ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದೆ.
ಬೂದನೂರು ಗ್ರಾಪಂ ಸದಸ್ಯ ಬಿ.ಟಿ.ಚಿಕ್ಕಸಿದ್ದಯ್ಯ ಅವರ ಮನೆಯಲ್ಲಿ ಕೃತ್ಯ ನಡೆದಿದ್ದು, ₹ 1.80 ಲಕ್ಷ ನಷ್ಟ ಸಂಭವಿಸಿದೆ.
ಕಳೆದ 2 ವರ್ಷಗಳಿಂದ ಮನೆ ನಿರ್ಮಾಣ ಮಾಡುತ್ತಿದ್ದ ಚಿಕ್ಕಸಿದ್ದಯ್ಯ ಅವರು ತಿಂಗಳ ಹಿಂದೆ ವಿದ್ಯುತ್ ತಂತಿ ಅಳವಡಿಸಿ, ಸ್ವಿಚ್ ಅಳವಡಿಸಲು ಮುಂದಾಗಿದ್ದರು. ನೆಲ ಅಂತಸ್ತು ಹಾಗೂ ಮೊದಲನೇ ಮಹಡಿ ಸೇರಿದಂತೆ ಮನೆಯ ಎಲ್ಲ ಭಾಗಕ್ಕೂ ವಿದ್ಯುತ್ ತಂತಿ ಅಳವಡಿಸಲಾಗಿತ್ತು. ಬೆಳಿಗ್ಗೆ ಕೆಲಸಗಾರರು ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.




