“ಭಾರತೀಯ ವಕೀಲ ಪರಿಷತ್ತಿನ ಸದಸ್ಯರು ಹಾಗೂ ಹಿರಿಯ ವಕೀಲರಾದ ವೈ ಆರ್ ಸದಾಶಿವರೆಡ್ಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಅಖಿಲ ಭಾರತ ವಕೀಲರ ಒಕ್ಕೂಟ(AILU)ದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ ತೀವ್ರವಾಗಿ ಖಂಡಿಸಿದ್ದಾರೆ.
ಕಳೆದ ಏಪ್ರಿಲ್ 15 ರಂದು ಏಕಾಏಕಿ ಏಕಾಏಕಿ ಕಚೇರಿಗೆ ನುಗ್ಗಿದ ಕಿಡಿಗೇಡಿಗಳು ವೈ.ಆರ್.ಸದಾಶಿವರೆಡ್ಡಿಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ. ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ ಕೂಡಾ ದುಷ್ಕರ್ಮಿಗಳು ಯಾವದೇ ರೀತಿಯ ಕಾನೂನಿನ ಭಯ ಇಲ್ಲದೇ ಹಿರಿಯ ವಕೀಲರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಗೂಂಡಾವರ್ತನೆಯಾಗಿದೆ ಎಂದು ಅವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ವಕೀಲರ ಮೇಲೆ ಮಾರಣಾಂತಿಕವಾಗಿ ಹಲ್ಲೆಯ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಪೋಲಿಸರು ದೂರು ದಾಖಲಿಸಿಕೊಂಡಿದ್ದು, ಜರೂರಾಗಿ ಬಂಧನ ಮಾಡಿ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆಯಿಂದ ವಕೀಲರ ಸಮುದಾಯದಲ್ಲಿ ತೀವ್ರವಾದ ಆತಂಕ ಹಾಗೂ ಭಯದ ವಾತವರಣ ಸೃಷ್ಟಿಯಾಗಿದೆ. ವಕೀಲರ ಪ್ರತಿನಿಧಿಯಾಗಿ ಭಾರತದ ವಕೀಲರ ಪರಿಷತ್ತಿನ ಸದಸ್ಯರ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆಯಾಗಿರುವದು ಅತ್ಯಂತ ಆತಂಕದ ಘಟನೆಯಾಗಿದೆ. ಆದ್ದರಿಂದ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.




