ಇಲಾಖೆಯ ಅಧಿಕಾರಿಗಳು ತಮಗೆ ಆರ್ಥಿಕ ವರ್ಷದಲ್ಲಿ ನೀಡಿರುವ ಗುರಿಗಳ ಸಾಧನೆ ಮಾಡುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿರುವ ಅನುದಾನವನ್ನು ಪೂರ್ಣವಾಗಿ ವೆಚ್ಚವಾಗಬೇಕು. ಅನುದಾನ ವ್ಯರ್ಥವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಜವಾಬ್ದಾರಿ ಮಾಡಲಾಗುವುದು ಎಂದರು.
ನೀರಾವರಿ ಇಲಾಖೆಯಿಂದ ನೀರಾವರಿ ಕೆಲಸಗಳ ಅಭಿವೃದ್ಧಿಗೆ 40 ರಿಂದ 50 ಕೋಟಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅನುದಾನ ನೀಡಿದ ಸಂದರ್ಭದಲ್ಲಿ ಅನುದಾನದಲ್ಲಿ ಹಳೆಯ ನೀರಾವರಿ ಯೋಜನೆಗಳ ನಿರ್ವಹಣೆಗೆ ಹಣ ಮೀಸಲಿಡಿ ಎಂದರು.
ವೈಜ್ಞಾನಿಕವಾಗಿ ಕೆರೆ ಹೂಳು ತೆಗೆಯಿರಿ ಬೇಸಿಗೆ ಕಾಲದಲ್ಲಿ ಕೆರೆಯಿಂದ ಹೂಳು ತೆಗೆಯಲು ಅವಕಾಶವಿದ್ದು, ರೈತರು ಹೂಳು ತೆಗೆಯುವುದು ಸರ್ವೆ ಸಾಮಾನ್ಯ. ರೈತರು ಹೂಳು ತೆಗೆಯುವ ಸಂದರ್ಭದಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಖುದ್ದು ಹಾಜರಿದ್ದು, ವೈಜ್ಞಾನಿಕವಾಗಿ ಹೂಳು ತೆಗೆಯುವಂತೆ ನೋಡಿಕೊಳ್ಳಬೇಕು. ಘರ್ಷಣೆಯಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಿ ಎಂದರು.
ಇದಕ್ಕೆ ಪ್ರತಿಕ್ರಿಯಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಗ್ರಾಮವಾರು ಹೂಳು ತೆಗೆಯಲು ಅವಶ್ಯಕತೆ ಇರುವ ಕೆರೆಗಳು ಹಾಗೂ ಎಷ್ಟು ಅಡಿ ತೆಗೆಯಬೇಕು ಇದರ ಬಗ್ಗೆ ಪ್ರಕಟಣೆ ಹೊರಡಿಸಿ ನಂತರ ಹೂಳು ತೆಗೆಯಲು ಚಿಂತಿಸಲಾಗುತ್ತಿದೆ ಎಂದರು.
ಕೃಷಿ ಸಚಿವರು ನಂತರ ಮಾತನಾಡಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ಜಲ್ ಜೀವನ್ ಮಿಷನ್ ಯೋಜನೆಯಡಿ ಬೋರ್ ವೆಲ್, ನೆಲ್ಲಿ ಸಂಪರ್ಕ ಮುಂತಾದ ಕೆಲಸಗಳು ಪೂರ್ಣಗೊಳಿಸಿ ಎಂದರು.
ಕಳೆದ ಎರಡು ಸಾಲಿನಲ್ಲಿ ಕುಡಿಯುವ ನೀರಿನ ತೊಂದರೆ ಇದ್ದ ಸಂದರ್ಭದಲ್ಲಿ ಖಾಸಗಿ ಬೋರ್ ವೆಲ್ ಅಥವಾ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ ವ್ಯಕ್ತಿಗಳ ಬಿಲ್ ಪಾವತಿಯಾಗಿಲ್ಲ ಎಂದು ದೂರುಗಳಿದ್ದು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಮಹಜರ್ ಮಾಡಿ ವರದಿ ಪಡೆದು ಬಿಲ್ ಪಾವತಿಸಲು ಕ್ರಮ ವಹಿಸಿ ಎಂದರು.
ವಿವಿಧ ರೀತಿಯ ಸಾಮಾಜಿಕ ಪಿಂಚಣಿ ಪಡೆಯುತ್ತಿರುವವರು ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ದೂರು ಬಂದಲ್ಲಿ. ಕಂದಾಯ ಇಲಾಖೆಯವರು ಪರಿಶೀಲನೆ ನಡೆಸದೆ ಸ್ಥಗಿತ ಮಾಡುವ ಕ್ರಮ ಸರಿಯಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.
ಪೋಡಿ ದುರಸ್ತಿ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು. ಕ್ರಮಬದ್ಧವಾಗಿ ಕೆಲಸಗಳು ನಡೆದರೆ ಪೋಡಿ ಆಂದೋಲನ ಕೆಲಸಗಳು ಸ್ವಯಂ ಪ್ರೇರಿತವಾಗಿ ಕಂದಾಯ ಇಲಾಖೆ ತೆಗೆದುಕೊಂಡಿರುವ ಕೆಲಸ ಸಾರ್ಥಕವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಕರಪತ್ರ ಹೊರಡಿಸಿ ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು
ರೈತರು ಆದಷ್ಟು ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು, ರಾಸಾಯನಿಕ ಗೊಬ್ವರಗಳನ್ನು ಭೂಮಿಗೆ ಹೆಚ್ಚಿಗೆ ಬಳಕೆ ಮಾಡುವುದರಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಜಮೀನಿಗೆ ನಿತ್ಯ ನೀರು ಹಾಯಿಸಬಾರದು, ಇದರಿಂದಲೂ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ. ಈ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಕೆಲವೆಡೆ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಹೀಗಾಗಿ ಸಾಕಷ್ಟು ಅಪಘಾತಗಳು ಮಡೆಯುತ್ತಿವೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕೆಂದರು.
ಬೇಸಿಗೆ ಬೆಳೆ ಬೆಳೆಯುವ ಕಡೆಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಅಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಭೆಗೆ ಜಿಲ್ಲೆಯಲ್ಲಿ ಮಳೆ ವಿವರ, ಜಲಾಶಯದಲ್ಲಿ ಲಭ್ಯವಿರುವ ನೀರಿನ ವಿವರ,ಕೆರೆಯಲ್ಲಿ ಸಂಗ್ರಹವಾಗಿರುವ ನೀರು, 2024-25 ನೇ ಸಾಲಿನಲ್ಲಿ ಬೆಳೆ ನಷ್ಠ, ಮಿಟಿಗೇಷನ್ ಅನುದಾನದಡಿ ತೆಗೆದುಕೊಂಡಿರುವ ಕಾಮಗಾರಿಗಳು, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ವಿಧಾನಪರಿಷತ್ ಶಾಸಕರಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ವಿವೇಕನಂದ, ಕೆ.ಡಿ.ಪಿ ಸದಸ್ಯ ಸಿ.ಎಂ. ದ್ಯಾವಪ್ಪ, ನಟರಾಜ, ಅಶಾಲತಾ, ಮಹಮ್ಮದ್ ಉಜೈಫ್, ಶಶಿರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.




