ಗೋ ಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ಪುನೀತ್ ಕೆರೆಹಳ್ಳಿ ಸೇರಿದಂತೆ ಆತನ ಸಹಚರರು 2 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಹಣ ಕೊಡದಿರುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕನಕಪುರ ತಾಲ್ಲೂಕಿನ ಸಾತನೂರು ಬಳಿ ಕಳೆದ ರಾತ್ರಿ 12.30 ನಡೆದಿದೆ.
ಈ ಘಟನೆಯಲ್ಲಿ ಮಂಡ್ಯನಗರದ ನಿವಾಸಿ ಇದ್ರೀಸ್ ಪಾಷಾ (35) ಕೊಲೆಯಾದ ವ್ಯಕ್ತಿ. ಈ ಘಟನೆಗೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಮೇಲೆ ಸಾತನೂರು ಪೊಲೀಸ್ ರಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ನಲ್ಲಿ ಏನಿದೆ
ಮಧ್ಯರಾತ್ರಿ ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟೆಂಪೋವನ್ನು ಅಡ್ಡಗಟ್ಟಿದ ಪುನೀತ್ ಕೆರೆ ಮತ್ತು ಆತನ ಸಹಚರರು ಟೆಂಪೋದಲ್ಲಿದ್ದ ಇದ್ರೀಸ್ ಪಾಷಾ, ಇರ್ಫಾನ್ ಹಾಗೂ ಸಯಿದ್ ಜಾಹೀರ್ ಅವರನ್ನು ಬೆದರಿಕೆ ಹಲ್ಲೆ ನಡೆಸಿ, ನಿಮ್ಮನ್ನು ಬಿಟ್ಟು ಕಳುಹಿಸಲು 2 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆಗ ಮುಸ್ಲಿಂ ಯುವಕರು ಹಣ ನೀಡಲು ನಿರಾಕರಿಸಿದಾಗ ಮಾರಕಾಸ್ತ್ರಗಳಿಂದ ಅಟ್ಟಾಡಿಸಿಕೊಂಡು ಹೋಗಿ ಮೂವರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇದ್ರೀಸ್ ಪಾಷಾ ಕೊಲೆಯಾಗಿದ್ದಾರೆಂದು ಯೂನೂಸ್ ಪಾಷಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ಇದ್ರೀಸ್ ಪಾಷಾ ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ : ಕಾಂಗ್ರೆಸ್ ಆರೋಪ
ಇದ್ರೀಸ್ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ
ಅನೈತಿಕ ಪೊಲೀಸ್ ಗಿರಿಯಿಂದ ಕೊಲೆಯಾಗಿರುವ ಇದ್ರೀಸ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಅಲ್ಲದೇ ಕಾನೂನನ್ನು ಕೈಗೆತ್ತಿಕೊಂಡು ಇದ್ರೀಸ್ ನನ್ನು ಕೊಲೆ ಮಾಡಿರುವ ಪುನೀತ್ ಕೆರೆಹಳ್ಳಿಯನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯದ ಮುಸ್ಲಿಂ ಮಜಾಯಿದ್ ಅಲಿಖಾನ್ ಒತ್ತಾಯಿಸಿದ್ದಾರೆ.
ಮತ್ತೊಬ್ಬ ಮುಸ್ಲಿಂ ಮುಖಂಡ ಮಹಮದ್ ತಾಹೀರ್ ಮಾತನಾಡಿ, ಈ ಹಿಂದೆ ಪುನೀತ್ ಕೆರೆಹಳ್ಳಿ ಮೇಲೆ ಹೆಣ್ಣು ಮಕ್ಕಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ಮಾಡಿದ ಆರೋಪಗಳಿವೆ. ಈ ವ್ಯಕ್ತಿ ಆಡಳಿತ ಪಕ್ಷವಾದ ಬಿಜೆಪಿಯೊಂದಿಗೆ ಗುರುತಿಸಿಕೊಂಡು, ತನ್ನದೇಯಾದ ಒಂದು ಸಂಘಟನೆಯನ್ನು ಕಟ್ಟಿಕೊಂಡು ಗೋ ಹತ್ಯೆ ನಿಷೇಧದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಆತನ ಬಳಿ ಶಾಕಿಂಗ್ ಟ್ರೀಟ್ ಮೆಂಟ್ ನೀಡುವ ಮಾರಕಾಸ್ತ್ರವಿದೆ ಎಂಬ ಮಾಹಿತಿ ಇದೆ, ಇದನ್ನು ಉಪಯೋಗಿಸಲು ಅಧಿಕಾರ ಕೊಟ್ಟವರು ಯಾರು ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ? ಪೊಲೀಸ್ ಇಲಾಖೆ ಇದೆಯೇ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಟ್ವೀಟ್
40% ಕಮಿಷನ್ ಪಡೆದು ಆರಾಮಾಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ಕಾನೂನು ಪಾಲನೆಯ ಹೊಣೆಯನ್ನು ಪೊಲೀಸರಿಗೆ ಕೊಟ್ಟಿದ್ದೀರೋ, ಕೊಲೆಗಡುಕರಿಗೆ ಕೊಟ್ಟಿದ್ದೀರೋ? ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆಗೆ ನಿಮ್ಮ ವಿಫಲ ಸರ್ಕಾರ ಹೊಣೆಯಲ್ಲವೇ? ಬೀದಿ ಪುಂಡರನ್ನು ಆದರ್ಶ ವ್ಯಕ್ತಿಗಳು ಎಂಬಂತೆ ಮೆರೆಸುವ ಬಿಜೆಪಿ ಈ ಕೊಲೆಯ ಹೊಣೆ ಹೊರಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ಸರ್ಕಾರ ಪುಂಡರನ್ನು, ರೌಡಿಗಳನ್ನು ಪೋಷಿಸಿದ್ದರ ಪರಿಣಾಮ ಈಗ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ.
ಕನಕಪುರದಲ್ಲಿ ಗೋಸಾಗಣೆಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆ ಮಾಡಿದ ಕೊಲೆಗಡುಕರಿಗೆ ಬಿಜೆಪಿಯ ಕೃಪಾಪೋಷಣೆ ಇದೆ.
ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಅಕ್ಷರಶಃ ಕರ್ನಾಟಕದಲ್ಲಿ ಜರುಗುತ್ತಿದೆ. pic.twitter.com/kN7PEIQjKP
— Karnataka Congress (@INCKarnataka) April 2, 2023
“>




