ಮೈಷುಗರ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ, ಜಿಲ್ಲಾಧಿಕಾರಿಗಳು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಮಾಹಿತಿ ಹಕ್ಕು ಸಮಿತಿಯ ಮಂಡ್ಯ ತಾಲೂಕು ಅಧ್ಯಕ್ಷ ಶಿವಕುಮಾರ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಪ್ಪಾಸಾಹೇಬ ಚನ್ನಪ್ಪ ಪಾಟೀಲ್ ಮೇಲೆ ಭ್ರಷ್ಟಾಚಾರ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇದೇ ಜ.20ರಂದು ದೂರು ಸಲ್ಲಿಸಿದ್ದು, ಅವರ ವಿರುದ್ಧ ಪರಿಶೀಲನೆ ನಡೆಸಿ ಮಾಹಿತಿ ಹಾಗೂ ಹಿಂಬರಹ ನೀಡಲು ಮೈಷುಗರ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿರುತ್ತಾರೆ.ಅಲ್ಲದೆ ಇದೇ ಫೆಬ್ರವರಿ 13ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ, ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ಕಳಪೆ ಕಾಮಗಾರಿ ನಡೆದಿಲ್ಲ:ಸಿ.ಡಿ.ಗಂಗಾಧರ್
ಮೈಷುಗರ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಆರ್ ಐಡಿಎಲ್ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು,ಕಳಪೆ ಕಾಮಗಾರಿ ನಡೆದಿಲ್ಲ.ಬೇಕಾದರೆ ಆರೋಪ ಮಾಡುವವರು ಬಂದು ಪರಿಶೀಲನೆ ನಡೆಸಲಿ ಎಂದು ಮೈಷುಗರ್ ಅಧ್ಯಕ ಸಿ.ಡಿ.ಗಂಗಾಧರ್ ತಿಳಿಸಿದರು.

ನುಡಿ ಕರ್ನಾಟಕ.ಕಾಮ್ ಗೆ ಪ್ರತಿಕ್ರಿಯೆ ನೀಡಿದ ಅವರು,ಕಾರ್ಖಾನೆಯಲ್ಲಿ ಮರ ಕಡಿದಿರುವ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.ನಾನು ಅನುಮತಿ ನೀಡಿಲ್ಲ.ಈ ಭಾಗದಲ್ಲಿ ಹಾವುಗಳು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಈ ಹಿಂದೆ ಇದ್ದ ವ್ಯವಸ್ಥಾಪಕ ನಿರ್ದೇಶಕರು ಮರ ಕಡಿಯಲು ಅನುಮತಿ ನೀಡಿದ್ದರು.ಅದರಂತೆ ಬಿಡ್ ಕರೆಯಲಾಗಿತ್ತು.ಎಂಟು ಮಂದಿ ಬಿಡ್ ನಲ್ಲಿ ಭಾಗವಹಿಸಿ ಮರಗಳನ್ನು ಕಡಿಯಲಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ಆಗಿದೆ. ಈ ಮರಗಳನ್ನು ನಾನು ಮನೆಗೆ ಸಾಗಿಸಿದ್ದೇನೆ ಎಂದು ಆರೋಪ ಮಾಡಿದವರನ್ನು ನನ್ನ ಊರು ಚಂದಗಾಲು ಗ್ರಾಮಕ್ಕೆ ನಾನೇ ಕರೆದುಕೊಂಡು ಹೋಗ್ತೇನೆ.ಅವರು ಬಂದು ಪರಿಶೀಲನೆ ಮಾಡಲಿ ಎಂದರು.
ಮೈಷುಗರ್ ಸಹಾಯಕ ನಿರ್ದೇಶಕರನ್ನು ನಾನು ವರ್ಗಾವಣೆ ಮಾಡಿಸಿಲ್ಲ.ಅವರು ನಿಯೋಜನೆ ಮೇರೆಗೆ ನಮ್ಮಲ್ಲಿದ್ದರು.ಸರ್ಕಾರವೇ ಅವರನ್ನು ಅವರ ಇಲಾಖೆಗೆ ಕಳುಹಿತ್ತು.ಅದಕ್ಕೆ ನ್ಯಾಯಾಲಯ ತಡೆ ನೀಡಿದೆ.ನಾನು ಜನವರಿಯಿಂದ ಕಾರಿಗೆ ಡೀಸೆಲ್ ಹಾಕಿಸುತ್ತಿಲ್ಲ.ನನ್ನ ಹಣದಲ್ಲಿಯೇ ಹಾಕಿಸಿಕೊಳ್ಳುತ್ತಿದ್ದೇನೆ ಎಂದರು.
2022-23ನೇ ಸಾಲಿನಲ್ಲಿ ಸಕ್ಕರೆ, ಕಾಕಂಬಿ ಮತ್ತು ವಿದ್ಯುತ್ ಆಮದಿನಿಂದ ಕಾರ್ಖಾನೆಗೆ ನಷ್ಟವಾಗಿದೆ. 2023 ಮೇ ಮತ್ತು ಜೂನ್‌ನಲ್ಲಿ ಸಕ್ಕರೆ ಮಾರಾಟ ಮಾಡದೇ ನಾಲ್ಕು ಕೋಟಿ ನಷ್ಟವುಂಟಾಗಿದ್ದು, ಮೈಷುಗರ್ ಅಧ್ಯಕ್ಷರ ವಾಹನಕ್ಕೆ ಇಂಧನ ತುಂಬಿಸುವಲ್ಲಿಯೂ ಆಡಳಿತದ ದುರುಪಯೋಗವಾಗಿದೆ ಎಂದರು.
ಸಿಸಿಟಿವಿ ಅಳವಡಿಕೆ ಮಾಡಿದ ನಂತರ ಟಂಡರ್ ಕರೆದು ಅಕ್ರಮ, ಕಾನೂನು ಬಾಹಿರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಲಕ್ಷಾಂತರಮೌಲ್ಯದ ತೇಗ,ಬೀಟೆ ಮರಗಳನ್ನು ಕೇವಲ 73 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉತ್ತಮ ಆಡಳಿತ ನಡೆಸುತ್ತಿದ್ದ ಅಧಿಕಾರಿಯನ್ನು 7 ತಿಂಗಳಿಗೆ ವರ್ಗಾವಣೆ ಮಾಡಿದ್ದು, ಅಧಿಕಾರಿ ದಿಟ್ಟತನದಿಂದ ತಡೆಯಾಜ್ಞೆ ತಂದಿದ್ದಾರೆಂದು ಹೇಳಿದರು.
2023ರಿಂದ ಇಲ್ಲಿಯವರೆಗೂ 4 ಕೋಟಿ ರೂ. ಕಾಮಗಾರಿಗಳನ್ನು ಮಾಡಿದ್ದು, ಅವುಗಳೂ ಕೂಡ ಕಳಪೆಯಿಂದ ಕೂಡಿದೆ. ಅಲ್ಲದೇ ಕಬ್ಬು ಸಾಗಾಣೆಯ ವೆಚ್ಚ ನೀಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಬ್ಬು ಬೆಳೆಗಾರ ಪತ್ರಬರೆದಿರುವುದನ್ನು ಬರೆದಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ದೀಪಕ್, ವಿನೋಬಾ ಸಚಿನ್, ಪ್ರಸನ್ನಕುಮಾರ್, ಸುನಿಲ್ ಇದ್ದರು.




