ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಛತ್ರಿ’ ಹೇಳಿಕೆ ವಿರುದ್ದ ಮಂಗಳವಾರ ಮಂಡ್ಯ ಜಿಲ್ಲಾ ರೈತ ಸಂಘ (ಏಕೀಕರಣ)ದ ಕಾರ್ಯಕರ್ತರು ಮಂಗಳವಾರ`ಛತ್ರಿ’ ಚಳವಳಿ ನಡೆಸಿ, ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಇಂಡುವಾಳು ಚಂದ್ರಶೇಖರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ಕೆಲ ಹೊತ್ತು ಮಾನವ ಸರಪಳಿ ರಚಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಜೆ.ಸಿ. ವೃತ್ತದಲ್ಲಿ ಡಿಕೆಶಿ ಕನಕಪುರದ ಬಂಡೆ, ಛತ್ರಿ ಪೋಸ್ಟರ್ ಪ್ರದರ್ಶಿಸಿ, ಕಲ್ಲನ್ನು ಸುತ್ತಿಗೆಯಿಂದ ಹೊಡೆದು ಮಂಡ್ಯದ ಜನರನ್ನು ಛತ್ರಿಗಳು ಎಂದು ಕರೆದು ಅವಮಾನ ಮಾಡಿ ತಮ್ಮ ದುರಹಂಕಾರ ಪ್ರದರ್ಶಿಸಿದ್ದಾರೆ. ಮಂಡ್ಯಕ್ಕೆ ಬಂದು ಜನರ ಬಳಿ ಬಹಿರಂಗವಾಗಿ ಕ್ಷಮೆ ಕೋರುವವರೆಗೂ ಹೋರಾಟ ಬಿಡಲ್ಲ, ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದರು.
`ಛತ್ರಿ’ ಎಂದು ಕರೆದು ಅವಮಾನ ಮಾಡಿದ್ದಾರೆ
ಮುಖಂಡ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮಂಡ್ಯ ಜಿಲ್ಲೆಗೆ ಬಂದು ನನಗೂ ಪೆನ್ನು ಪೇಪರ್ ಕೊಡಿ ಎಂದು ಜಿಲ್ಲೆಯ ಜನರ ಬಳಿ ಬೇಡಿಕೊಂಡಾಗ ಅವರ ಮನವಿಗೆ ಸ್ಪಂದಿಸಿ, 6 ಶಾಸಕರನ್ನು ಗೆಲ್ಲಿಸಿ ಅಧಿಕಾರ ಕೊಟ್ಟರು. ಅಂತಹ ಜನರನ್ನು `ಛತ್ರಿ’ ಎಂದು ಕರೆದು ಅವಮಾನ ಮಾಡಿದ್ದಾರೆ. ಭೂಗಳ್ಳ, ಕಲ್ಲು ಕಳ್ಳ, ತಿಹಾರ್ ಜೈಲಿನಲ್ಲಿದ್ದವರಿಗೆ ಮಂಡ್ಯದ ಜನರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಒಬ್ಬ ಸಾಮಾನ್ಯ ಗ್ರಾಪಂ ಅಧ್ಯಕ್ಷರಾಗಲೂ ಅರ್ಹತೆ ಇಲ್ಲ ಎಂದು ಟೀಕಿಸಿದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತ ಕೇಳಲು ಬಂದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಜನರು ಅವರ ಮೇಲೆ ಮೊಟ್ಟೆ, ಸಗಣಿ ಮಸಿ ಬಳಿಯಲು ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಕೆ.ಆರ್.ಎಸ್.ನ 18ನೇ ನಂಬರ್ ಗೇಟ್ನಿಂದ 5 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಅಳವಡಿಸಿರುವ ಗೇಟ್ನಿಂದ ಆದೇಶವಿಲ್ಲದೆ ನೀರು ಬಿಡಲು ಆಗಲ್ಲ. ಆದರೆ, ಇವರು ಬಿಡುವ ಮೂಲಕ ರಾಜ್ಯಕ್ಕೆ ದ್ರೋಹವೆಸಗಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಶ್ಗೌಡ, ರೈತಸಂಘದ ಉಪಾಧ್ಯಕ್ಷ ಎಂ.ಕೆ.ಸಂಜಯ್ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ರಮೇಶ್, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




