣವನ್ನು ಹಾಗೂ ನನ್ನ ಅತ್ತಿಗೆ ಪೂರ್ಣಿಮಾ ಅವರಿಂದ 7 ಲಕ್ಷ ರೂ.ಬೆಲೆಯ 100 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ಇದುವರೆಗೂ ವಾಪಸ್ ನೀಡಿಲ್ಲ.ಹಲವು ಬಾರಿ ಹಣ ಮತ್ತು ಚಿನ್ನ ವಾಪಸ್ ನೀಡುವಂತೆ ಕೇಳಿದರೂ ಕೊಡದೆ ಸತಾಯಿಸಿದ್ದಾರೆ.
ಈ ಹಿನ್ನಲೆಯಲ್ಲಿ ಐಶ್ವರ್ಯ ಗೌಡ, ಆಕೆಯ ಪತಿ ಹರೀಶ್,ತಮ್ಮ ಹಳ್ಳಿ ಮಂಜುನಾಥ್ ಅವರನ್ನು ಬಂಧಿಸಿ ನನಗೆ ನ್ಯಾಯ ಕೊಡಿಸಬೇಕೆಂದು ಗುತ್ತಲು ಬಡಾವಣೆಯ ನಿವಾಸಿ ಎಂ.ಎಲ್.ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.




