2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಕಾವೇರಿ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ 284.75 ಟಿಎಂಸಿ ನೀರು ಸಿಗುತ್ತಿದ್ದು,ಇದು ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಸಿಕ್ಕ ಅಪೂರ್ವ ಅವಕಾಶವಾಗಿದೆ. ನೀರಿನ ಸದ್ಭಳಕೆ ನಿಟ್ಟಿನಲ್ಲಿ ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಮಂಡ್ಯ ಜಿಲ್ಲೆಯ ರೈತರು ಇದಕ್ಕೆ ನಾಯಕತ್ವ ಕೊಟ್ಟು ಯೋಜನೆ ತಯಾರಿಸಬೇಕು ಎಂದು ಜಾಗೃತ ಕರ್ನಾಟಕ ರಾಜ್ಯ ಸಂಚಾಲಕ ಡಾ.ಎಚ್.ವಿ.ವಾಸು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಏಳನೇ ವರ್ಷದ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1991ರಲ್ಲಿ ಚಿತ್ತಖೋಷ್ ಮುಖರ್ಜಿ ಅವರು ನೀಡಿದ ಕಾವೇರಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ಪ್ರಕಾರ, ರಾಜ್ಯಕ್ಕೆ 210 ಟಿಎಂಸಿ ನೀರು ನಿಗದಿ ಮಾಡಲಾಗಿತ್ತು. ಆದರೆ, ತಮಿಳುನಾಡಿಗೆ ಬಿಡಬೇಕಾದಷ್ಟು ನೀರು ಬಿಟ್ಟ ನಂತರ ಉಳಿಯುವ ಎಲ್ಲಾ ನೀರನ್ನು ಬೇಕಾದ ರೀತಿ ಬಳಸಿಕೊಳ್ಳಲು ಅದರಲ್ಲಿ ಅವಕಾಶವಿರಲಿಲ್ಲ. ನಂತರ ಕಾವೇರಿ ನ್ಯಾಯ ಮಂಡಳಿ ಅಂತಿಮ ತೀರ್ಪಿನ ಪ್ರಕಾರ 270 ಟಿಎಂಸಿ ನೀರು ನಿಗದಿಯಾಗಿತ್ತು. ಇದನ್ನು ಒಪ್ಪದ ರಾಜ್ಯ ಹಾಗೂ ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದು, ಅದರಂತೆ 2018 ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್, ಕರ್ನಾಟಕಕ್ಕೆ 284.75 ಟಿಎಂಸಿ ನೀರು ನೀಡುವಂತೆ ತೀರ್ಪು ನೀಡಿದೆ. ಇದೂ ಸಹಾ ಪೂರ್ಣ ನ್ಯಾಯ ಅಲ್ಲ ಎಂದು ನಮಗನ್ನಿಸಬಹುದು. ಆದರೆ, ಇದು ಕಾವೇರಿ ನದಿ ನೀರಿನಲ್ಲಿ ನಮಗೆ ಸಿಕ್ಜ ಗರಿಷ್ಠ ನ್ಯಾಯ. ಇನ್ನೂ ಇದಕ್ಕಿಂತ ಹೆಚ್ಚು ನೀರು ಸಿಗಲು ಇನ್ನು ಸಾಧ್ಯವಿಲ್ಲ. ಈ ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡರೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ಭಾಗಕ್ಕೂ ನೀರು ನೀಡಬಹುದು ಎಂದರು.

ಅಪೂರ್ವ ಅವಕಾಶವೊಂದು ರಾಜ್ಯಕ್ಕೆ ಒದಗಿದೆ
ಕಾವೇರಿ ವಿಚಾರದ ಅಧ್ಯಯನ ಮಾಡುವ ಸಂದರ್ಭದಲ್ಲಿ 1892ರಲ್ಲಿ ಮತ್ತು 1924ರಲ್ಲಿ ಮೈಸೂರು ಮತ್ತು ಮದ್ರಾಸ್ ನಡುವೆ ಆದ ಒಪ್ಪಂದ ಅವಲೋಕಿಸಿದಾಗ ನಮಗೆ ಬಹಳ ದೊಡ್ಡ ಅನ್ಯಾಯ ಆಗಿತ್ತು. ಆದರೆ, ಈಗ ಆ ಚಾರಿತ್ರಿಕ ಅನ್ಯಾಯದ ಹೊರತಾಗಿ ಕರ್ನಾಟಕಕ್ಕೆ ಸಿಗಬೇಕಾದಷ್ಟು ನ್ಯಾಯ ಸಿಕ್ಕಿದೆ ಎಂಬುದು ನನ್ನ ಅಭಿಪ್ರಾಯ. 1924ರಲ್ಲಿ ಆದ ಒಪ್ಪಂದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕಾವೇರಿ ನೀರು ಕರ್ನಾಟಕಕ್ಕೆ ಸಿಕ್ಕಿದೆ. 1991ರ ಕಾವೇರಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ಪ್ರಕಾರ, ನಾವು 210 ಟಿಎಂಸಿ ನೀರು ಮಾತ್ರ ಬಳಸಿಕೊಳ್ಳಬೇಕಾಗಿತ್ತು. ಕರ್ನಾಟಕದಲ್ಲಿ ಉತ್ಪತ್ತಿಯಾಗುವ 400ಕ್ಕೂ ಹೆಚ್ಚು ಟಿಎಂಸಿ ನೀರಿನಲ್ಲಿ ಉಳಿದ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆ ಪ್ರಕಾರ ಆಗ ಇದ್ದ 11.2 ಲಕ್ಷ ಎಕರೆ ನೀರಾವರಿ ಪ್ರದೇಶ ಬಿಟ್ಟು ಅದರ ಮೇಲೆ ಒಂದು ಎಕರೆಯಷ್ಟು ನೀರಾವರಿ ಮಾಡಬಾರದು ಎಂದು ತಮಿಳುನಾಡು ಹೇಳುತ್ತಿತ್ತು. ಡ್ಯಾಂ ನಿರ್ಮಿಸಬಾರದು, ಕೆರೆ ಹೂಳೆತ್ತಬಾರದು ಎಂಬ ತಗಾದೆ ತೆಗೆಯುತಿತ್ತು. ಅಂತಾರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಕೆರೆ ಹೂಳೆತ್ತಲು ಕೂಡ ಅವಕಾಶ ಇರುತ್ತಿರಲಿಲ್ಲ. ಏಕೆಂದರೆ ತಮಿಳುನಾಡು ಪದೇ ಪದೇ ನ್ಯಾಯಾಲಯದ ಮೆಟ್ಟಿಲೇರುತ್ತಿತ್ತು. ಆದರೆ ಅಂತಿಮ ತೀರ್ಪಿನ ನಂತರ ಅಪೂರ್ವ ಅವಕಾಶವೊಂದು ರಾಜ್ಯಕ್ಕೆ ಒದಗಿದೆ. ಆ ಪ್ರಕಾರ ತಮಿಳುನಾಡಿಗೆ ಕೊಡಬೇಕಾದಷ್ಟು ನೀರು ಹರಿಸಿದ ನಂತರ ನಾವು ಕೆರೆ ಹೂಳೆತ್ತುವುದು, ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಹೆಚ್ಚು ನೀರನ್ನು ಸಂಗ್ರಹಿಸಬಹುದು. ಆ ಮೂಲಕ ನೀರನ್ನು ಸಂಗ್ರಹಿಸಿ,ನೀರು ತಲುಪಲಾಗದ ಮಂಡ್ಯ ಜಿಲ್ಲೆಯ ಉಳಿದ ಭಾಗಗಳಿಗೂ ನೀರು ಕೊಡಲು ಈಗ ಅವಕಾಶವಿದೆ ಎಂದು ವಾಸು ವಿವರಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಶೇ.51 ರಷ್ಟು ಒಣಭೂಮಿಯಿದೆ
ಸುಪ್ರೀಂ ಕೋರ್ಟ್ ಕಾವೇರಿ ನೀರನ್ನು ಬಳಸಲು ಅವಕಾಶ ನೀಡಿದ ಮೇಲೆ ಸರ್ಕಾರಿ ಆದೇಶವಾಗಿದ್ದು, ಆ ಪ್ರಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಇದೆಲ್ಲದರ ನಂತರ ಕರ್ನಾಟಕ ಸರ್ಕಾರ, ನೀರಾವರಿ ಇಲಾಖೆ ಹಾಗೂ ಮಂಡ್ಯ ಜಿಲ್ಲೆಯ ರೈತರು ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯಾವ ರೀತಿ ಯೋಜನೆ ರೂಪಿಸಿದ್ದಾರೆ ಎಂದು ನೋಡಿದರೆ ಅಷ್ಟೇನೂ ಆಶಾದಾಯಕವಾಗಿ ಕಾಣುವುದಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಪರಿಸರ ನಾಶವಾಗುತ್ತದೆ, ಕೆಲವರಿಗೆ ಸಾಕಷ್ಟು ಹಣವೂ ಸಿಗುತ್ತದೆ. ಆದರೆ, ಅಂತಹದ್ದು ಆಗದೆಯೂ ಹೆಚ್ಚು ನೀರು ಪಡೆಯಲು ಸಾಧ್ಯವೇ? ಸಾಧ್ಯವಿದೆ.
ಉದಾಹರಣೆಗೆ, ಸರ್ಕಾರದ ದಾಖಲೆ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಶೇ.51 ರಷ್ಟು ಒಣ ಭೂಮಿಯಿದೆ. ವಾಸ್ತವದಲ್ಲಿ ಈ ಪ್ರಮಾಣ ಇನ್ನೂ ಜಾಸ್ತಿ ಇರಬಹುದು. ಅಂದರೆ, ಮೇಲ್ನೋಟಕ್ಕೆ ಸಮೃದ್ಧವೆಂದು ಕಾಣುವ ಈ ಜಿಲ್ಲೆಯ ಶೇ. 49ರಷ್ಟು ಪ್ರದೇಶ ಮಾತ್ರ ನೀರಾವರಿಯಾಗಿದೆ. ಕಾವೇರಿ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ನೀರಿರದ ಉಳಿದ ಶೇ.51ರಷ್ಟು ಭೂಮಿಗೂ ನೀರು ಹರಿಸಬಹುದು ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ರೈತರು ಹಲವು ರೀತಿಯ ಹೋರಾಟ ಮಾಡಿದ್ದಾರೆ. ರಕ್ತ ಕೊಟ್ಟರೂ ನೀರು ಕೊಡುವುದಿಲ್ಲ ಎಂಬ ಘೋಷಣೆ ಕೂಗಲಾಗಿದೆ. ವರುಣಾ ನಾಲೆ ಸಂದರ್ಭದಲ್ಲೂ ಹೋರಾಟ ನಡೆದಿದೆ. ಹೀಗೆಯೇ ಮುಂದಕ್ಕೆ ಹೋದರೆ ಬೆಂಗಳೂರಿಗೆ ಹೋಗುತ್ತಿರುವ ನೀರಿನ ಕಾರಣಕ್ಕೆ, ಅವರ ಜೊತೆಗೂ ಗುದ್ದಾಟ ನಡೆಯಬೇಕಾಗಿ ಬರಬಹುದು. ಆದರೆ ಇಂದು ನಮಗೆ ಸಾಕಷ್ಟು ನೀರು ಸಿಕ್ಕರೂ ಅದನ್ನು ನಾಗಮಂಗಲ,ಕೆ.ಆರ್. ಪೇಟೆ, ಪಾಂಡವಪುರ ಮೊದಲಾದ ಒಣ ಭೂಮಿಗಳಿಗೆ ನೀರು ಹರಿಸುವ ಬಗ್ಗೆ ಆಲೋಚನೆಯನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ
ಇಂದು ನಾವೆಲ್ಲರೂ ಮನಸ್ಸು ಮಾಡಿದರೆ ನಮಗೆ ಇಂದು ಲಭ್ಯವಿರುವ ನೀರಿನಲ್ಲಿ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಪ್ರತಿ ಎಕರೆ ಭೂಮಿಗೂ ನೀರು ಕೊಡಬಹುದು. ಯುಎನ್ ಡಿಪಿ ಅಂದರೆ ಯುನೈಟೆಡ್ ನೇಷನ್ ಡೆವಲಪ್ಮೆಂಟ್ ಪ್ರೋಗ್ರಾಂ ಸಂಸ್ಥೆ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ 50 ವರ್ಷಗಳ ಹಿಂದೆಯೇ ಅಧ್ಯಯನ ಮಾಡಿ ಯಾವ ರೀತಿ ನೀರು ನಾಲೆಗಳಲ್ಲಿ ಸೋರಿಕೆಯಾಗುತ್ತಿದೆ ಎಂಬ ವರದಿ ಸಿದ್ಧಪಡಿಸಿದೆ. ಆ ಪ್ರಕಾರ ತಮಿಳುನಾಡು ಸರಿಯಾಗಿ ನೀರಿನ ನಿರ್ವಹಣೆ ಮಾಡಿದರೆ 80 ಟಿಎಂಸಿ ಅಷ್ಟು ನೀರು ಹೆಚ್ಚು ಸಿಗುತ್ತದೆ.ಕರ್ನಾಟಕಕ್ಕೆ 30 ಟಿಎಂಸಿ ಹೆಚ್ಚುವರಿ ನೀರು ಸಿಗುತ್ತದೆ.ನಮ್ಮ ರಾಜ್ಯದಲ್ಲಿ ಕಾಲುವೆಗಳ ಕಳಪೆ ನಿರ್ವಹಣೆಯಿಂದ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಈ ನೀರು ವ್ಯರ್ಥವಾಗದ ಹಾಗೆ ಬಳಸಿದರೆ ಕಾವೇರಿ ಕೊಳ್ಳದ ಅಷ್ಟು ಭಾಗಕ್ಕೂ ನೀರು ಕೊಡಲು ಸಾಧ್ಯವಾಗುತ್ತದೆ. ಈ ಬಗ್ಗೆ ರೈತರು ಜನಪ್ರತಿನಿಧಿಗಳು ಹಾಗೂ ಸರ್ಕಾರ ಆಲೋಚನೆ ನಡೆಸಬೇಕಿದೆ ಎಂದರು.
15-20 ವರ್ಷಗಳಲ್ಲಿ ಕೆಟ್ಟ ಪರಿಸ್ಥಿತಿ ಮುಟ್ಟುತ್ತೇವೆ
ಸಣ್ಣ ಮತ್ತು ಅತಿ ಸಣ್ಣ ರೈತರಿರೋದು ಮಂಡ್ಯ ಜಿಲ್ಲೆಯಲ್ಲಿ. ಬೆಳೆ ನಷ್ಟದ ಕಾರಣದಿಂದ 2015ರಲ್ಲಿ ಅತಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡರು. ನಮಗೆ ಲಭ್ಯವಿರುವ ನೀರಿನಲ್ಲಿ ಯಾವ ರೀತಿ ಬೆಳೆ ಹಾಕಬೇಕು, ಯಾವ ರೀತಿ ನೀರನ್ನು ಬಳಸಿಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ರೈತ ಸಂಘವೂ ಜೊತೆ ಸೇರಿ ಮಾಡಬೇಕು. ಇಲ್ಲದಿದ್ದರೆ 240 ಟಿಎಂಸಿ ಅಲ್ಲ 500 ಟಿಎಂಸಿ ನೀರು ಸಿಕ್ಕರೂ ಸಾಕಾಗುವುದಿಲ್ಲ.ಕಾವೇರಿ ನೀರನ್ನು ನೀರಾವರಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಇನ್ನು 15-20 ವರ್ಷಗಳಲ್ಲಿ ಕೆಟ್ಟ ಪರಿಸ್ಥಿತಿ ಮುಟ್ಟುತ್ತೇವೆ. ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಹೊರಟಿದೆ. ಇದರಿಂದ ಇನ್ನು ಹೆಚ್ಚಿನ ನೀರನ್ನು ಬೆಂಗಳೂರಿಗೆ ಹರಿಸಬೇಕಾಗುತ್ತದೆ. ಇದುವರೆಗೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ನೀರಿಗಾಗಿ ಹೋರಾಟ ನಡೆಯುತ್ತಿತ್ತು.ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಬೆಂಗಳೂರಿನ ನಡುವೆ ನೀರಿಗಾಗಿ ಹೋರಾಟ ನಡೆಯಬೇಕಾಗುತ್ತದೆ. ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಂಡು ರೈತರ ಕಾರ್ಯಾಗಾರ, ಅಧ್ಯಯನ ಶಿಬಿರ ಏರ್ಪಡಿಸಿ ರೈತ ಪ್ರತಿನಿಧಿಗಳು, ನೀರಾವರಿ ತಜ್ಞರು, ವಿಜ್ಞಾನಿಗಳು ಒಂದೆಡೆ ಸೇರಿಕೊಂಡು ಚರ್ಚೆ ಮಾಡುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಇಂದು ಗ್ರಾಮೀಣ ಬದುಕು ನಾಶದ ಕಡೆ ಸಾಗುತ್ತಿದೆ.ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ ಎನ್ನುವ ಚಿಂತನೆ ತುಂಬಾ ಕಡಿಮೆಯಾಗಿದೆ.ಸರ್ಕಾರ ನಡೆಸುವವರು ಎಷ್ಟು ಬೇಗ ಹಳ್ಳಿಯಿಂದ ಯೋಜನೆಗಳು ನಗರದ ಕಡೆ ಹೋಗಬೇಕು. ಅಗ್ಗದ ದರದ ಕೂಲಿಗೆ ದುಡಿಯುವ ಹಾಗೆ ನೀತಿ ರೂಪಿಸುತ್ತಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳ ಹಿಡಿತಕ್ಕೆ ಕೃಷಿ ಕ್ಷೇತ್ರ, ರೈತರು ಸಿಲುಕಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಪಾಠ ಕಲಿಸುವ ಕೆಲಸವನ್ನು ರೈತಸಂಘ ಮಾಡಿದೆ. ಈಗ ನೀರಿನ ಸದ್ಬಳಕೆ ವಿಚಾರದಲ್ಲೂ ಇಡೀ ಸಮಾಜಕ್ಕೆ ಪಾಠ ಮಾಡುವ ಕೆಲಸವನ್ನೂ ರೈತರೇ ಮಾಡಬೇಕಿದೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಲೇಖಕ ಡಿ. ಹೊಸಹಳ್ಳಿ ಶಿವು, ಸುನೀತಾ ಪುಟ್ಟಣ್ಣಯ್ಯ ಅವರು ರೈತನಾಯಕ ಪುಟ್ಟಣ್ಣಯ್ಯ ಅವರು ನಡೆದು ಬಂದ ಹೋರಾಟದ ಹಾದಿಯನ್ನು ಸ್ಮರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳ್ ವಿಜಯಕುಮಾರ್, ರೈತ ನಾಯಕಿ ನಂದಿನಿ ಜಯರಾಮ್,ಮುಖಂಡರಾದ ಹರೀಶ್,ಎಣ್ಣೆಹೊಳೆ ಕೊಪ್ಪಲು ಮಂಜುನಾಥ್ ಸೇರಿದಂತೆ ಇತರರಿದ್ದರು.




