Friday, November 20, 2026

ಪ್ರಾಯೋಗಿಕ ಆವೃತ್ತಿ

ಅಮೆರಿಕಾ | ಟ್ರಂಪ್ ಆಡಳಿತದಲ್ಲಿ 4 ದೇಶಗಳ 5.32 ಲಕ್ಷ ನಾಗರಿಕರ ಗಡಿಪಾರು!

ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾದ ಲಕ್ಷಾಂತರ ನಾಗರಿಕರಿಗೆ ನೀಡಿದ್ದ ಕಾನೂನು ರಕ್ಷಣೆಗಳನ್ನು ರದ್ದುಗೊಳಿಸುವುದಾಗಿ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿದ್ದು, ಮುಂದಿನ ಒಂದು ತಿಂಗಳಲ್ಲಿ ಅವರನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ.

ಈ ಆದೇಶವು ಅಕ್ಟೋಬರ್ 2022ರ ನಂತರ ಅಮೆರಿಕ್ಕೆ ಬಂದಿರುವ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ. ಆರ್ಥಿಕ ಪ್ರಾಯೋಜಕರೊಂದಿಗೆ ಅಮೆರಿಕಕ್ಕೆ ಬಂದಿರುವ ಇವರು, ಎರಡು ವರ್ಷಗಳ ಕಾಲ ದೇಶದಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಅರ್ಹರು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೇಳಿದ್ದಾರೆ.

ಹೊಸ ನೀತಿಯು ಈಗಾಗಲೇ ಅಮೆರಿಕದಲ್ಲಿರುವ ಮತ್ತು ಮಾನವೀಯ ಪೆರೋಲ್ ಕಾರ್ಯಕ್ರಮದ ಅಡಿಯಲ್ಲಿ ಬಂದ ಜನರ ಮೇಲೆ ಪರಿಣಾಮ ಬೀರಲಿದೆ.

ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರು ಅಮೆರಿಕಕ್ಕೆ ಪ್ರವೇಶಿಸಲು ಮತ್ತು ತಾತ್ಕಾಲಿಕವಾಗಿ ವಾಸಿಸಲು ಅಧ್ಯಕ್ಷರು ದೀರ್ಘಕಾಲದಿಂದ ಬಳಸುತ್ತಿರುವ ಕಾನೂನು ಸಾಧನವಾದ ಮಾನವೀಯ ಪೆರೋಲ್‌ನ “ವಿಶಾಲ ದುರುಪಯೋಗ”ವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತವು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ.

ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ಷಾಂತರ ಜನರನ್ನು ಗಡಿಪಾರು ಮಾಡುವುದಾಗಿ ಭರವಸೆ ನೀಡಿದ್ದರು. ಅಧ್ಯಕ್ಷರಾಗಿ ಅವರು ವಲಸಿಗರು ಅಮೆರಿಕಕ್ಕೆ ಬಂದು ಉಳಿಯಲು ಇರುವ ಕಾನೂನುಬದ್ಧ ಮಾರ್ಗಗಳನ್ನು ಸಹ ಕೊನೆಗೊಳಿಸುತ್ತಿದ್ದಾರೆ.

ಹೊಸ ಆದೇಶದ ಮೊದಲು, ಮಾನವೀಯ ಪೆರೋಲ್‌ನಲ್ಲಿ ಬಂದವರು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿಯೇ ಉಳಿಯಬಹುದಿತ್ತು. ಆದರೆ, ಟ್ರಂಪ್ ಆಡಳಿತ ಅವರಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುವ ಆಶ್ರಯ ವೀಸಾಗಳು ಮತ್ತು ಇತರ ವಿನಂತಿಗಳಿಗಾಗಿ ಅವರ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವುದನ್ನು ನಿಲ್ಲಿಸಿತ್ತು. ಸರ್ಕಾರದ ನಿರ್ಧಾರವನ್ನು ಈಗಾಗಲೇ ಫೆಡರಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ.

ಅಮೆರಿಕದ ನಾಗರಿಕರು ಮತ್ತು ವಲಸಿಗರ ಗುಂಪೊಂದು ಮಾನವೀಯ ಪೆರೋಲ್ ಅನ್ನು ಕೊನೆಗೊಳಿಸಿದ್ದಕ್ಕಾಗಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿದೆ ಮತ್ತು ನಾಲ್ಕು ರಾಷ್ಟ್ರಗಳಿಗೆ ನೀಡಿದ್ದ ಸೌಲಭ್ಯಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಈ ಹಿಂದಿನ ಬೈಡೆನ್‌ ಆಡಳಿತವು ನಾಲ್ಕು ದೇಶಗಳಿಂದ ತಿಂಗಳಿಗೆ 30,000 ಜನರು ಎರಡು ವರ್ಷಗಳ ಕಾಲ ಅಮೆರಿಕಕ್ಕೆ ಕೆಲಸ ಮಾಡುವ ಅರ್ಹತೆಯೊಂದಿಗೆ ಬರಲು ಅವಕಾಶ ಮಾಡಿಕೊಟ್ಟಿತ್ತು. ಈ ದೇಶಗಳ ಜನರನ್ನು ಗಡಿಪಾರು ಮಾಡಿದರೆ ಅವರನ್ನು ಸ್ವೀಕರಿಸಲು ಮೆಕ್ಸಿಕೊದ ಮನವೊಲಿಸಿತ್ತು.

ಕ್ಯೂಬಾ ಸಾಮಾನ್ಯವಾಗಿ ತಿಂಗಳಿಗೆ ಒಂದು ಗಡಿಪಾರು ವಿಮಾನದ ಮೂಲಕ ಹೋಗಲು ಒಪ್ಪಿಕೊಂಡಿತ್ತು. ಆದರೆ, ವೆನೆಜುವೆಲಾ ಮತ್ತು ನಿಕರಾಗುವಾ ಇದಕ್ಕೆ ಒಪ್ಪಿರಲಿಲ್ಲ. ಈ ಮೂರು ಅಮೆರಿಕದ ವಿರೋಧಿ ದೇಶಗಳಾಗಿವೆ.

2021 ರಲ್ಲಿ ಟೆಕ್ಸಾಸ್‌ನ ಡೆಲ್ ರಿಯೊ ಎಂಬ ಸಣ್ಣ ಗಡಿ ಪಟ್ಟಣದಲ್ಲಿ ಕೆರಿಬಿಯನ್ ದೇಶದ ವಲಸಿಗರ ಸಂಖ್ಯೆ ಹೆಚ್ಚಳವಾದಾಗ, ಹೈಟಿ ಅನೇಕ ಗಡಿಪಾರು ವಿಮಾನಗಳನ್ನು ಸ್ವೀಕರಿಸಿತ್ತು. ಆದರೆ, ಹೈಟಿ ನಿರಂತರ ಪ್ರಕ್ಷುಬ್ಧತೆಯಲ್ಲಿದೆ, ಇದು ಅಮೆರಿಕದ ಪ್ರಯತ್ನಗಳಿಗೆ ಅಡ್ಡಿಯಾಯಿತು.

2022ರ ಅಂತ್ಯದಿಂದ, ಸಿಹೆಚ್‌ಎನ್‌ವಿ ಎಂದೂ ಕರೆಯಲ್ಪಡುವ ಈ ನೀತಿಯಡಿಯಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಮೆರಿಕಕ್ಕೆ ಬಂದಿದ್ದಾರೆ. ಅಕ್ರಮವಾಗಿ ಗಡಿ ದಾಟಿದವರನ್ನು ಹತ್ತಿಕ್ಕುವಾಗ, ಹೊಸ ಕಾನೂನು ಮಾರ್ಗಗಳ ಮೂಲಕ ಬರುವಂತೆ ಜನರನ್ನು ಪ್ರೋತ್ಸಾಹಿಸುವುದು ಬೈಡೆನ್‌ ಆಡಳಿತದ ವಿಧಾನದ ಒಂದು ಭಾಗವಾಗಿತ್ತು.

ಕೃಪೆ :ನಾನು ಗೌರಿ.ಕಾಂ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ