Thursday, June 13, 2024

ಪ್ರಾಯೋಗಿಕ ಆವೃತ್ತಿ

ಗೌಡರ ಕೈಯಲ್ಲೇ ಆಗಿಲ್ಲ, ಕುಮಾರಸ್ವಾಮಿಯಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? : ಚಲುವರಾಯಸ್ವಾಮಿ

ಶತಮಾನಗಳಷ್ಟು ಹಳೆಯದಾದ ಕಾವೇರಿ ನದಿ ನೀರಿನ ಸಮಸ್ಯೆಯನ್ನು  ಬಗೆಹರಿಸುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ, ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದಲೇ ಸಮಸ್ಯೆ ಬಗೆಹರಿಸಲಾಗಲಿಲ್ಲ. ಹೀಗಿರುವಾಗ ಹೆಚ್‌ಡಿಕೆ ಅವರಿಗಿಂತ ದೊಡ್ಡವರೇ ? ಅವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವೇ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಂಡ್ಯ ಅಭಿವೃದ್ಧಿ ಮಾಡಿಲ್ಲ. ಲೋಕಸಭಾ ಸದಸ್ಯರಾಗಿ ಹೇಗೆ ಅಭಿವೃದ್ಧಿ ಮಾಡುತ್ತಾರೆ. ಸುಳ್ಳು ಹೇಳಲು ಒಂದು ಇತಿಮಿತಿ ಇದೆ. ನಾವು ಮಂಡ್ಯದಲ್ಲಿ ಅಭಿವೃದ್ಧಿ ಪರ ಹೋಗುತ್ತಿದ್ದೇವೆ. ಇವರದ್ದೇ ಸರ್ಕಾರ ಇದ್ದರೂ ಮೇಕೆದಾಟುಗೆ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಹೇಳಿಕೆ ನೋಡಿದರೆ ನಗು ಬರುತ್ತದೆ. ನಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಅದನ್ನು ಮಾಡಲು ಹೇಳಿ ಮೊದಲು. ಮತಗಾಗಿ ಏನೇನೊ ಮಾತನಾಡಬಾರದು ಎಂದು ಹೇಳಿದರು.

ಸುಳ್ಳು ಹೇಳುವುದು ನಿಲ್ಲಿಸಿ

ಕೆರೆಗೋಡು ಗ್ರಾಮಕ್ಕೆ ಹೋಗಿದ್ದಾರೆ. ಕೋಮು ಗಲಾಟೆ ಆಗಲ್ಲ. ಇದು ಮಂಡ್ಯದಲ್ಲಿ ನಡೆಯಲ್ಲ. ಕುಮಾರಸ್ವಾಮಿ ಅವರೇ ಸುಳ್ಳು ಹೇಳುವುದು ನಿಲ್ಲಿಸಿ. ಮೊನ್ನೆ ಏಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನ ಕರೆದುಕೊಂಡು ಬಂದಿದ್ದರು. ನಾವು ನಿಮ್ಮ ಬಗ್ಗೆ ಹೇಳಿದ್ವಾ ? ರಾಹುಲ್ ಗಾಂಧಿ ಬಂದಿರುವುದು ನಿಮಗೆ ಭಯನಾ ? ನಾವು ಸೋತ ನಂತರ ಎಷ್ಟು ಲೂಟಿ ಹೊಡೆದಿದ್ದಾರೆ ಕುಮಾರಸ್ವಾಮಿ ಅವರಿಗೆ ಕೇಳಿ. ಸಿಎಂ ಆಗಿ ಕೆಲಸ ಮಾಡಿದವರು ತೂಕವಾಗಿ ಮಾತನಾಡಬೇಕು. ಏಕೆ ವಿಚಿತ್ರವಾಗಿದ್ದೀರಿ ಎಂದು ಕೇಳಿ. ಮಂಡ್ಯದಲ್ಲಿ ನಾವೇ ಅಭಿವೃದ್ಧಿ ಮಾಡಬೇಕು. ಅವರ ಜತೆ ನಾನು ಇದ್ದು ಬಂದವನು. ಮೋದಿ ಹೆಸರು ಹೇಳಿದರೆ ಹೊಟ್ಟೆ ತುಂಬುತ್ತದೆಯೇ ಎಂದು ಹೇಳಿದರು.

70 ರಿಂದ 80 ಸಾವಿರ ಜನ

ರಾಹುಲ್ ಗಾಂಧಿ ಸಮಾವೇಶಕ್ಕೆ 70 ರಿಂದ 80 ಸಾವಿರ ಜನ ಸೇರಿದ್ದರು. ಅವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಬಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಪ್ರಣಾಳಿಕೆ ಕೊಟ್ಟಿದ್ದರು. ಆದರೆ ಜನರು ನಮ್ಮ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದರು. ಗ್ಯಾರಂಟಿ ಯೋಜನೆ ಬಗ್ಗೆ ಅನುಮಾನ ಇಟ್ಟಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಜಾರಿಗೆ ತಂದಿದ್ದೇವೆ. ಐದು ಗ್ಯಾರಂಟಿ ಜತೆಗೆ ಪ್ರತಿ ಮಹಿಳೆಯರಿಗೆ 8.5 ಸಾವಿರ ರೂ ಕೊಡುತ್ತೇವೆ. ಇಡೀ ಕುಟುಂಬ ನೆಮ್ಮದಿಯಿಂದ ಬದುಕುತ್ತಾರೆ. ನರೇಗಾ ಯೋಜನೆಯಡಿ ದಿನಗೂಲಿಯನ್ನು 400 ರೂ ಏರಿಸಲಾಗುತ್ತದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಇಡೀ ರಾಷ್ಟ್ರದ ರೈತರ ಸಾಲ ಮನ್ನಾ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕಾಂಗ್ರೆಸ್ ನಾಯಕ ಬಿ.ಸೋಮಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!