ಹುಟ್ಟಿದ್ದು ಕರಾವಳಿ ಭಾಗದಲ್ಲಾದರೂ ಭಾವನಾತ್ಮಕವಾಗಿ ನನ್ನ ತವರು ಮನೆ ಮಂಡ್ಯ ಜಿಲ್ಲೆಯೇ ಆಗಿದ್ದು, ಜಿಲ್ಲೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಹೇಳಿದರು.
ಮಂಡ್ಯ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಅಧ್ಯಾಪನ ಟ್ರಸ್ಟ್ ಸಹಯೋಗದಲ್ಲಿ ನಡೆದ ಅಭಿನಂದನೆ ಮತ್ತು ಡೈರಿ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಾನು ಮಂಡ್ಯದಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ನನಗೆ ನೀವು ಕೊಟ್ಟ ಪ್ರೋತ್ಸಾಹ ದೊಡ್ಡದು. ಮನೆ ಮಗನಂತೆ ನನಗೆ ಅನ್ನ ನೀಡಿದ್ದಾರೆ. ಇಲ್ಲಿ ನಾನು ಎಲ್ಕೆಜಿ ಮಗುವಿನಂತೆ ಕಲಿತು ಬೆಂಗಳೂರಿಗೆ ಹೋದಾಗ ಅಲ್ಲಿ ಇಲ್ಲಿ ಕಲಿತ ಎಲ್ಲವನ್ನು ಪ್ರಯೋಗ ಮಾಡುತ್ತಾ ಬಂದಿದ್ದರಿಂದ ಯಶಸ್ವಿಯಾಗಿದ್ದೇನೆ ಎಂದು ಸ್ಮರಿಸಿದರು.
ಮಂಡ್ಯ ಜಿಲ್ಲೆಯನ್ನು ಮರೆಯುವಂತಿಲ್ಲ. ನಾನು ಬೆಂಗಳೂರಿನಲ್ಲಿದ್ದರೂ ನನ್ನ ಮನಸ್ಸು ಮಂಡ್ಯಕ್ಕಾಗಿ ತುಡಿಯುತ್ತಿದೆ. ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯನಾಗಿದ್ದಲೂ ಮಂಡ್ಯದ ನನ್ನ ಸ್ನೇಹಿತರ ಮಾರ್ಗದರ್ಶನ ದಂತೆ ಕೆಲಸ ಮಾಡಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿರುವ ತೃಪ್ತಿ ನನಗಿದೆ. ಕರಾವಳಿ ಭಾಗದಲ್ಲಿ ಹುಟ್ಟಿದರೂ ಮಂಡ್ಯ ಜಿಲ್ಲೆ ನನ್ನ ತವರು ಮನೆ ಇದ್ದಂತೆ. ಮುಂದೆಯೂ ನನ್ನ ಶಕ್ತಿ ಮೀರಿ ಮಂಡ್ಯ ಜಿಲ್ಲೆಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಪಿ.ರವಿಕುಮಾರ್ಗೌಡ ಗಣಿಗ ಮಾತನಾಡಿ, ಪ್ರಸ್ತುತ ಪತ್ರಕರ್ತರಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಗಳು ಸಿಗುತ್ತಿವೆ. ಇದರಿಂದ ಪತ್ರಕರ್ತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿದೆ. ನೂರಾರು ಜನರ ಸಮಸ್ಯೆಗಳ ನಿವಾರಿಸಲು ಪತ್ರಕರ್ತರ ಹುದ್ದೆ ಉನ್ನತವಾಗಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಅಭಿವೃದ್ಧಿಗೆ (ಲಿಪ್ಟ್ ಆಳವಡಿಕೆಗೆ)ಶಾಸಕರ ಅನುದಾನ ಬಿಡುಗಡೆ ಮಾಡಿಕೊಡಲಾಗುವುದು. ಇನ್ನು ವಾರದಲ್ಲಿ ಗುದ್ದಲಿ ಪೂಜೆ ಮಾಡಲಾಗುವುದು. ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ನಡೆಯುತ್ತಿದೆ.
ವೈಯಕ್ತಿಕವಾಗಿ ಯಾರ ವಿಚಾರವನ್ನು ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ಅದು ಬೇರೆ ರೀತಿಯೇ ಆಗಿಬಿಡುತ್ತದೆ. ಪತ್ರಿಕೋದ್ಯಮ ಒಂದು ದೇವಸ್ಥಾನ ಇದ್ದಂತೆ. ನಿಮ್ಮ ಬರಹ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಿರಬೇಕು. ಬರೆಯುವುದನ್ನು ಜನ ನಂಬುತ್ತಾರೆ. ಆದ್ದರಿಂದ ಸಮಾಜದ ಒಳಿತಿಗಾಗಿ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪತ್ರಿಕಾರಂಗ ವಿಶೇಷವಾದ ರಂಗವಾಗಿದೆ. ಪತ್ರಿಕೋದ್ಯಮದಲ್ಲಿರುವ ಪತ್ರಕರ್ತರು ವಿಶೇಷವಾದ ಶಕ್ತಿ, ಆಸಕ್ತಿ ಹೊಂದಿರುತ್ತಾರೆ. ನೈತಿಕತೆಯಿಂದ ಸಮಾಜದಲ್ಲಿ ನಿಂತು ಆಗು-ಹೋಗುಗಳನ್ನು ಅತ್ಯಂತ ಕಠೋರವಾಗಿ ಬರೆಯುವಂಥ ಶಕ್ತಿ ಇರಬೇಕು. ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ತಿಳಿಸಬೇಕು. ಎಲ್ಲವನ್ನು ನೋಡಿಕೊಂಡು ಕಣ್ಮುಚ್ಚಿ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.
ಆತ್ಮಾವಲೋಕನ, ವಿಶ್ಲೇಷಣೆ ಮಾಡಬೇಕು. ಸೋಶಿಯಲ್ ಮಿಡಿಯಾ ಪ್ರಭಾವದಿಂದ ಪತ್ರಿಕೋದ್ಯಮಕ್ಕೆ ಎಡರು-ತೊಡರುಗಳು ಉಂಟಾಗಿದೆ. ಪತ್ರಿಕೆಗಳ ವಿಷಯಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದಾರೆ. ಪೈಪೋಟಿ ಅನಾರೋಗ್ಯ ಬಿಟ್ಟು ಆರೋಗ್ಯಕರವಾದ ಪೈಪೋಟಿ ಇರಬೇಕು. ಅನಾರೋಗ್ಯಕರವಾದರೆ ಯಶಸ್ಸು ಸಿಗುವುದಿಲ್ಲ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಹಾಗೂ ನೊಂದವರ ಪರ ನ್ಯಾಯ ಒದಗಿಸುವ ಶಕ್ತಿ ನಿಮ್ಮಲ್ಲಿದೆ. ಅದು ಮುಂದುರೆಯಬೇಕು ಎಂದು ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಅವರು ಅಭಿನಂದಿತರನ್ನು ಕುರಿತು ಮಾತನಾಡಿದರು. ಅಧ್ಯಾಪನ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ಹೊರತಂದಿರುವ ಡೈರಿಯನ್ನು ಬಿಡುಗಡೆ ಮಾಡಲಾಯಿತು.
ನಂತರ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಹಾಗೂ ಮಾಧ್ಯಮ ಮಾನ್ಯತಾ ಸಮಿತಿಯ ಸದಸ್ಯ ಡಿ.ಶಶಿಕುಮಾರ್ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಖಜಾಂಚಿ ನಂಜುಂಡಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಜೆ.ಎಂ.ಬಾಲಕೃಷ್ಣ ಸೇರಿದಂತೆ ಮತ್ತಿತರರಿದ್ದರು.




