ಮಕ್ಕಳ ಉತ್ತಮ ಶೈಕ್ಷಣಿಕ ಪ್ರಗತಿಗಾಗಿ ಸದೃಢ ಆರೋಗ್ಯ ಬಹುಮುಖ್ಯ, ಆದ್ದರಿಂದ ಅನೀಮಿಯಾ ಪರೀಕ್ಷೆ, ಚಿಕಿತ್ಸೆ ಉಚಿತ, ಅನೀಮಿಯಾ ಮುಕ್ತ ಖಚಿತ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ವಿದ್ಯಾರ್ಥಿಗಳಿಗೆ ಹೇಳಿದರು.
ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣದ ವತಿಯಿಂದ ಹಮ್ಮಿಕೊಂಡಿದ್ದ “ಅನೀಮಿಯಾ ಕುರಿತು ಅರಿವು, ಪರೀಕ್ಷೆ” ಹಾಗೂ ಚಿಕಿತ್ಸಾ ಶಿಬಿರ ಉದ್ದೇಶಿಸಿ ಮಾತನಾಡಿದರು.
ಅನೀಮಿಯಾ ಹಾಗೂ ಅಪೌಷ್ಟಿಕತೆ ಇರುವ ಮಕ್ಕಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯವಾಗಿದ್ದು ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದಾಗಿದೆ ಆದ್ದರಿಂದ 1 ರಿಂದ 10 ನೆಯ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಹಿಮೋಗ್ಲೊಬಿನ್ ಪರೀಕ್ಷೆ ಮಾಡಲಾಗುತ್ತಿದೆ ಇದಕ್ಕೆ ವಿದ್ಯಾರ್ಥಿಗಳು ಸಹಕರಿಸಬೇಕೆಂದರು.
ನಂತರ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಮಾತನಾಡಿ ದೇಹದಲ್ಲಿ ಅಗತ್ಯಕ್ಕಿಂತ ರಕ್ತದ ಪ್ರಮಾಣ ಕಡಿಮೆ ಆದರೆ ಅದಕ್ಕೆ ರಕ್ತ ಹೀನತೆ ಎನ್ನುತ್ತೇವೆ ಅನೀಮಿಯಾದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ,ನಿಶ್ಶಕ್ತಿ, ಆಯಾಸ,ಓದುವುದರಲ್ಲಿ ನಿರಾಸಕ್ತಿ ಇವು ರಕ್ತ ಹೀನತೆಯ ಪ್ರಮುಖ ಲಕ್ಷಣಗಳಾಗಿವೆ ಹಾಗಾಗಿ ರಕ್ತ ಹೀನತೆ ಅಲಕ್ಷ ಬೇಡ ಕಬ್ಬಿಣಾಂಶ ಕೊರತೆಯಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಪೌಷ್ಟಿಕ ಆಹಾರದ ಜೊತೆ ವಾರಕ್ಕೊಂದು ಕಬ್ಬಿಣಾಂಶ ಮಾತ್ರೆ ತಪ್ಪದೇ ಸೇವನೆ ಮಾಡಬೇಕೆಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ ಮಂಗಳಾ ಮಕ್ಕಳ ಹಿಮೊಗ್ಲೋಬಿನ್ ಪರೀಕ್ಷಿಸಿದರು.
ಈ ವೇಳೆ ಉಪ ಪ್ರಾಂಶುಪಾಲರಾದ ಸಪ್ನಾ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ, ಆಶಾ ಕಾರ್ಯಕರ್ತೆ ಮೀನಾ ಉಪಸ್ಥಿತರಿದ್ದರು.




