Tuesday, November 24, 2026

ಪ್ರಾಯೋಗಿಕ ಆವೃತ್ತಿ

ಚಾಮುಂಡೇಶ್ವರಿ ದೇವಸ್ಥಾನ ಪ್ರವೇಶಿಸಿದ ದಲಿತರು- ಸವರ್ಣೀಯರು

ಶ್ರೀರಂಗಪಟ್ಟಣ ತಾಲ್ಲೂಕಿನ ಜಕ್ಕನಹಳ್ಳಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕಳೆದ ಹದಿನೆಂಟು ವರ್ಷಗಳಿಂದ ಬಿದ್ದಿದ್ದ ಬೀಗಕ್ಕೆ ಇಂದು ಮುಕ್ತಿ ಸಿಕ್ಕಿ ತೆರೆಯಲಾಯಿತು. ಗ್ರಾಮದ ದಲಿತರು ಹಾಗೂ ಸವರ್ಣೀಯ ಜನಾಂಗದ ಮಧ್ಯೆ ಜಾತಿಯ ಕಾರಣಕ್ಕೆ ಜಗಳ ನಡೆದು ಕಳೆದ ಹದಿನೆಂಟು ವರ್ಷಗಳಿಂದ ಎರಡೂ ಸಮುದಾಯಗಳು ದೇವಸ್ಥಾನ ಪ್ರವೇಶ ಮಾಡಿರಲಿಲ್ಲ.

ಇಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ತಹಶೀಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗ್ರಾಮದ ಸವರ್ಣೀಯರು ಹಾಗೂ ದಲಿತರು ತಮ್ಮೊಳಗಿದ್ದ ವೈಮನಸ್ಯವನ್ನು ಮರೆತು ಪ್ರೀತಿ, ವಿಶ್ವಾಸದಿಂದ ಜೊತೆಗೂಡಿ ದೇವರ ಪೂಜೆ ಮಾಡುವ ನಿರ್ಣಯಕ್ಕೆ ಬಂದರು.

ನಂತರ ಚಾಮುಂಡೇಶ್ವರಿ ಹಾಗೂ ಈಶ್ವರನ ದೇವಸ್ಥಾನ ಪ್ರವೇಶಿಸಿದ ಗ್ರಾಮದ ಎಲ್ಲಾ ಸಮುದಾಯದ ಜನರು ಇನ್ನು ಮುಂದೆ ನಮ್ಮಲ್ಲಿರುವ ದ್ವೇಷವನ್ನು ಮರೆತು ಒಂದಾಗಿ ಹೋಗುವುದಾಗಿ ವಿಶ್ವಾಸದಿಂದ ನುಡಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ತಹಶೀಲ್ದಾರ್ ಶ್ವೇತಾ ಅವರ ಪ್ರಯತ್ನಕ್ಕೆ ಎರಡೂ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಎರಡೂ ಕೈಗಳೆತ್ತಿ ಹರ್ಷದಿಂದ ನಾವು ಒಂದಾಗಿ ದೇವರ ಪೂಜೆ,ಪುನಸ್ಕಾರದಲ್ಲಿ ಪಾಲ್ಗೊಳ್ಳುತ್ತೇವೆಂದು ಕೂಗಿದರು.

ಅಂತಿಮವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮಧ್ಯ ಪ್ರವೇಶದಿಂದ ಕಳೆದ ಹದಿನೆಂಟು ವರ್ಷಗಳಿಂದ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಜಾತಿ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ.

ಇಂದು ಬೆಳಿಗ್ಗೆ ಸರ್ಕಾರದ ವತಿಯಿಂದ ಶಾಂತಿಸಭೆ ಗ್ರಾಮದಲ್ಲಿ ನಡೆಯಿತು. ಗ್ರಾಮದ ಮುಖಂಡ ಬಾಲರಾಜ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಳೆದ 18 ವರ್ಷಗಳಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೀಗ ಬಿದ್ದಿರುವುದರ ಬಗ್ಗೆ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ನಂಜುಂಡೇಗೌಡ, ಸಂತೋಷ್ ಅವರ ಮುಂದೆ ಈ ವಿಚಾರ ಮಾತನಾಡಿದರೂ ಯಾರೂ ಕೂಡ ಸವರ್ಣೀಯರು ಹಾಗೂ ದಲಿತರ ಮಧ್ಯೆ ಇದ್ದ ವೈಮನಸ್ಯವನ್ನು ಬಗೆಹರಿಸುವ ಕೆಲಸ ಮಾಡಲಿಲ್ಲ.

ಆದರೆ ರವೀಂದ್ರ ಶ್ರೀಕಂಠಯ್ಯನವರು ಗ್ರಾಮದ ಮುಖಂಡರನ್ನು ಸಭೆ ಸೇರಿಸಿ ಅವರಿಗೆ ಕೋಮುಗಲಭೆ,ಜಾತಿ ಸಂಘರ್ಷದಿಂದಾದ ಮನಸ್ತಾಪಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಇಂದು ದೇವಸ್ಥಾನ ಪ್ರವೇಶ ಮಾಡಲು ಈ ಶಾಂತಿ ಸಭೆ ನಡೆಸಿದ್ದಾರೆ ಎಂದರು.

ಈ ದೇವಸ್ಥಾನ ಸುಮಾರು 300 ರಿಂದ 400 ವರ್ಷ ಹಳೆಯದಾಗಿದ್ದು, ಕೆಲವರು ಇದನ್ನು ಒಡೆದು ಹಾಕು ಎಂದು ಹೇಳಿದರು.ಆದರೆ ರವೀಂದ್ರ ಶ್ರೀಕಂಠಯ್ಯನವರು ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ನೀರು ತುಂಬಿಸುವ ಮೂಲಕ ಎರಡೂ ಸಮುದಾಯಗಳನ್ನು ಒಂದು ಮಾಡಿ ದೇವರ ಪೂಜೆ ಮಾಡಿಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಎರಡು ಜನಾಂಗಗಳು ಸಹಮತದಿಂದ ಇನ್ನು ಮುಂದೆ ನಡೆದುಕೊಳ್ಳುವುದಾಗಿ ತಿಳಿಸಿದರು.

ದಲಿತ ಮುಖಂಡರಾದ ದೇವರಾಜು ಮಾತನಾಡಿ, ಕೋಮು ಸೌಹಾರ್ದತೆಯ ವಿಷಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬರಬೇಕಿತ್ತು. ಈ ಹಿಂದೆ ದೇವಸ್ಥಾನದ ವಿಚಾರವಾಗಿ ಎರಡು ಪ್ರಕರಣಗಳು ನಡೆದರೂ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ. ಹಿಂದೆ ಆದಂತೆ ಈ ಬಾರಿ ಆಗಬಾರದು. ವ್ಯಕ್ತಿಗಿಂತ ಕಾನೂನು ದೊಡ್ಡದು. ಸರ್ಕಾರದ ಪ್ರತಿನಿಧಿಯನ್ನು ನೇಮಕ ಮಾಡಿ ದೇವಸ್ಥಾನದ ಆಡಳಿತ ಮಂಡಳಿ ರಚನೆ ಮಾಡುವಂತೆ ತಿಳಿಸಿದರು.

ಗ್ರಾಮದ ಮೋಹನ್ ಮಾತನಾಡಿ,ಈ ಹಿಂದೆ ದಲಿತರು ದೇವಸ್ಥಾನ ಪ್ರವೇಶ ಮಾಡಿದಾಗ ಅರ್ಚಕ ಮೂರ್ಛೆ ಬಂದವನಂತೆ ನಾಟಕ ಮಾಡಿ ದಲಿತರು ಮತ್ತು ಸವರ್ಣೀಯರ ಮಧ್ಯೆ ದ್ವೇಷ ಹುಟ್ಟು ಹಾಕಿದ್ದರು.ಎಡಗಡೆ ಹೂ ಬಿದ್ದರಿಂದ ದಲಿತರ ಪ್ರವೇಶ ಆಗಿದ್ದಕ್ಕೆ ಈ ರೀತಿ ಆಗಿದೆ ಅಂತೆಲ್ಲಾ ಹೇಳಿದ್ದರು. ಮುಂದೆ ಕೂಡ ಈ ರೀತಿಯ ಮೌಢ್ಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದರು.

ತಹಶೀಲ್ದಾರ್ ಶ್ವೇತಾ ಮಾತನಾಡಿ, 2004 ರಲ್ಲಿ ಚಾಮುಂಡೇಶ್ವರಿ ಉತ್ಸವದ ವೇಳೆ ಹಾಗೂ ಸಾಮೂಹಿಕ ಭೋಜನದಲ್ಲಿ ಗಲಾಟೆ ಉಂಟಾದ ಕಾರಣ 144ಸೆಕ್ಷನ್ ಜಾರಿಗೊಳಿಸಲಾಗಿತ್ತು. ಕಳೆದ 18 ವರ್ಷಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಎಲ್ಲಾ ಸಮುದಾಯದವರೆಗೂ ಮುಕ್ತ ಪ್ರವೇಶ ಇಲ್ಲವೆಂಬುದು ದುಃಖದ ಸಂಗತಿ. ಎಲ್ಲಾ ವರ್ಗದವರು ಸಂತೋಷ ಸಂಭ್ರಮದಿಂದ ಪೂಜೆ ಮಾಡಿಕೊಂಡು ಹೋಗಬೇಕು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಲ್ಲಿ ಎಲ್ಲಾ ಜಾತಿಯ ಜನರಿಗೆ ಅವಕಾಶ ನೀಡಲಾಗುವುದು.ಎಲ್ಲರೂ ಜಾತಿ ವೈಷಮ್ಯ ಬಿಟ್ಟು ಸಹಮತದಿಂದ ಜೀವನ ಮಾಡುವ ಮೂಲಕ ಪೂಜೆ ಮಾಡಿ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು.

ವೃತ್ತ ನೀರಿಕ್ಷಕ ಹೆಚ್.ಆರ್.ವಿವೇಕಾನಂದ ಮಾತನಾಡಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ಅವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಜಕನಳ್ಳಿಯ ಗ್ರಾಮದ ದಲಿತರು ಮತ್ತು ಸವರ್ಣೀಯರು ಹಿಂದಿನ ಎಲ್ಲಾ ವೈಷಮ್ಯವನ್ನು ಮರೆತು ಒಗ್ಗಟ್ಟಾಗಿ ದೇವಸ್ಥಾನದ ಪೂಜೆ ಮಾಡಿಕೊಂಡು ಹೋಗಬೇಕು ಎಂದರು. ಮುಖಂಡ ಪಾಲಳ್ಳಿ ಚಂದ್ರಶೇಖರ್ ಮಾತನಾಡಿ, ಒಂದು ಸಣ್ಣ ಊರಿನಲ್ಲಿ ದೇವಸ್ಥಾನದ ವಿಚಾರಕ್ಕೆ ಈ ರೀತಿ ವೈಷಮ್ಯ ಬೆಳೆಸಿಕೊಂಡಿರುವುದು ಸರಿಯಲ್ಲ .ಮನಸ್ಸಿನಲ್ಲಿ ಏನೇ ಕಲ್ಮಶ ಇದ್ದರೂ ಅದನ್ನು ಬದಿಗೊತ್ತಿ ಪೂಜೆ ಮಾಡಿಕೊಂಡು ಹೋಗಬೇಕೆಂದು ಸಲಹೆ ನೀಡಿದರು

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, 21ನೇ ಶತಮಾನದಲ್ಲಿ ಈ ರೀತಿಯ ಸಭೆ ಮಾಡುತ್ತಿರುವುದು ನನಗೆ ಸಂಕೋಚ ಎನಿಸುತ್ತಿದೆ. ಯಾರೂ ಇಂತ ಜಾತಿಯಲ್ಲಿ ಹುಟ್ಟಬೇಕೆಂದು ಹೇಳಿ ಕೇಳಿ ಹುಟ್ಟುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇವಸ್ಥಾನಕ್ಕೆ ಬಂದರೆ ಅವರು ಯಾವ ಜಾತಿ ಎಂದು ಕೇಳಿಕೊಂಡು ಒಳಕ್ಕೆ ಸೇರಿಸುತ್ತೀರಾ. ಅವರಿಗಿಲ್ಲದ ಜಾತಿ ಬಡವರಲ್ಲಿ ಯಾಕೆ ಹುಡುಕುತ್ತೀರಿ,ಈ ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಎಲ್ಲರೂ ಸಮಾನತೆಯಿಂದ ಬದುಕಬೇಕು ಎನ್ನುವುದು ನಮ್ಮ ದೇಶದ ಸಂಸ್ಕಾರ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಜಾತಿಯನ್ನು ನಾವು ಹುಡುಕಲಿಲ್ಲ.

ಎಲ್ಲಾ ಸಮುದಾಯದವರು ಸೇರಿ ಯುಗಾದಿ ಹಬ್ಬದಲ್ಲಿ ದೇವರ ಉತ್ಸವ ಮಾಡಿದ್ದೀರಿ. ಅದೇ ರೀತಿ ಮುಂದೆಯೂ ಒಂದಾಗಿ ದೇವರ ಪೂಜೆ ಮಾಡಿಕೊಂಡು ಹೋಗಬೇಕು ಎಂದರು. ದಲಿತರು ಬಂದಾಗ ಮುಖ ಸಿಂಡರಿಸುವುದು, ಪುರೋಹಿತರು ಮೂಢನಂಬಿಕೆಯನ್ನು ಹರಡಬಾರದು. ದೇವಸ್ಥಾನದ ಅಭಿವೃದ್ಧಿ ಆಗಬೇಕು.ಹಾಗಾಗಿ ಎಲ್ಲಾ ಸಮುದಾಯದವರು ಸೇರಿಕೊಂಡು ದೇವಸ್ಥಾನದ ಸಮಿತಿ ರಚನೆ ಮಾಡಿಕೊಳ್ಳಬೇಕು. ನಾನು ನನ್ನ ಅನುದಾನದಿಂದ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುತ್ತಿದ್ದು ಎಲ್ಲರೂ ಜೊತೆ ಸೇರಿ ದೇವಸ್ಥಾನದ ಪ್ರಗತಿಗೆ ಮುಂದಾಗಬೇಕು.ಒಗ್ಗಟ್ಟಾಗಿ ಹಬ್ಬ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ನೆರವೇರಿಸಿದರು.

ಸಭೆಯಲ್ಲಿ ಗ್ರಾಮದ ಯಜಮಾನರಾದ ಬೋರಪ್ಪ,ಮರೀಗೌಡ,ಅರಕೇಗೌಡ, ಗಣೇಶ್, ಧನಂಜಯ, ಜೆಡಿಎಸ್ ಮುಖಂಡರಾದ ರಾಜೇಶ್,ಭಾಸ್ಕರ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ