ಕ್ರಾಂತಿಕಾರಿ ಬಸವಣ್ಣನವರನ್ನು ಕೇವಲ ಒಂದು ಜಾತಿಗೆ ಸಮೀಕರಿಸಿ ಮಂಡ್ಯ ಜಿಲ್ಲಾಡಳಿತವು ಬಸವಣ್ಣನ ಜಯಂತಿಯ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದು, ಕೂಡಲೇ ಬಸವಣ್ಣವರ ಅನುಯಾಯಿಗಳು ಹಾಗೂ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿತ ವರ್ಗಗಳ ಸಮುದಾಯದ ಸಂಘಟನೆಗಳ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ, ಅವರನ್ನು ಆಹ್ವಾನಿಸಬೇಕೆಂದು ಮಂಡ್ಯ ಜಿಲ್ಲಾ ಲಿಂಗಾಯತ ಸಭಾ ಒತ್ತಾಯಿಸಿದೆ.
ಮಂಡ್ಯ ಜಿಲ್ಲಾ ಲಿಂಗಾಯತ ಸಭಾದ ಮುಖಂಡರಾದ ಮಂಡಿಬೆಟ್ಟಹಳ್ಳಿ ಮಂಜುನಾಥ್, ಸುಂಡಹಳ್ಳಿ ಸೋಮಶೇಖರ್ ಸೇರಿದಂತೆ ಮತ್ತಿತರರು ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಬಸವಣ್ಣನವರು ಎಲ್ಲ ಹಿಂದುಳಿದ, ಶೋಷಿತ, ದಲಿತ ಜಾತಿಗಳ ಉದ್ಧಾರಕ್ಕಾಗಿ ಶ್ರಮಿಸಿದವರು, ಆದ್ದರಿಂದ ಅವರನ್ನು ಕೇವಲ ಲಿಂಗಾಯಿತರಿಗೆ ಸೀಮಿತಗೊಳಿಸುವುದು ಬೇಡ, ಹಾಗಾಗಿ ಎಲ್ಲ ಅಹಿಂದ ಸಂಘಟನೆಗಳು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಸವ ಜಯಂತಿ ಕಾರ್ಯಕ್ರಮವನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಬಸವಣ್ಣನ ಭಾವಚಿತ್ರ ಕಡ್ಡಾಯಕ್ಕೆ ಆಗ್ರಹ
ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ನೀಡಿದ್ದರೂ ಪೊಲೀಸ್, ಆರೋಗ್ಯ, ಶಿಕ್ಷಣ, ಪಂಚಾಯಿತಿ ಸೇರಿದಂತೆ ಮಂಡ್ಯ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರಗಳು ಇರುವುದಿಲ್ಲ. ಆದ್ದರಿಂದ ಕೂಡಲೇ ಬಸವಣ್ಣನ ಭಾವಚಿತ್ರ ಅಳವಡಿಕೆಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಬಾರಿಯ ಬಸವಜಯಂತಿಯನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನಿಟ್ಟು ಆಚರಣೆ ಮಾಡುವ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ತಾವು ಸೂಕ್ತ ಆದೇಶ ನೀಡಬೇಕೆಂದು ಮಾಡಿದರು.
ಜಾತ್ಯಾತೀತ ಆಚರಣೆಯಾಗಲಿ
ಸರ್ಕಾರ ಬಸವಪ್ರಜ್ಞೆ ನಾಡಿನಾದ್ಯಂತ ಹರಡಬೇಕೆಂದು ಅನುಭವಮಂಪಟ ರಥಯಾತ್ರೆಯನ್ನು ಸಹ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದುವರೆಗೂ ಬೇಡಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ಉನ್ನತಮಟ್ಟದ ಸಭೆ ಕರೆದು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೆಣಸಗೆರೆ ಶಿವಲಿಂಗಪ್ಪ, ಯೋಗಶಿಕ್ಷಕ ಶಿವರುದ್ರಪ್ಪ, ಜಿ.ಮಹಾಂತಪ್ಪ, ಸಿದ್ದಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.




