2020-21ನೇ ಸಾಲಿನ ಸಿ.ಎಸ್.ಆರ್ ಅನುದಾನದಡಿ ಜಿಲ್ಲೆಯಲ್ಲಿ ಕೈಗೊಂಡಿದ್ದ 6 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವರ್ಕ್ ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದ್ದು,ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ.ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ತನಿಖೆ ನಡೆಸುವಂತೆ ಸಂಪೂರ್ಣ ದಾಖಲಾತಿ ನೀಡಿ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಯತ್ತಂಬಾಡಿ ಮಧು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಮಿತಿ ಕೇಂದ್ರ, ಮಂಡ್ಯ ಮತ್ತು NEST-IN ಟಾಟಾ ಸ್ಟೀಲ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡುವೆ Unsigned Documents ಗಳ ಒಪ್ಪಂದ ಆಧಾರದಲ್ಲಿ ಕಳಪೆ ಕಾಮಗಾರಿ ನಡೆಸಿ ನಕಲಿ ಬಿಲ್ ಸೃಷ್ಟಿಸಿದ್ದಾರೆ. ಹಣ ಡ್ರಾ ಮಾಡಲು ಮುಖ್ಯಮಂತ್ರಿಗಳ ಸಚಿವಾಲಯದ ಪ್ರಭಾವ ಬಳಸಿ ಹಣ ದುರ್ಬಳಕೆ ಮಾಡಿರುವ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ವ್ಯವಸ್ಥಾಪಕ ನರೇಶ್, ಸೈಟ್ ಇಂಜಿನಿಯರ್ ಎಂ.ಎಸ್. ನಿಶಾಂತ್ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ, ಶಿಸ್ತು ಕ್ರಮ ಕೈಗೊಳ್ಳಬೇಕು.ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಡ್ಡಿ ಸಮೇತ ದುರುಪಯೋಗವಾಗಿರುವ ಹಣವನ್ನು ವಸೂಲಾತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಸಿಮೆಂಟ್ ನಲ್ಲೂ ವ್ಯತ್ಯಾಸ
6 ಕೈಗಾರಿಕಾ ತರಬೇತಿ ಸಂಸ್ಥೆಗಳ ಕಾಮಗಾರಿಗಳಿಗೆ ಉಪಯೋಗಿಸಿರುವ ಸಿಮೆಂಟ್ ಬಳಕೆಯಲ್ಲಿ ವ್ಯತ್ಯಾಸವಿದ್ದು, ಸದರಿ ಒಂದೇ ಅಂದಾಜು ಮೊತ್ತ ಹೊಂದಿರುವ 6 ಕಾಮಗಾರಿಗಳಲ್ಲಿ ಚಿನಕುರಳಿ ಹೊರತುಪಡಿಸಿ ಉಳಿದ 5 ಕಾಮಗಾರಿಗಳ ಸಿಮೆಂಟ್ ಬಳಕೆಗೆ ಸಂಬಂಧಿಸಿದಂತೆ ಡ್ರಾ ಮಾಡಿರುವ ಹಣ ಸರಿ ಸುಮಾರು ಆಸುಪಾಸಿನಲ್ಲಿದೆ.ಮದ್ದೂರಿನ ಸೋಮನಹಳ್ಳಿ ಕಾಲೇಜಿಗೆ ಸಿಮೆಂಟಿಗಾಗಿ 4,78,500,ಮಂಡ್ಯ ಕಾಲೇಜಿಗೆ 1,98,000,ಕೆ.ಆರ್.ಪೇಟೆ ಕಾಲೇಜಿಗೆ 2,96,000 ರೂ.,ನಾಗಮಂಗಲ ಹಾಗೂ ಮಳವಳ್ಳಿ ಕಾಲೇಜಿಗೆ ತಲಾ 5,28,000 ರೂ.ಸಿಮೆಂಟಿಗೆ ಖರ್ಚಾಗಿದೆ. ಆದರೆ ಪಾಂಡವಪುರದ ಚಿನಕುರಳಿ ಕಾಲೇಜಿನ ಕಾಮಗಾರಿಗೆ ಬಳಕೆಯಾಗಿರುವ ಸಿಮೆಂಟ್ ಬಿಲ್ಲಿನ 26,58,500/-ರೂಗಳಿದ್ದು, ಅಂದಾಜು ಮೊತ್ತದಲ್ಲಿ ಶೇ.30% ರಷ್ಟಾಗಿರುತ್ತದೆ. ಅಂದಾಜು ಮೊತ್ತದಲ್ಲಿ ಶೇ. 100%ರಲ್ಲಿ 30% ಸಿಮೆಂಟ್ ಖರೀದಿಗೆ ಬಳಸಿದರೆ ಉಳಿದಂತೆ ಕಾರ್ಮಿಕರಿಗೆ, ಸಾಮಗ್ರಿಗಳಿಗೆ ಇತ್ಯಾದಿಗಳಿಗೆ 70% ಹೇಗೆ ಸಾಕಾಗುತ್ತದೆ?ಇದರಿಂದ ಸದರಿ ಕಾಮಗಾರಿಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಕಳಪೆ ಕಾಮಗಾರಿ ಮಾಡಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ, ಶಿಸ್ತುಕ್ರಮ ಕೈಗೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಡ್ಡಿ ಸಮೇತ ಲೂಟಿ ಮಾಡಿರುವ ಹಣವನ್ನು ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.
ಟಾಟಾ ಟೆಕ್ನಾಲಜಿಸ್ ಲಿ. (TATA Technologies) ರವರ ಸಹಭಾಗಿತ್ವದಲ್ಲಿ 64 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 7500 ಚ.ಅಡಿಗಳ ವರ್ಕ್ ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಮಾಡಲು, ಆಯುಕ್ತರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗರವರ ಆದೇಶ ಸಂಖ್ಯೆ ITE/Trg/Cr-TATA-DPP/2020-21, 04.03.2021 ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ” ಕ್ಕೆ ಷರತ್ತು ಬದ್ಧ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.ಅದರಂತೆ ಸಂಬಂಧಿತ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸುವ ಜವಾಬ್ದಾರಿಯನ್ನು ಕಾರ್ನಿಕ್ ಸಂಸ್ಥೆಗೆ ವಹಿಸಲಾಗಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರಗಳು ಅಧ್ಯಕ್ಷರಾದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಅದರಂತೆ ಮಂಡ್ಯ, ಮಳವಳ್ಳಿ , ನಾಗಮಂಗಲ, ಕೆ.ಆರ್. ಪೇಟೆ, ಮದ್ದೂರಿನ ಸೋಮನಹಳ್ಳಿ, ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಲ್ಲಿ ಐ.ಟಿ.ಐ ಕಾಲೇಜುಗಳ ವರ್ಕ್ ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಅಂದಾಜು ಮೊತ್ತ ಕ್ರಮವಾಗಿ 83.29 ಲಕ್ಷ ಮತ್ತು 20.29 ಲಕ್ಷ ಸಿದ್ಧವಾಗಿರುತ್ತದೆ. ಅದರಂತೆ ಮಂಡ್ಯ ಟೌನ್, ಐ.ಟಿ.ಐ ಕಾಲೇಜಿಗೆ ವರ್ಕ್ ಶಾಪ್ಗೆ, ಟೆಕ್ ಲ್ಯಾಬ್ ಉನ್ನತೀಕರಣಕ್ಕೆ ಮತ್ತು ಟೆಕ್ನಾಲಜಿ ಲ್ಯಾಬ್ ನಿರ್ಮಾಣಕ್ಕೆ ಅಂದಾಜು ಮೊತ್ತ ಕ್ರಮವಾಗಿ 83.29 ಮತ್ತು 20.29 ಲಕ್ಷಗಳಿಗೆ ಸಿದ್ದಪಡಿಸಿದ್ದರು.
ಆದರೆ ಈ ಕಾಮಗಾರಿಗಳ ಅಂದಾಜು ಮೊತ್ತಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಿದ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದರು.
ಇನ್ನು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಿಂದ ಆದೇಶ, ಸೂಚನೆಗಳ ಮಾಹಿತಿಗಳೂ ಕೂಡ ಲಭ್ಯವಿಲ್ಲ.ನಿರ್ಮಿತಿ ಕೇಂದ್ರ ನಿಧಿಯಲ್ಲಿರುವ ಹಣವನ್ನು ಅಧ್ಯಕ್ಷರ ಪೂರ್ವನುಮತಿಯಿಲ್ಲದೆ, ಕೆ.ಆರ್. ಪೇಟೆ ಐಟಿಐ ಕಾಲೇಜು ಕಾಮಗಾರಿಗೆ 44.62 ಲಕ್ಷ ರೂಗಳನ್ನು ಖರ್ಚು ಮಾಡಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ನಿಕ್, ನಿರ್ಮಿತಿ ಕೇಂದ್ರ ಮಂಡ್ಯ, ಟಾಟಾ ಟೆಕ್ನಾಲಜಿಸ್ ನಡುವೆ Unsigned documents ಕರಾರಿನಂತೆ ಕಾಮಗಾರಿಯನ್ನು ಪ್ರಾರಂಭಿಸಿ ನಕಲಿ ಬಿಲ್ ಸೃಷ್ಟಿಸಿ, ಹಣ ಬಿಡುಗಡೆ ಮಾಡಲಾಗಿದೆ ಎಂಬ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದು,ಅವರು ಇಲಾಖಾ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದವರು ಅಪರ ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಿ, ಕಾರ್ನಿಕ್ ಮತ್ತು ಟಾಟಾ ಸ್ಟೀಲ್ ಲಿ. ನಡುವೆ ಕಾಮಗಾರಿ ಅಂದಾಜು ಪಟ್ಟಿ Unsigned documents ಕರಾರಿಗೆ ಸಂಬಂಧಿಸಿದಂತೆ MOU ವಿವರಗಳನ್ನು ಪಡೆದು ಮುಂಗಡ ಹಣ ಪಾವತಿಸಬಹುದೆಂದು ಯೋಜನಾ ವ್ಯವಸ್ಥಾಪಕರಿಗೆ ನಿರ್ದೇಶಿಸಿರುತ್ತಾರೆ. ಆದರೆ ಕಡತದಲ್ಲಿ ಯಾವುದೇ MOU ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲ.ಆದರೂ ಹಣ ಬಿಡುಗಡೆಯಾಗಿದೆ.
ಟಾಟಾ ಸ್ಟೀಲ್ ಲಿ.ಗೆ unsigned ಕರಾರಿನಂತೆ ಶೇ. 60% ಅಂದರೆ 17,22,054/-ಗಳನ್ನು ಪಾವತಿಸಲು ಅನುಮೋದನೆ ಕೋರಿದ್ದು, ಮಾನ್ಯ ಜಿಲ್ಲಾಧಿಕಾರಿಯವರು ಹಣ ಬಿಡುಗಡೆಗೆ ಹಿಂದೇಟು ಹಾಕಿದಾಗ, ಮುಖ್ಯಮಂತ್ರಿಯವರ ಕಾರ್ಯದರ್ಶಿಗಳಿಂದ ಒತ್ತಡ ಹೇರಿ ಟಾಟಾ ಸ್ಟೀಲ್ ಲಿ. ರವರಿಗೆ ಬಿಲ್ ಪಾವತಿ ಮಾಡಿದ್ದರೆ, ಇದು ಅಕ್ರಮ ಎಂದರು.
ಇನ್ನು ಕಾಮಗಾರಿಯ EMB ಮತ್ತು ಅಂದಾಜು ಮೊತ್ತ (Estimation) ಕ್ಕೆ ತಾಳೆಯಾಗುತ್ತಿಲ್ಲ.ಅಲ್ಲದೆ
ಕಾಮಗಾರಿಯ ತಪಾಸಣೆ ವರದಿಯಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಿಲ್ಲ.ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂತಿಮವಾಗಿ 3ನೇ ವ್ಯಕ್ತಿಯ ತಪಾಸಣ ವರದಿ ಮತ್ತು ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ಪಡೆಯದೆ ಅಂತಿಮ ಬಿಲ್ಗಳನ್ನು ಪಾವತಿ ಮಾಡಿದ್ದಾರೆ.
ಬಿಡುಗಡೆ ಮಾಡಿರುವ ಹಣಕ್ಕೂ ಮತ್ತು ಬಿಡುಗಡೆಯಾಗಿರುವ ಹಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ತಾಳೆಯಾಗುತ್ತಿಲ್ಲ. ಪ್ರತಿ ಕಾಲೇಜಿನ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದು, ಅಂತಿಮ ಬಿಲ್ ಬಿಡುಗಡೆ ಸಮಯದಲ್ಲಿ ಗುಣಮಟ್ಟದ ವರದಿ ಕೂ ಪಡೆದಿರುವುದಿಲ್ಲ. ಕಾಮಗಾರಿಗಳಲ್ಲಿ ಉಪಯೋಗಿಸಿರುವ ಅವಶ್ಯ ಸಾಮಾಗ್ರಿಗಳ ಅನುಪಾತದಲ್ಲಿ ವ್ಯತ್ಯಾಸವಿದ್ದು, ಅವಶ್ಯ ಅನುಪಾತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ ಕಾಮಗಾರಿ ಕಳಪೆ ಮಾಡಿದ್ದಾರೆ ಎಂದರು.
ಸಿಬ್ಬಂದಿಯೇ ಕಂಟ್ರಾಕ್ಟರ್
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹರಕನಹಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿಯನ್ನು ಆರಂಭಿಸಿದೆ, ಅದಕ್ಕೆಂದು ಮೀಸಲಿರಿಸಿದ್ದ 25 ಲಕ್ಷಗಳ ಅಂದಾಜು ಮೊತ್ತದಲ್ಲಿ ಮುಂಗಡ ಹಣ 18.75 ಲಕ್ಷಗಳಲ್ಲಿ 1,02,610 ರೂ.ಹಣವನ್ನು ನಿರ್ಮಿತಿ ಕೇಂದ್ರದ ಸಿಬ್ಬಂದಿ ಸುನಿಲ್ ಅವರನ್ನು ಕಂಟ್ರಾಕ್ಟರ್ ಎಂದು ಸ್ಪಷ್ಟಿಸಿ ಆತನ ಹೆಸರಿಗೆ ನಕಲಿ ಬಿಲ್ ಸೃಷ್ಟಿ ಮಾಡಿ ಹಣ ಡ್ರಾ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.




