Saturday, November 21, 2026

ಪ್ರಾಯೋಗಿಕ ಆವೃತ್ತಿ

ನದಿಗಳಿಗೆ ನಮನ ಸಲ್ಲಿಸುವುದು ಅನಾದಿಕಾಲದಿಂದ ಬಂದ ವಾಡಿಕೆ: ಮುಕ್ತಿದಾನಂದ ಸ್ವಾಮೀಜಿ

ನದಿಗಳಿಗೆ ನಮನ ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.‌ ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.‌ ಅದೇ ರೀತಿ ಕಾವೇರಿ ಸನ್ನಿಧಿಯಲ್ಲಿ ಕಾವೇರಿಗೆ ನಮನ ಸಲ್ಲಿಸುವ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಹೇಳಿದರು.

ಕೆ.ಆರ್.ಎಸ್ ನಲ್ಲಿ ಭಾನುವಾರ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಅನ್ನ ಕೊಡುವ ಮಾತೆಗೆ ಶೃದ್ಧೆಯಿಂದ ನಮಿಸಿ ಅವಳ ಕೃಪೆಗೆ ಪಾತ್ರರಾಗುವ ಅವಕಾಶ ಸಿಕ್ಕಿದೆ. ಇದೊಂದು ಪವಿತ್ರ ಕಾರ್ಯ ಎಂದರು.

ಕಾವೇರಿ ಆರತಿ ದಸರಾ ಹಬ್ಬದ ಮುಖ್ಯ ಅಂಗವಾಗಬೇಕೆಂಬ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಅಭಿಲಾಷೆಯಂತೆ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ದಕ್ಷಿಣ ಕರ್ನಾಟಕದ ಜೀವನದಿ, ಕೋಟ್ಯಂತರ ಜನರ ದಾಹ ನೀಗಿಸುವ ರೈತರ ಬಾಳು ಬೇಳಗುವ ಈ ಜೀವನದಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಹೇಳಿದರು.

ಕೃಷಿ ಸಚಿವ ಹಾಗೂ ಮಂಡ್ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿಯನ್ನು ಕೆಲವರು ವಿರೋಧಿಸಿ ಕೋರ್ಟ್ ಗೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ವಿರೋಧಿಸುವವರು ಕೂಡ ಮನಸ್ಸು ಬದಲಿಸಲಿದ್ದಾರೆ. ಕಾವೇರಿ ಆರತಿಗೆ ಎಲ್ಲರೂ ಪ್ರೀತಿಯಿಂದ ಬೆರೆಯೋಣ, ಅನುಬಂಧ ಬೆಸೆಯೋಣ ಎಂದು ಹೇಳಿದರು.

ಗಂಗೆಯನ್ನು ಸಂತೃಪ್ತಿಗೊಳಿಸಲು ಉತ್ತರದಲ್ಲಿ ಗಂಗಾ ಆರತಿ ಮಾಡುತ್ತಿರುವಂತೆ ಕರ್ನಾಟಕದ ಜೀವನದಿ ಕಾವೇರಿಗೆ ನಮಿಸಿ ವಂದಿಸಬೇಕು. ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಆಯೋಜಿಸಬೇಕೆಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತೀರ್ಮಾನಿಸಿದರು. ಆದರೆ ಕೆಲವರು ಇದನ್ನು ವಿರೋಧಿಸಿ ಕೋರ್ಟ್ ಗೆ ಹೋದರು ಎಂದರು.

ಕುಡಿಯುವ ನೀರು, ವ್ಯವಸಾಯಕ್ಕೆ ಉಪಯೋಗಿಸುವ ಕಾವೇರಿ, ತಮಿಳುನಾಡಿನ ಜನರು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾಳೆ. ಪ್ರಕೃತಿಗೆ ನಮನ ಸಲ್ಲಿಸುವ ದೃಷ್ಟಿಯಿಂದ ಕಾವೇರಿ ಆರತಿ ಆಯೋಜಿಸಲಾಗಿದೆ. ಸದ್ಯ ಈ ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ,
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಡಾ. ಕುಮಾರ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ