ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಒಂದು ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಹಾಗೂ ಉಪಾಧ್ಯಕ್ಷ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಧ್ಯಕ್ಷೆಯ ಪತಿಯಾದ ಶಂಕರ್ ಹಾಗೂ ಉಪಾಧ್ಯಕ್ಷ ಮನೋಹರ್ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದವರು.

ಎಸ್ ಪಿ ಶಂಕರ್ ಎಂಬುವರು ಶೆಟ್ಟಹಳ್ಳಿ ಗ್ರಾಮದ ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಈ ವಿವಾದ ಬಗೆಹರಿಸಿಕೊಡಲು 10 ಲಕ್ಷ ರೂ.ಗಳಿಗೆ ಇವರು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಎಂ ಪಿ ಶಂಕರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಇಂದು ಮಧ್ಯಾಹ್ನ 3.30 ರ ಸಮಯದಲ್ಲಿ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದ ಡಿವೈಎಸ್ಪಿ ಸುನಿಲ್ ಕುಮಾರ್, ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಮಾರೇಹಳ್ಳಿ ದೇವಸ್ಥಾನದ ಬಳಿ ಒಂದು ಲಕ್ಷ ಮುಂಗಡ ಹಣವನ್ನು ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಮನೋಹರ್ ಹಾಗೂ ಶಂಕರ್ ನನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




