Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜನಿವಾರ ತೆಗೆಸಿದ್ದನ್ನು ವಿರೋಧಿಸಿ ಬ್ರಾಹ್ಮಣರ ಪ್ರತಿಭಟನೆ

ಇತ್ತೀಚಿಗೆ ಸಿ.ಇ.ಟಿ. ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾದ ವತಿಯಿಂದ ಮಂಗಳವಾರ ಮಂಡ್ಯನಗರದಲ್ಲಿ ಪ್ರತಿಭಟನೆ ನಡೆಯಿತು.

ಮಂಡ್ಯ ನಗರ ಸರ್.ಎಂ. ಪ್ರತಿಮೆ ಎದುರು ಪ್ರತಿಭಟಿಸಿದ ಪ್ರತಿಭಟನಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜನಿವಾರ ಧರಿಸಿದ್ದರಿಂದ ಪರೀಕ್ಷೆಗೆ ಅನುಮತಿ ಕೊಡದೇ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮಕ್ಕೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಶಿವಮೊಗ್ಗ, ಬೀದರ್, ಸಾಗರ ದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಸಿ.ಇ.ಟಿ. ಪರೀಕ್ಷೆಗೆ ಹಾಜರಾಗಲು ಹೋದಾಗ ಕೆಲವು ಅವಿವೇಕಿ ಅಧಿಕಾರಿಗಳು ಜನಿವಾರ ತೆಗೆದುಹಾಕಿ ಬಂದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತೇವೆ ಎಂದು ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ನಮ್ಮ ಸಂವಿಧಾನದಲ್ಲಿ ಅವರವರ ಆಚರಣೆಗೆ ಮಾನ್ಯತೆ ಕೊಡಲಾಗಿದೆ. ದಾರದ ಎಳೆಗಳಿರುವ ಜನಿವಾರ, ಶಿವದಾರ, ಕಾಶಿದಾರದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಯಾವ ರೀತಿಯ ಡಿವೈಸ್‌ಗಳನ್ನು ಇಡಲು ಸಾಧ್ಯವಿದೆ. ಇದು ಸಾಮಾನ್ಯ ಜ್ಞಾನ. ಪರೀಕ್ಷಾ ನಿಯಮಗಳಲ್ಲಿ ಜನಿವಾರ ತೆಗೆದುಹಾಕಿ ಪರೀಕ್ಷೆ ಬರೆಯಬೇಕು ಎಂಬ ಯಾವುದೇ ನಿಯಮವಿಲ್ಲ. ಈ ವಿಚಾರ ಪರಿಜ್ಞಾನವಿಲ್ಲದೇ ಸರ್ಕಾರದ ಅಧಿಕಾರಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬಾರದು ಎಂದರು.

ಕೇವಲ ಬ್ರಾಹ್ಮಣ ವಿದ್ಯಾರ್ಥಿಗಳನ್ನಷ್ಟೇ ಗುರಿಯಾಗಿಸಿ ಜನಿವಾರವನ್ನು ಕತ್ತರಿಯಿಂದ ಕತ್ತರಿಸಿದ್ದು, ಜನಿವಾರವನ್ನು ತೆಗೆಯದಿದ್ದವರಿಗೆ ಪರೀಕ್ಷೆಗೆ ಅವಕಾಶ ನೀಡದೇ ಇರುವುದು ದುರುದ್ದೇಶಪೂರ್ವಕವಾಗಿರುತ್ತದೆ. ಸರ್ಕಾರ ಇಂತಹ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಈ ಮನಸ್ಥಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಜೊತೆಗೆ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿ.ಇ.ಟಿ. ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಕಾಲೇಜುಗಳಲ್ಲಿ ಉಚಿತ ಸೀಟ್ ನೀಡುವುದರ ಜೊತೆಗೆ ಬ್ರಾಹ್ಮಣ ಸಮುದಾಯಕ್ಕೆ ಅಪಾರವಾದ ನೋವುಂಟು ಮಾಡಿರುವ ಅಧಿಕಾರಿಗಳು, ಸಿಬ್ಬಂದಿಗಳ ಪರವಾಗಿ ಸರ್ಕಾರವೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಭಾದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ಪ್ರತಿನಿಧಿ ಶಂಕರನಾರಾಯಣಶಾಸ್ತ್ರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ