ಪಿಎಲ್’ಡಿ ಬ್ಯಾಂಕ್ ಸೇರಿದಂತೆ ಸ್ಥಳೀಯ ಸಹಕಾರ ಸಂಘಗಳ ಚುನಾವಣೆಗಳ ಗೆಲುವಿಗೆ ನಮ್ಮದೇ ತಂತ್ರಗಾರಿಕೆ ಹೆಣೆಯಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಫೆ.8ರಂದು ನಡೆಯಲಿರುವ ಪಿಎಲ್ ಡಿ ಬ್ಯಾಂಕ್ ಚುನಾವಣೆ ಪ್ರಯುಕ್ತ ಪಾಂಡವಪುರ ತಾಲೂಕಿನ ವಿವಿಧೆಡೆ ಸಭೆ ನಡೆಸಿ ಬಿರುಸಿನ ಮತ ಪ್ರಚಾರ ನಡೆಸಿ ಅವರು ಮಾತನಾಡಿದರು.

ಪಿಎಲ್ ಡಿ ಬ್ಯಾಂಕ್ ನ 14 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮುಖಂಡರಿಗೆ ಚುನಾವಣೆ ಜವಾಬ್ದಾರಿ ನೀಡಲಾಗಿದೆ ಎಂದರು.
ಮನ್ ಮುಲ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೇಗಕ್ಕೆ ಸರಿಯಾಗಿ ನಮ್ಮ ಅಭ್ಯರ್ಥಿ ನಡೆಯದ ಕಾರಣ ಸೋತಿದ್ದಾರೆ. ಹಿಂದಿನ ಚುನಾವಣೆಗಳ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಗೆಲುವಿಗೆ ಪ್ರಾರಂಭಿಕ ಹಂತದಿಂದಲೇ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಭ್ಯರ್ಥಿಗಳಾದ ಅತ್ತಿಗಾನಹಳ್ಳಿ ಜಗದೀಶ್, ನರೇಂದ್ರಬಾಬು, ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಮುಖಂಡರಾದ ಸಿ.ಆರ್.ರಮೇಶ್, ಸಿದ್ದಲಿಂಗೇಗೌಡ, ಶ್ಯಾಮ್, ಪುಟ್ಟೇಗೌಡ, ನಾಗೇಶ್, ಶಂಭೂನಹಳ್ಳಿ ಸತೀಶ್, ಚಾಗಶೆಟ್ಟಹಳ್ಳಿ ವಿಜಿ, ಡಿ.ಕೆ.ಸ್ವಾಮಿಗೌಡ, ಬಿ.ಟಿ.ಶಿವಣ್ಣ, ಎಲ್ ಐಸಿ ಜಗದೀಶ್, ಗ್ರಾ.ಪಂ ಸದಸ್ಯರಾದ ಮಾಕೇಗೌಡ, ಆನಂದ್, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ ಇತರರಿದ್ದರು.




