ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಡ್ಯ ನಗರದಲ್ಲಿ ಆಯೋಜಿಸಿದ್ದ ನಟರಾಜ್ ಸಂತೆಕಸಲಗೆರೆ ನೇತೃತ್ವದ ಜೀವಧಾರೆ ಟ್ರಸ್ಟ್ ಸತತ 24 ಗಂಟೆಗಳ ರಕ್ತ ಸಂಗ್ರಹಿಸಿದ ಶಿಬಿರ ಸಂಘಟಿಸಿ ಯಶಸ್ವಿಯಾಗುವ ಮೂಲಕ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
‘ನೊಂದ ಜನಗಳ ಜತೆ ನಮ್ಮ ಹೆಜ್ಜೆ’ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್, ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಅಂಗವಾಗಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಿನದ 24 ಗಂಟೆಯೂ ರಕ್ತ ಸಂಗ್ರಹ ಮಾಡಿತ್ತು.

ಜೀವಧಾರೆ ಟ್ರಸ್ಟ್‌ನ ವತಿಯಿಂದ ಇದುವರೆಗೂ 344 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಸುಮಾರು 43 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಸೈನಿಕರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರ ಮಾಡಿದ ಹೆಗ್ಗಳಿಗೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ನಡೆಸಿದ ಶಿಬಿರ ದಾಖಲೆ ಬರೆದಿದೆ.
ಜನವರಿಯಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಶಿಬಿರ ಸಂಬಂಧ 128 ಹಳ್ಳಿಗೆ ಭೇಟಿ ಪ್ರಚಾರ ಮಾಡಲಾಗಿತ್ತು. ಸಚಿವರು, ಶಾಸಕರು, ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟನೆಗಳಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿತು. ಇದೆಲ್ಲದರ ಪರಿಣಾಮ ಒಂದೇ ಶಿಬಿರದಲ್ಲಿ ಬರೋಬರಿ 1,525 ಯೂನಿಟ್ ರಕ್ತ ಸಂಗ್ರಹ ಮಾಡಿದ ಮೈಲಿಗಲ್ಲನ್ನು ಜೀವಧಾರೆ ಸ್ಥಾಪಿಸಿತ್ತು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದ್ದರು.

ಇದೊಂದು ಅವಿಸ್ಮರಣೀಯ ಕ್ಷಣ : ನಟರಾಜು
ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಂದಿನ ಶಿಬಿರ ಅಭೂತಪೂರ್ವ ಯಶಸ್ಸು ಕಾಣಲು ಅಧಿಕಾರಿಗಳು, ಸಂಘ ಸಂಸ್ಥೆಗಳು ಸಹಕರಿಸಿದರು. ಟ್ರಸ್ಟ್‌ನ ಸದಸ್ಯರು ಅವಿರತವಾಗಿ ಶ್ರಮಿಸಿದರು. ಆದ್ದರಿಂದ ಈ ಪ್ರಶಸ್ತಿಯನ್ನು ಅವರೆಲ್ಲರಿಗೂ ಅರ್ಪಿಸುತ್ತೇನೆ ಎಂದು ಜೀವಧಾರೆ ಟ್ರಸ್ಟ್ ಅಧ್ಯಕ್ ನಟರಾಜು ತಿಳಿಸಿದ್ದಾರೆ.
ದಾಖಲೆಯ ರಕ್ತದಾನ
ಮಂಡ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹಗಲು ರಾತ್ರಿಯೆನ್ನದೇ 24 ಗಂಟೆಗಳ ನಿರಂತರ ರಕ್ತಸಂಗ್ರಹ ಶಿಬಿರ ಕಳೆದ ಜನವರಿಯಲ್ಲಿ ಆಯೋಜಿಸಲಾಗಿತ್ತು. ವಿಶೇಷವೆಂದರೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಶೇಖ್ ತನ್ವೀರ್ ಆಸಿಫ್, ಪಿಎಸ್‌ಐಗಳಾದ ರವಿಕುಮಾರ್, ಜಗದೀಶ್ ಸೇರಿದಂತೆ ಹಲವು ಗಣ್ಯರು ರಕ್ತದಾನ ಮಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಮಿಮ್ಸ್‌ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ರಕ್ತನಿಧಿ ಸಿಬ್ಬಂದಿ ಶಿಬಿರದ ಯಶಸ್ಸಿಗೆ ಕೈಜೋಡಿಸಿದರು. ಇವರು 3 ಪಾಳಿಯಲ್ಲಿ ಕಾರ್ಯನಿರ್ವಹಿಸಿದರು. ಸರ್ಕಾರಿ ಆಸ್ಪತ್ರೆಯಿಂದ 150 ಹಾಸಿಗೆ ವ್ಯವಸ್ಥೆ ಒದಗಿಸಲಾಗಿತ್ತು. ಅಂದಿನ ಶಿಬಿರದಲ್ಲಿ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡು ವೀಕ್ಷಣೆ ಮಾಡಿದರು. ಅದರಂತೆ ಏ.7ರಂದು ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು.
ಮೊದಲ ದಿನದ ರಾತ್ರಿ 10ಗಂಟೆ ಹೊತ್ತಿಗೆ 1200 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಈ ಸಮಯದಲ್ಲಿ ಗುರಿ ತಲುಪುವ ಬಗ್ಗೆ ಕೊಂಚ ಗೊಂದಲವೂ ಇತ್ತು. ಆದರೆ ಯುವಕರು ರಾತ್ರಿಯಾದರೂ ಆಗಮಿಸಿ ರಕ್ತದಾನ ಮಾಡಿದರು. ಮೊದಲೇ ನಿಗದಿಪಡಿಸಿದಂತೆ ಶುಕ್ರವಾರ ಬೆಳಗ್ಗೆ 8ಗಂಟೆಗೆ ಶಿಬಿರ ಮುಕ್ತಾಯವಾಗಬೇಕಿತ್ತಾದರೂ ದಾನಿಗಳ ಸಂಖ್ಯೆ ಇಳಿಕೆಯಾಗಲೇ ಇಲ್ಲ. ಇದರಿಂದಾಗಿ ಕೆಲ ಗಂಟೆ ಮುಂದುವರೆಸಲಾಯಿತು. ಆದಾಗ್ಯೂ ಒತ್ತಾಯದಲ್ಲಿಯೇ ಶಿಬಿರವನ್ನು ಮುಕ್ತಾಯಗೊಳಿಸಬೇಕಾಯಿತು. ಇದರೊಂದಿಗೆ ಜೀವಧಾರೆ ಟ್ರಸ್ಟ್ ಅಂದುಕೊಂಡ ಗುರಿ ಸಾಧಿಸಿತು.
ಭಾನುವಾರ ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ಸ್ವಾಮಿ ಸನ್ನಿದಿಯಲ್ಲಿ ಟ್ರಸ್ಟ್‌ನ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಿಸಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಎಚ್‌ಒ ಡಾ.ಕೆ.ಮೋಹನ್ ಇತರರಿದ್ದರು.




