Thursday, November 19, 2026

ಪ್ರಾಯೋಗಿಕ ಆವೃತ್ತಿ

ಎಸ್ಸಿ, ಎಸ್ಟಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ; ಶ್ರೀನಿವಾಸ ಪೂಜಾರಿ

ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿಗಳಿಗೆ ಸೇರಿದಂತೆ ಇತರೆ ಕಾರ್ಯಕ್ರಮಕ್ಕೆ ಬಳಸಿ, ಎಸ್ಸಿ, ಎಸ್ಟಿ ಸಮುದಾಯದ ವಿರೋಧಿ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ 14 ತಂಡ ರಚಿಸಿ ಪ್ರತಿ ತಂಡಕ್ಕೆ 2 ಲೋಕಸಭಾ ಕ್ಷೇತ್ರಗಳ ಹಂಚಿ ರಾಜ್ಯದಲ್ಲಿ ಪ್ರಸ್ತುತ ಸರ್ಕಾರ ಎಸ್ಸಿ ಎಸ್ಟಿಗೆ ನೀಡಿದ ಅನುದಾನ ದುರ್ಬಳಕೆ ಮಾಡುತ್ತಿದ್ದು, ಆ ಹಣವನ್ನು ಎಸ್ಸಿ ಎಸ್ಟಿ ಸಮುದಾಯಕ್ಕೆ ಬಳಸಲು ಆಗ್ರಹಿಸಲಾಗುತ್ತಿದೆ ಎಂದರು.

೨೦೨೩ರಲ್ಲಿ ಎಸ್ಸಿ, ಎಸ್ಟಿಗೆ ಮೀಸಲಿರಿಸಿದ ೧೧,೧೪೪ ಕೋಟಿ ರೂ, ೨೦೨೪ರಲ್ಲಿ ೧೪,೨೮೨ ಸಾವಿರ ಕೋಟಿ ರೂ ಹಣವನ್ನು ಗ್ಯಾರೆಂಟಿಗೆ ಬಳಸಿದ್ದು, ಈಗ ೨೦೨೫ರಲ್ಲಿ ಮಂಡನೆ ಮಾಡುವ ಬಜೆಟ್‌ನಲ್ಲಿ ೧೪,೪೮೮ ಸಾವಿರ ಕೋಟಿ ತೆಗೆದಿಡಲು ಯೋಜನೆ ರೂಪಿಸುತ್ತಿದೆ. ೨೦೨೩ರಿಂದ ೨೫ರವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರಿಸಿದ ೩೯,೯೧೪ ಸಾವಿರ ಕೋಟಿಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಗ್ಯಾರಂಟಿಗೆ ಎಸ್ಸಿಪಿ ಹಾಗೂ ಟಿಎಸ್ಪಿ ಹಣವನ್ನು ಬಳಸಿಕೊಂಡು ಪರಿಶಿಷ್ಠರ ಹಣವನ್ನು ಪರಿಶಿಷ್ಠರಿಗೆ ನೀಡಲಾಗುತ್ತಿದೆ ಎಂದು ಹೇಳುತ್ತಿರುವ ಸರ್ಕಾರ ಗ್ಯಾರೆಂಟಿ ಯೋಜನೆಯು ಎಲ್ಲ ವರ್ಗದವರಿಗೂ ದೊರೆಯುತ್ತಿದ್ದು, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಹಾಗೂ ಸಾಮಾನ್ಯ ವರ್ಗದ ಹಣವನ್ನು ಯಾಕೆ ಗ್ಯಾರೆಂಟಿಗೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು.

ಇದು ಸಾಲದಂತೆ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾರಿ ಇರುವಂತಹ ವಿವಿಧ ನಿಗಮಗಳಿಗೂ ಮೀಸಲಿರಿಸಲಾದ ೩೩೨ ಸಾವಿರ ಕೋಟಿ ಹಣದಲ್ಲಿ ಕನಿಷ್ಠ ಮಟ್ಟದ ಹಣವನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳಿಗೆ ಬಳಸಿ, ಬೃಹತ್ ಮೊತ್ತದ ಹಣವನ್ನು ಗ್ಯಾರೆಂಟಿಗೆ ವಿನಿಯೋಗಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಬಾಲರಾಜು, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಜಿಲ್ಲಾ ಮುಖಂಡರಾದ ಸಚ್ಚಿದಾನಂದ, ಅಶೋಕ್ ಜಯರಾಂ, ಅರುಣ್‌ಕುಮಾರ್, ಎಸ್.ಪಿ.ಸ್ವಾಮಿ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ