ಬೆಂಗಳೂರಿನ ವಿಜಯನಗರದ ರೋಟರಿ ಸಂಸ್ಥೆ ಸಹಯೋಗದಲ್ಲಿ ಮಂಡ್ಯ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಚಿಕ್ಕಮಂಡ್ಯದಲ್ಲಿ ಡ್ರೋನ್ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಪನಿರ್ದೇಶಕ (ಅಭಿವೃದ್ಧಿ) ಹಾಗೂ ಮಂಡ್ಯದ ಡಯಟ್ ಪ್ರಾಂಶುಪಾಲ ಪುರುಷೋತ್ತಮ್ ಅವರು, ವಿಜ್ಞಾನಿ ಆಲ್ಬರ್ಟ್ ಐನ್ಸ್ ಸ್ಟೀನ್ ಅವರ ಧರ್ಮವಿಲ್ಲದ ವಿಜ್ಞಾನವು ಕುಂಟಾಗಿದೆ. ವಿಜ್ಞಾನವಿಲ್ಲದ ಧರ್ಮವು ಕುರುಡಾಗಿದೆ ಎಂಬ ಮಾತನ್ನು ಉಲ್ಲೇಖಿಸಿ ಧರ್ಮದ ತಳಹದಿಯ ಮೇಲೆ ವಿಜ್ಞಾನದ ಬೆಳವಣಿಗೆಯಾದಾಗ ಮನುಕುಲದ ವಿನಾಶವನ್ನು ತಪ್ಪಿಸಬಹುದು. ಇಂತಹ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಆಯೋಜಿಸುತ್ತಿರುವುದು ಶ್ಲಾಘನೀಯ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಇದು ತುಂಬಾ ಸಹಕಾರಿಯಾಗಿದೆ ಎಂದರು.

ಬೆಂಗಳೂರು ವಿಜಯನಗರದ ರೋಟರಿ ಸಂಸ್ಥೆ ಅಧ್ಯಕ್ಷ ಶಶಿಮೌಳಿ ಅವರು, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ತಮ್ಮ ಸಂಸ್ಥೆಯು ಹಲವಾರು ಯೋಜನೆಗಳು ರೂಪಿಸಿಕೊಂಡು ಕಾರ್ಯಗತ ಮಾಡುತ್ತಿದೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಪ್ರೌಢಶಾಲಾ ಹಂತದಲ್ಲಿಯೇ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಆಸಕ್ತಿ ಕೆರಳಿಸಿ ಉದ್ಯೋಗ ಸೃಷ್ಟಿಗೆ ಇರಬಹುದಾದ ಅವಕಾಶಗಳನ್ನು ಮನದಟ್ಟು ಮಾಡಿಕೊಟ್ಟು ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಜನರ ನಾಡಿ ಮಿಡಿತ ನಿಮ್ಮ ಮುಂದಿಡುವ ನುಡಿ ಕರ್ನಾಟಕ.ಕಾಂಗೆ (ಮಂಡ್ಯ ಡಿಜಿಟಲ್ ಮೀಡಿಯಾ) ದೇಣಿಗೆ ನೀಡುವ ಮೂಲಕ ಬೆಂಬಲಿಸಿ
ಸ್ವತಂತ್ರ ಮಾಧ್ಯಮಗಳಿಗೆ ನಿಮ್ಮ ಬೆಂಬಲವೆ ಬಲ.. ಸಾಧ್ಯವಾದಷ್ಟು ದೇಣಿಗೆ ನೀಡಿ..
ಡ್ರೋನ್ ತಂತ್ರಜ್ಞಾನ ತಂಡವು ಡ್ರೋನ್ ನ ವಿವಿಧ ಭಾಗಗಳು, ರಚನೆ, ಉಪಯೋಗದ ಬಗ್ಗೆ ಪಿಪಿಟಿ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು. ಬಳಿಕ ಫ್ಲೈ ಕ್ಯಾಂಪ್ ಜೊತೆಗೆ ಮಕ್ಕಳೇ ಡ್ರೋನ್ ನ ಬಿಡಿಭಾಗಗಳನ್ನು ಜೋಡಿಸಿ ಹಾರಿಸುವ ಪ್ರತ್ಯಕ್ಷ ಅನುಭವವನ್ನು ಪಡೆದರು. ಮಕ್ಕಳ ಉತ್ಸಾಹವನ್ನು ಈ ಕಾರ್ಯಕ್ರಮವು ಖುಷಿ ಇಮ್ಮಡಿಗೊಳಿಸಿತು. ಮಕ್ಕಳು ಈ ಕಾರ್ಯಕ್ರಮದಿಂದ ಬಹಳಷ್ಟು ಪ್ರೇರೇಪಿತರಾಗಿ ನೂತನ ತಂತ್ರಜ್ಞಾನದತ್ತ ಆಕರ್ಷಿತರಾದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆ ಚಿಕ್ಕಮಂಡ್ಯದ ಮುಖ್ಯ ಶಿಕ್ಷಕ ಎಚ್ಎನ್ ದೇವರಾಜು ಮಾತನಾಡಿ, ರೋಟರಿ ಸಂಸ್ಥೆಯವರು ಶಾಲೆಯ ಕ್ರೀಡಾಕೂಟಕ್ಕಾಗಿ ಸ್ಮಾರ್ಟ್ ಕ್ಲಾಸ್ ಹಾಗೂ ಇನ್ನಿತರ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿರುವುದನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
ವೈಜ್ಞಾನಿಕ ದೃಷ್ಟಿಕೋನದ ಬಗ್ಗೆ ರಾಷ್ಟ್ರಕವಿ ಕುವೆಂಪುರವರ ಬದ್ಧತೆಯನ್ನು ನೆನಪಿಸುತ್ತ ಈ ದಿಸೆಯಲ್ಲಿ ವಿದ್ಯಾರ್ಥಿಗಳು ಏನು? ಏಕೆ? ಹೇಗೆ? ಎಂಬ ಪ್ರಶ್ನಿಸುವ ಮನೋಭಾವವನ್ನು ರೂಪಿಸಿಕೊಂಡು ಕ್ರಿಯಾಶೀಲ ಕಲಿಕೆಗೆ ಮುಂದಾಗಬೇಕೆಂದು ಮಕ್ಕಳನ್ನು ಪ್ರೇರೇಪಿಸಿದರು.

6ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ರೋಟರಿ ವಿಜಯನಗರ ಸಂಸ್ಥೆಯ ಪದಾಧಿಕಾರಿಗಳು ಫ್ಲೈ ಕ್ಯಾಂಪ್ ನ ಯುವ ವಿಜ್ಞಾನಿಗಳ ತಂಡ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್. ದೇವರಾಜ್ ಅವರು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ಎಂ. ವಿನಯ್ ಕುಮಾರ್ ಅವರು ಮತ್ತು ಚಿತ್ರಕೂಟ ಸಂಸ್ಥೆಯ ಸಂತೋಷ್, ಉಪ ನಿರ್ದೇಶಕರ ಕಚೇರಿಯ ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕ ಲೋಕೇಶ್, ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





