ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಸತ್ತಿನಲ್ಲಿ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಜನವರಿ 7ರಂದು ಸ್ವಯಂ ಪ್ರೇರಿತ ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರೈತ ನಾಯಕಿ ಸುನಂದ ಜಯರಾಂ ತಿಳಿಸಿದರು.
ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಹೆಸರಿಗೆ, ಅವರ ವ್ಯಕ್ತಿತ್ವಕ್ಕೆ ಕಳಂಕ ಮಾಡುವ ರೀತಿ ಹೇಳಿಕೆ ನೀಡಿದ್ದು, ಅವರದ್ದು ವಿಕೃತ ಹೀನ ಮನಸ್ಥತಿಯಾಗಿದ್ದು, ಸಂವಿಧಾನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಜ್ಞಾವಂತರು ಹೋರಾಟ ಮಾಡಬೇಕಿದೆ ಎಂದರು.
ಸಂವಿಧಾನ ತಿರುಚುವ, ಬದಲಾಯಿಸುವ ಕೃತ್ಯಕ್ಕೆ ಸ್ಪೂರ್ತಿ ನೀಡುವ ತಳಹದಿ ಹಾಕುವ ಕೆಲಸವನ್ನು ಮನುವಾದಿಗಳು ಮಾಡುತ್ತಿದ್ದು, ಇದನ್ನು ನಾವು ಖಂಡಿಸುವ ಕೆಲಸ ಮಾಡಬೇಕಿದೆ. ಅಮಿತ್ ಶಾ ಹೇಳಿಕೆ ತೀವ್ರತೆಯ ಮಟ್ಟಕ್ಕೆ ಮುಟ್ಟಿದ್ದು, ಅವರ ಮನಸ್ಥಿತಿಯನ್ನು ತೋರುವದರ ಜತೆಗೆ ಅಪಾಯದ ಸುಳಿವು ತೋರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರುನಾಡ ಸೇವಕರು ವಿಭಾಗೀಯ ಸಂಚಾಲಕ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಅಮಿತ್ ಶಾ ಹೀನಾಯ, ಕಳಪೆ ಮಟ್ಟದ ಹೇಳಿಕೆ ವಿರೋಧಿಸಿ, ಕಾಂಗ್ರೆಸ್ ಪಕ್ಷವು ರಸ್ತೆಗಿಳಿದು ಹೋರಾಟ ಮಾಡುವ ನಿರೀಕ್ಷೆ ಮಾಡಿದ್ದೆವು, ಸಂವಿಧಾನ ರಕ್ಷಣೆಯನ್ನು ಕೇವಲ ತೋರಿಕೆಯ ಮಟ್ಟಕ್ಕೆ ಕಾಳಜಿ ತೋರುವ ಕಾಂಗ್ರೆಸ್‌ಗೂ ಬಿಜೆಪಿ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಬಹಿರಂಗವಾಗಿ ಸಂವಿಧಾನ ವಿರೋಧಿಸಿದರೆ, ಕಾಂಗ್ರೆಸ್ ಆಂತರ್ಯವಾಗಿ ಸಂವಿಧಾನ ವಿರೋಧಿಸುತ್ತಿದೆ. ಸಂವಿಧಾನ ರಕ್ಷಿಸುವ ಜವಾಬ್ದಾರಿ ದೇಶ ಪ್ರತಿಯೊಬ್ಬರ ಮೇಲೆ ಇದ್ದು, ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ಜ.7ರಂದು ಮಂಡ್ಯ ನಗರದ ಹಾಗೂ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಬಂದ್‌ಗೆ ಬೆಂಬಲ ಸೂಚಿಸಿ, ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಮುಖಂಡರಾಧ ಲಕ್ಷ್ಮಣ್ ಚೀರನಹಳ್ಳಿ, ಅಂದಾನಿ ಸೋಮನಹಳ್ಳಿ, ಸಿ.ಕುಮಾರಿ, ಗಂಗರಾಜ್ ಹನಕೆರೆ, ಹೆಚ್.ಡಿ.ಜಯರಾಂ, ಎಂ.ವಿ.ಕೃಷ್ಣ ಉಪಸ್ಥಿತರಿದ್ದರು.




