ಅಧಿಕಾರದಲ್ಲಿದ್ದ ಟಿ.ತಿಮ್ಮೇಗೌಡ ಅವರು ಹಣದ ಹಿಂದೆ ಹೋದವರಲ್ಲ, ಶ್ರೀಮಠದ ಭಕ್ತರಾಗಿರುವ ಅವರು ಜನಾನುರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡು ಹೊರಹೊಮ್ಮಿದ್ದಾರೆ. ಅವರ ಸೇವೆ ಈ ಕಾರ್ಯಕ್ರಮದ ಮೂಲಕ ಮುಂದುವರಿಯಲಿ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹಾರೈಸಿದರು.
ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಲಿಂಗಮ್ಮ ದೊಡ್ಡತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾಂರ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತಿಮ್ಮೇಗೌಡ ಅವರು ಕಾನೂನು ಪ್ರಕಾರವೇ ಜನಮುಖಿ ಸೇವೆ ನೀಡಿ ಎಲ್ಲರ ಮನಸ್ಸಲ್ಲಿ ಉಳಿದವರು, ಎಂದಿಗೂ ಅಧಿಕಾರದ ಅಹಂ ತಲೆಗೆ ಹತ್ತಿಸಿಕೊಂಡವರಲ್ಲ. ಜನಮಾನಸದಲ್ಲಿ ಇಂದಿಗೂ ಜೀವಂತವಾಗಿರುವ ಟಿ.ತಿಮ್ಮೇಗೌಡ ಅವರು ಉತ್ತಮ ಆಡಳಿತ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ. ಆದರೆ ದಯಾನಂದ ಅವರಿಗೆ ಎರಡು ಬಾರಿ ಅಧಿಕಾರ ಸಿಕ್ಕಿದೆ, ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ನಂಜೇಗೌಡ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ವೆಂಕಟಪ್ಪ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು, ತಿಮ್ಮೇಗೌಡ ಅವರು ಉತ್ತಮ ಅಧಿಕಾರಿ ಹಾಗೂ ಅವರನ್ನು ಹತ್ತಿರದಿಂದ ನೋಡಿದಂತೆ ಗಾಂಧಿ ಗ್ರಾಮದ ಬಗ್ಗೆ ಅವರ ಅಧಿಕಾರದ ಅವಧಿಯಲ್ಲೇ ಸಲಹೆ ನೀಡಿದ್ದರು. ಅವರ ಜನಪರ ಸೇವೆಯನ್ನು ಎಲ್ಲರೂ ಕಂಡಿದ್ದಾರೆ. ತಿಮ್ಮೇಗೌಡ ಅವರ ಹೆಸರಿನಲ್ಲಿ ಸಮಾಜಮುಖಿ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎನಿಸುತ್ತದೆ ಎಂದು ಶ್ಲಾಘಿಸಿದರು.
ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ fonte ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಣ ಆಯುಕ್ತ ಕೆ.ಎ.ದಯಾನಂದ, ಜನಮುಖಿ ಆಡಳಿತ ನಡೆಸಿದ್ದ ತಿಮ್ಮೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಆನಂದ ಉಂಟು ಮಾಡಿದೆ. ಮಂಡ್ಯ ಜಿಲ್ಲೆಯ ಪಕ್ಕದ ಮೈಸೂರು ಜಿಲ್ಲೆಯವನಾದರೂ ನನಗೂ ಮಂಡ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ ಮಾತನಾಡಿ, ಅಧಿಕಾರಿಗಳನ್ನು ನಿರ್ಲಕ್ಷ್ಯದಿಂದ ಕಾಣುವುದು ಬೇಡ. ರಾಜಕಾರಣಿಗಳು ಅಧಿಕಾರ ಮುಗಿದ ಮೇಲೆ ನಿಷ್ಕ್ರಿಯಗೊಳ್ಳುತ್ತಾರೆ. ಆದರೆ ಅಧಿಕಾರಿಗಳು ನಿರಂತರವಾಗಿ ಇರುತ್ತಾರೆ. ಅವರನ್ನು ಗೌರವಯುತವಾಗಿ ಸಮಾಜದಲ್ಲಿ ಕಾಣಬೇಕಿದೆ ಎಂದರು.
ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿಯನ್ನು ಕೆ.ಎ.ದಯಾನಂದ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಬಿ.ಎಂ.ನಂಜೇಗೌಡ ಅವರಿಗೆ 25 ಸಾವಿರ ರೂ. ಒಳಗೊಂಡಂತೆ ಹಾಗೂ ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರವನ್ನು ಪ್ರತಿಭಾವಂತ ವಿದ್ಯಾರ್ಥಿಗಳಾದ ಕೆ.ಆರ್.ಪೇಟೆ ಧೃತಿ, ಸೌಮ್ಯ, ಮೋನಿಷಾ ಅವರಿಗೆ ನೀಡಲಾಯಿತು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸಲಹೆಗಾರ ಎಚ್.ಎಂ. ವೆಂಕಟಪ್ಪ ಮೊದಲಾದವರು ಹಾಜರಿದ್ದರು.




