Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಚುನಾಯಿತ ಸದಸ್ಯರ ಕಡೆಗಣನೆ : ಪುರಸಭಾ ಸದಸ್ಯರಿಂದ ಶಾಸಕರಿಗೆ ತರಾಟೆ

ಕೆ.ಆರ್.ಪೇಟೆ ಪುರಸಭೆಯ ವಿವಿಧ ವಾರ್ಡ್ ಗಳಲ್ಲಿ ನಗರೋತ್ತಾನ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಶಾಸಕರು ಪುರಸಭೆ ಅಧ್ಯಕ್ಷರು ಹಾಗೂ ಚುನಾಯಿತ ಸದಸ್ಯರನ್ನು ಕಡೆಗಣಿಸಿ ಭೂಮಿ ಪೂಜೆ ನಡೆಸುತ್ತಿರುವ ಕ್ರಮವನ್ನು ಖಂಡಿಸಿ ಪುರಸಭೆ ಹಿರಿಯ ಸದಸ್ಯರಾದ ಕೆ.ಸಿ.ಮಂಜುನಾಥ್ ಹಾಗೂ ಅಧ್ಯಕ್ಷೆ ಪಂಕಜಾ ಅವರು ಶಾಸಕ ಹೆಚ್.ಟಿ.ಮಂಜು ಸೇರಿದಂತೆ ಇಂಜಿನಿಯರ್ ಬಸವೇಗೌಡ ಹಾಗೂ ಗುತ್ತಿಗೆದಾರ ವೆಂಕಟೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.

ನಾವು ಕೂಡಾ ಜನರಿಂದ ಚುನಾಯಿತ ಜನಪ್ರತಿನಿಧಿಗಳಾಗಿದ್ದೇವೆ, ನಮಗೂ ಆತ್ಮ ಗೌರವವಿದೆ, ವಾರ್ಡಿನ ಸಮಸ್ಯೆಗಳ ಬಗ್ಗೆ ನಮ್ಮಿಂದ ಮಾಹಿತಿ ಪಡೆದುಕೊಂಡು ಅವಶ್ಯಕತೆ ಇರುವ ಕಡೆಗಳಲ್ಲಿ ಕಾಮಗಾರಿ ನಡೆಸಬೇಕು. ಕೇವಲ ಕಾಟಾಚಾರಕ್ಕೆ ಭೂಮಿ ಪೂಜೆ ಮಾಡಿ ನಮ್ಮನ್ನು ಕಡೆಗಣಿಸಿ ಮನಸೋ ಇಚ್ಛೆ ಕಾಮಗಾರಿ ನಡೆಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಗುಡುಗಿದ ಮಂಜುನಾಥ್, ಶಾಸಕರೇ ನಿಮ್ಮ ಬಗ್ಗೆ ಗೌರವವಿದೆ, ಚುನಾವಣೆ ಬಂದಾಗ ರಾಜಕಾರಣ ಮಾಡಿ, ಪಟ್ಟಣದ ಅಭಿವೃದ್ಧಿ ವಿಚಾರ ಬಂದಾಗ ಪಕ್ಷತೀತವಾಗಿ ಕೆಲಸ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಮಧ್ಯ ಪ್ರವೇಶಿಸಿದ ಶಾಸಕ ಮಂಜು, ಒಂದು ವಾರದ ಹಿಂದೆಯೇ ಚೀಫ್ ಆಫೀಸರ್ ಜೊತೆಗೆ ಮಾತನಾಡಿ ಭೂಮಿ ಪೂಜೆಗೆ ದಿನಾಂಕ ನಿಗಧಿಪಡಿಸಿದ್ದೆ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ, ಕೆ.ಆರ್.ಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಮಂಡಳಿಯಿದೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ವಿರೋಧ ಪಕ್ಷದ ಶಾಸಕನಾಗಿ ನಾನೇ ನಿಮ್ಮ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಸಚಿವರ ಬಳಿ ವಿಶೇಷ ಅನುದಾನ ಕೇಳಲು ಮುಜುಗರವಿಲ್ಲದೆ ಬರುತ್ತೇನೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ಕ್ಷುಲ್ಲಕ ರಾಜಕಾರಣವಲ್ಲ, ಪುರಸಭೆ ಮುಖ್ಯಾಧಿಕಾರಿಯ ಬೇಜವಾಬ್ದಾರಿಯಿಂದ ಇಷ್ಟೆಲ್ಲಾ ಅವಾಂತರವಾಗಿದೆ ಎಂದು ಸಮಾಧಾನ ಪಡಿಸಿದರು.

ಆದರೂ ಸಮಾಧಾನಗೊಳ್ಳದ ಮಂಜುನಾಥ್ ನಮ್ಮ ಪುರಸಭೆಗೆ ಸ್ವಂತ ಕಟ್ಟಡವಿಲ್ಲ, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಹೊಸಹೊಳಲು ಹಾಗೂ ಕೆ.ಆರ್.ಪೇಟೆ ಟೌನಿನಲ್ಲಿ ನಿವೇಶನ ವಿತರಿಸಲು ಕ್ರಮಕೈಗೊಂಡಿಲ್ಲ ಮೊದಲು ಈಬಗ್ಗೆ ಗಮನಹರಿಸಿ ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಿ ಎಂದು ಮಂಜುನಾಥ್ ಶಾಸಕರನ್ನು ಆಗ್ರಹಿಸಿದರು.

ಪುರಸಭೆ ಮಾಜಿ ಸದಸ್ಯ ಹೇಮಂತ್ ಕುಮಾರ್, ತಾಲೂಕು ಪಂಚಾಯತ್ ಮಾಜಿಅಧ್ಯಕ್ಷ ಜಯರಂಗ, ಮುಖಂಡರಾದ ಸಚಿನ್ ಕೃಷ್ಣ, ವಿಶ್ವನಾಥ್, ಪುರಸಭೆ ಕಂದಾಯ ಅಧಿಕಾರಿ ರವಿಕುಮಾರ್, ಆರೋಗ್ಯ ನೀರಿಕ್ಷಕ ಅಶೋಕ್, ಸಹಾಯಕ ಎಂಜಿನಿಯರ್ ಬಸವೇಗೌಡ, ಮೇಸ್ತ್ರಿ ಮುತ್ತಯ್ಯ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ