ಖ್ಯಾತ ಸಾಹಿತಿಗಳಾದ ಪು.ತಿ.ನರಸಿಂಹಚಾರ್ ಹಾಗೂ ಕೆ.ಎಸ್. ನರಸಿಂಹಸ್ವಾಮಿರವರ ಟ್ರಸ್ಟ್ ಚಟುವಟಿಕೆಗಳಿಗೆ ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಿದ್ದು, ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರಿನ ವಿಕಾಸಸೌಧ ಸಭಾಂಗಣದಲ್ಲಿದಂದು ಅವರು ಪು.ತಿ.ನ ಹಾಗೂ ಕೆ.ಎಸ್.ನ ಟ್ರಸ್ಟ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಜನಿಸಿದ ಇಬ್ಬರೂ ಸಾಹಿತಿಗಳು ಇಡೀ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯವಾಗಿವೆ. ಇವರಿಬ್ಬರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಾರಂಭಿಸಿರುವ ಟ್ರಸ್ಟ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದಾಗಿ ಹೇಳಿದರು.
ಮೇಲುಕೋಟೆಯಲ್ಲಿರುವ ಪು.ತಿ.ನ ರವರ ಮನೆಯನ್ನು ಈಗಾಗಲೇ ನವೀಕರಣಗೊಳಿಸಲಾಗಿದೆ. ಸಮಾಧಿ ಸ್ಥಳ ಅಭಿವೃದ್ಧಿ ಮಾಡಲು ಬಹಳ ದಿನಗಳಿಂದ ಬೇಡಿಕೆಯಿದೆ . ಬಯಲು ರಂಗಮಂದಿರಕ್ಕೆ ಮೇಲ್ಛಾವಣಿ ಹಾಕಿಸುವ ಕಾರ್ಯ ಮತ್ತು ಅವರ ಸಾಹಿತ್ಯಗಳ ಮರುಮುದ್ರಣ ಹಾಗೂ ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ಅಗತ್ಯ ನೆರವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಮಾಡಲಾಗುವುದು ಎಂದು ಚಲುವರಾಯಸ್ವಾಮಿರವರು ತಿಳಿಸಿದರು.
ಈಗಾಗಲೇ ಆರ್ಥಿಕ ವರ್ಷ ಕೊನೆಯಲ್ಲಿರುವುದರಿಂದ ಉಳಿಕೆ ಅನುದಾನ ಪಡೆದು ಒಂದು ವೇಳೆ ಸಾದ್ಯವಾಗದಿದ್ದರೆ ಹೊಸ ಬಜೆಟ್ನಲ್ಲಿ ಹಣಕಾಸು ನೆರವು ಪಡೆದು ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಕೃಷಿ ಸಚಿವರು ಆಶ್ವಾಸನೆ ನೀಡಿದರು.
ಇದೇ ರೀತಿ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಕೆ.ಎಸ್. ನರಸಿಂಹಸ್ವಾಮಿರವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದು, ಕೆ.ಎಸ್.ನ ರವರಿಗೆ ಸ್ಪೂರ್ತಿ ನೀಡಿದ ಕೆರೆಯನ್ನು ಸಣ್ಣ ನೀರಾವರಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ನೆರವಿನೊಂದಿಗೆ ವಿಹಾರ ಧಾಮವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯವನ್ನು ಸಹ ಕೈಗೊಳ್ಳಲಾಗುವುದೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಇಬ್ಬರೂ ಸಾಹಿತಿಗಳು, ಕುವೆಂಪು, ಬೇಂದ್ರೆಯಷ್ಟೇ ಮಹೋನ್ನತರಾಗಿದ್ದು, ಮಂಡ್ಯ ಜಿಲ್ಲೆಗೆ ಅಪಾರ ಕೀರ್ತಿ ತಂದಿದ್ದಾರೆ. ಅವರ ಹಿರಿಮೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ, ಕಾಪಾಡಿಕೊಳ್ಳುವ ಜವಾಬ್ದಾರಿ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಮೇಲಿದೆ. ಎಲ್ಲರೂ ಒಗ್ಗೂಡಿ ಕೆ.ಎಸ್.ನ ಹಾಗೂ ಪು.ತಿ.ನರವರ ಜೀವನ, ಸಾಧನೆ, ಆದರ್ಶಗಳನ್ನು ಜಗಕ್ಕೆ ಪಸರಿಸೋಣ ಎಂದು ಚಲುವರಾಯಸ್ವಾಮಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಎರಡೂ ಟ್ರಸ್ಟ್ ಗಳಿಗೆ ಹೊಸ ಸ್ವರೂಪ ನೀಡಲಾಗುವುದೆಂದು ತಿಳಿಸಿದರು.
ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಟ್ರಸ್ಟ್ ಆಶಯಗಳು, ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಎರಡೂ ಟ್ರಸ್ಟ್ ಗಳ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.




