ಮಂಡ್ಯನಗರದ ಕುವೆಂಪುನಗರ ಬಡಾವಣೆಯಲ್ಲಿನ ಶ್ರೀಪ್ರಶಾಂತ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಸಮುದಾಯ ಭವನ ನಿರ್ಮಾಣ ಸಂಬಂಧ ಸ್ಥಳೀಯ ನಗರಸಭೆ ಸದಸ್ಯೆ ಮೀನಾಕ್ಷಿಯವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಶ್ರೀಪ್ರಶಾಂತ ಬಲಮುರಿ ಗಣಪತಿ ದೇವಾಲಯ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದ ಆವರಣವು ಉದ್ಯಾನವನಕ್ಕೆ ಸೇರಿದ್ದು ಎಂದು ಹೇಳಿದ್ದು, ಸದರಿ ಸ್ಥಳವು ಸಿಎ ಜಾಗಕ್ಕೆ ಒಳ ಪಡುತ್ತದೆ. ಸದರಿ ಸ್ಥಳದಲ್ಲಿ ನಗರಸಭೆಯ ವಾಣಿಜ್ಯ ಮಳಿಗೆಗಳೂ ಸಹ ಇರುವುದು ಇದಕ್ಕೆ ಸಾಕ್ಷಿ ಎಂದರು.
ಶ್ರೀ ಪ್ರಶಾಂತ ಬಲಮುರಿ ಗಣಪತಿ ದೇವಾಲಯವು ೨೫ ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದು, ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ರಾಮಣ್ಣ ಅವರ ಏಕಪಕ್ಷೀಯ ನಿರ್ಧಾರಗಳನ್ನು ಸಹಿಸಲಾಗದೆ. ಅವರನ್ನು ೫ ವರ್ಷಗಳ ಹಿಂದೆಯೇ ಸಮಿತಿಯಿಂದ ಹೊರ ದೂಡಲಾಗಿತ್ತು. ಇದನ್ನು ಸಹಿಸದೇ ನಗರಸಭಾ ಸದಸ್ಯೆಯನ್ನು ದಿಕ್ಕು ತಪ್ಪಿಸಿ ಹೇಳಿಕೆ ನೀಡಲಾಗುತ್ತಿದೆ ಎಂದು ದೂರಿದರು.
ದೇವಾಲಯದ ಬಳಿಯಲ್ಲಿನ ಕುವೆಂಪು ನಗರ, ಶಂಕರನಗರ, ಕೆಇಬಿ ಕಾಲೋನಿ, ವಿನಾಯಕ ಬಡಾವಣೆ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ಸುಮಾರು ೧೦ ಸಾವಿರ ಭಕ್ತರನ್ನು ಒಳಗೊಂಡ ದೇವಾಲಯದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ವಿಶ್ರಾಂತಿ ತಾಣ, ಗ್ರಂಥಾಲಯ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಲು ಶಾಸಕ ರವಿಕುಮಾರ್ಗೌಡ ಅವರ ಕೋರಿದಾಗ ತಕ್ಷಣವೇ ೫ ಲಕ್ಷ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಕ್ಕೆ ಅನು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ದೇವಾಲಯದ ಅಭಿವೃದ್ಧಿ ವಿರೋಧಿಯಾಗಿರುವ ರಾಮಣ್ಣ ಅವರ ನಗರಸಭಾ ಸದಸ್ಯೆಯಿಂದ ಏಕಾಏಕಿ ಉದ್ಯಾನದ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅಕ್ರಮ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರ. ದೇವಾಲಯದ ಅಭಿವೃದ್ಧಿ ಸಹಿಸದವರ ಮಾತಿನಿಂದ ಅವರ ತಪ್ಪು ಗ್ರಹಿಕೆಯಿಂದ ಹೇಳಿಕೆ ನೀಡಿದ್ದು, ತಪ್ಪು ಗ್ರಹಿಕೆ ಬದಲಾಯಿಸಿಕೊಂಡು ಭವನದ ನಿರ್ಮಾಣಕ್ಕೆ ನಗರಸಭೆಯಿಂದ ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಕೆ.ಪುಟ್ಟಸ್ವಾಮಿಗೌಡ, ಗೌರವ ಅಧ್ಯಕ್ಷ ಶಿವಣ್ಣಗೌಡ, ಉಪಾಧ್ಯಕ್ಷ ನಟರಾಜ್, ಹೊನ್ನಪ್ಪ, ರಾಜೇಗೌಡ, ಹೇಮಂತ್, ಶಿವಕುಮಾರ್ ಇದ್ದರು.




