Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜೂನ್ ಮೊದಲ ವಾರದಲ್ಲೇ ಮೈಷುಗರ್ ಆರಂಭಿಸಿ : ಸಂಘಟನೆಗಳ ಒತ್ತಾಯ

ಮಂಡ್ಯ ಸಕ್ಕರೆ ಕಾರ್ಖಾನೆ (ಮೈಷುಗರ್) ಕಬ್ಬು ಅರೆಯುವುದನು ನಿಲ್ಲಿಸಿ, 4 ತಿಂಗಳು ಕಳೆದಿದೆ. 25-26ನೇ ಸಾಲಿಗೆ ಕಾರ್ಖಾನೆ ವ್ಯಾಪ್ತಿಯಲ್ಲಿ 10 ಲಕ್ಷ ಟನ್ ಕಬ್ಬು ಲಭ್ಯವಿದೆ. 5 ಲಕ್ಷ ಟನ್ ಒಪ್ಪಿಗೆಯಾಗಿದೆ. ಆದ್ದರಿಂದ ಜೂನ್ ಮೊದಲ ವಾರದಲ್ಲಿಯೇ ಕಾರ್ಖಾನೆ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಮಂಡ್ಯ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ನಾಯಕಿ ಸುನಂದ ಜಯರಾಂ ಅವರ ನೇತೃತ್ವದಲ್ಲಿ ಹಲವು ಸಂಘಟನೆಗಳು ಒತ್ತಾಯಿಸಿವೆ.

ಇಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ರೈತ ಸಭೆ ನಡೆದು ಜೂನ್ ಮೊದಲ ವಾರದಲ್ಲಿ ಕಾರ್ಖಾನೆಯನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಸಭೆ ನಡೆದು 2 ತಿಂಗಳಾಗಿದೆ. ಆದರೆ ಕಾರ್ಖಾನೆಯನ್ನು ಪ್ರಾರಂಭಿಸುವ ಯಾವ ಸೂಚನೆಯು ಕಾರ್ಖಾನೆಯಲ್ಲಿ ಕಂಡು ಬರುತ್ತಿಲ್ಲ. ರೈತರಿಗೆ, ಹೋರಾಟಗಾರರಿಗೆ ಅಂತಕವಾಗಿದೆ. ಸರ್ಕಾರಕ್ಕೆ ಮಂಡ್ಯ ಸಕ್ಕರೆ ಕಾರ್ಖಾನೆಯೇ ಮೊದಲ ಆದ್ಯತೆ ಹಾಗೂ ಪ್ರಮುಖ ವಿಷಯವಾಗಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿಯೇ ಉಳಿಸಲು 3 ವರ್ಷಗಳು ನಿರಂತರ ಹೋರಟ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ರೈತರು, ಸಾರ್ವಜನಿಕರು, 75 ಪ್ರಮುಖ ಸಂಘಟನೆಗಳು ದೀರ್ಘಕಾಲ ಶ್ರಮಿಸಿವೆ. 37 ದಿವಸಗಳು ಧರಣಿ ಸತ್ಯಾಗ್ರಹ ಮಾಡಲಾಗಿದೆ. ಎರಡು ಸದನಗಳಲ್ಲೂ ಸಹ ವ್ಯಾಪಕ ಚರ್ಚೆಯಾಗಿದೆ. ಸರ್ಕಾರ ಕಟ್ಟುಬದ್ದತೆಯಿಂದ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿ ಉಳಿಸಿಕೊಳ್ಳುವುದಾಗಿ ಸಾರ್ವಜನಿಕ ವಚನ ಮಾಡಿದೆ. ಆದರೆ 2025-26ನೇ ಸಾಲಿಗೆ ಕಾರ್ಖಾನೆಯನ್ನು ಪ್ರಾರಂಭಿಸುವ ಯಾವ ಚಟುವಟಿಕೆಗಳು ಇನ್ನು ಪ್ರಾರಂಭ ಮಾಡಿಲ್ಲ. ಸಿದ್ದತೆಗಳು ನಡೆಯುತ್ತಿಲ್ಲ. ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸಿದ್ದರು ಗಮನ ಕೊಡುತ್ತಿಲ್ಲ ಎಂದು ದೂರಿದರು.

ಕಬ್ಬು ಕಡಿಯುವ ಕಾರ್ಮಿಕರ ನೇಮಕ, ಕಾರ್ಖಾನೆ ಯಂತ್ರಗಳ ಸಿದ್ಧತೆ ನಡೆದಿಲ್ಲ. ಖಾಸಗಿ ಕಂಪನಿಗಳು, ಖಾಸಗಿಯ ವ್ಯಕ್ತಿಗಳು ಕಾರ್ಖಾನೆಯನ್ನು ಕಬಳಿಸುವ ಹುನ್ನಾರಗಳು ಇನ್ನು ನಿಂತಿಲ್ಲ. ಬೃಹತ್ ಬೆಂಗಳೂರಿಗೋಸ್ಕರ ಮಂಡ್ಯ ಜಿಲ್ಲೆಯನ್ನು ಸರ್ಕಾರ ದಿವಾಳಿ ಮಾಡುತ್ತಿದೆ. ಸರ್ಕಾರ ಮಂಡ್ಯ ಜಿಲ್ಲೆಯನ್ನು ದಿವಾಳಿ ಮಾಡುವುದನ್ನು ನಿಲ್ಲಿಸಬೇಕು. ಕೆ.ಆರ್.ಎಸ್. ಅಣೆಕಟ್ಟಿನ ನೀರು ಸಂಪೂರ್ಣ ರೈತರ ಹಕ್ಕು, ಅಣೆಕಟ್ಟಿನ ಬಳಿ ಯಾವುದೇ ಮನರಂಜನ ಕಾರ್ಯಗಳು, ಜನವಸತಿ, ವ್ಯಾಪಾರ, ವ್ಯವಹಾರ, ನಿಷೇಧವಾಗಬೇಕು. ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯ ರೈತರ ಸಭೆ ಕರೆದು ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕೆ ಬೋರಯ್ಯ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ಜೈ ಕರ್ನಾಟಕ ಪರಿಷತ್ ನಾರಾಯಣ್, ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಫಯಾಜ್, ಬಿಎಸ್ಎಸ್ ಕೃಷ್ಣ,  ಶಿವಲಿಂಗಯ್ಯ, ದೇವೇಗೌಡ, ಕುಮಾರ್, ಕಮಲಮ್ಮ ಹಾಗೂ ದೇವಿರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ