ವರದಿ: ಪ್ರಭು ವಿ ಎಸ್
ಕಲುಷಿತ ನೀರು ಸೇವಿಸಿ ಹನ್ನೊಂದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು 11ಕ್ಕೂ ಹೆಚ್ಚು ತೀವ್ರವಾಗಿ ಅಸ್ವಸ್ಥವಾಗಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ವಲಯದ ಬಳಿ ಶುಕ್ರವಾರ ಸಂಜೆ ವರದಿಯಾಗಿದೆ.
ಮಂಡ್ಯ ತಾಲೂಕು ಮುತ್ತೆಗೆರೆ ಗ್ರಾಮದ ರಾಜಣ್ಣ ಮತ್ತು ಸಹಚರರಿಗೆ ಸೇರಿದ 2೦೦ ಕುರಿಗಳನ್ನು ಸೋಮನಹಳ್ಳಿ ಅಕ್ಕಪಕ್ಕದ ಜಮೀನುಗಳಲ್ಲಿ ಮೇಯಲೆಂದು ಬಿಟ್ಟಿದ್ದು ಈ ವೇಳೆ ಕೈಗಾರಿಕಾ ವಲಯದ ಬಳಿ ಹಾದುಹೋಗಿರುವ ಚರಂಡಿಯಲ್ಲಿ ಹರಿಯುತ್ತಿದ್ದ ನೀರು ಸೇವಿಸಿದ 25ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡು ಸ್ಥಳದಲ್ಲೇ 11 ಕುರಿಗಳು ಸಾವನ್ನಪ್ಪಿವೆ.
ಸ್ಥಳೀಯರ ದೂರವಾಣಿ ಕರೆ ಮೇರೆಗೆ ಸ್ಥಳಕ್ಕಾಗಮಿಸಿದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಗೋವಿಂದು ಮತ್ತು ವೈದ್ಯರ ತಂಡ ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಈ ವೇಳೆ ಪಶು ವೈದ್ಯರಾದ ಡಾ| ಶಿವಶಂಕರ್, ಡಾ| ಕಿರಣ್, ಸಿಬ್ಬಂಧಿಗಳಾದ ರಾಮಕೃಷ್ಣ, ರಾಜಶೇಖರ್, ಸುನೀಲ್ ಮತ್ತು ಕುರಿಗಳ ಮಾಲೀಕ ರಾಜಣ್ಣ ಸ್ಥಳದಲ್ಲಿದ್ದರು.
ಪರಿಹಾರಕ್ಕೆ ಆಗ್ರಹ
ಕುರಿ ಸಾಕಾಣಿಕೆಯನ್ನು ಜೀವನಾಧಾರವಾಗಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಇಲಾಖೆ ವತಿಯಿಂದ ಹೆಚ್ಚಿನ ಪರಿಹಾರ ಒದಗಿಸುವ ಜತೆಗೆ ಕೈಗಾರಿಕಾ ಪ್ರದೇಶದಲ್ಲಿ ವಿಷಅನಿಲ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿದಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಈ ಸಂಬಂಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.




