ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಗಿ, ಚಿಕೂನ್ ಗುನ್ಯ,ಮಲೇರಿಯಾ, ಮೆದುಳು ಜ್ವರ, ಜಿಕ್ ಹಾಗೂ ಆನೆ ಕಾಲು ರೋಗಗಳ ನಿಯಂತ್ರಣ ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಹೇಳಿದರು .
ಶ್ರೀರಂಗಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ “ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ
“ಡೆಂಗ್ಯೂ ನಿಯಂತ್ರಣ ಕುರಿತು” ಏರ್ಪಸಿದ್ದ ಅಡ್ವೋಕೆಸಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೊಳ್ಳೆಗಳಿಂದ ಹರಡುವ ರೋಗಗಳಾದ,ಡೆಂಗಿ ಜ್ವರ,ಚಿಕೂನ್ ಗುನ್ಯಾ,ಮಲೇರಿಯಾ,ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳ ಲಕ್ಷಣಗಳು,ಹರಡುವಿಕೆ,ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಲಾರ್ವ ಪ್ರಾತ್ಯಕ್ಷಿಕೆಯ ಮೂಲಕ ಸೊಳ್ಳೆಗಳ ಜೀವನ ಚಕ್ರ ಹಾಗು ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನುಗಳ ಮಹತ್ವದ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಮಾತನಾಡಿ ಪ್ರತಿ ಶುಕ್ರವಾರ ಸರ್ಕಾರದ ಆದೇಶದಂತೆ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆಯ ಒಳಗೆ ಹಾಗೂ ಮನೆಯ ಸುತ್ತಮುತ್ತ ಸ್ವಯಂ ತಾವೇ ಲಾರ್ವ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವ ಚಟುವಟಿಕೆ ಹಾಗೂ ಎಲ್ಲಾ ಕಚೇರಿ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವ ಚಟುವಟಿಕೆ ಹಮ್ಮಿಕೊಳ್ಳಲು ತಿಳಿಸಿ ಗ್ರಾಮ ಮಟ್ಟದಲ್ಲಿ ಸೊಳ್ಳೆಗಳ ನಿಯಂತ್ರಣದಲ್ಲಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಕುರಿತು ವಿವರಿಸಿದರು.
ಅಡ್ವೋಕೆಸಿ ಕಾರ್ಯಾಗಾರದಲ್ಲಿ ತಾಲ್ಲೂಕು ಪಂಚಾಯತಿ ಯೋಜನಾಧಿಕಾರಿ ತ್ರಿವೇಣಿ ಎಂ.ಎಂ, ಡಿವಿಬಿಡಿಸಿಪಿ ಕಛೇರಿಯ ಮೆಲ್ವಿಚಾರಕ ಶಿವಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್, ಫಣೀಂದ್ರ, ಮೇಘನಾ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ, ತಾಪಂ ಐಇಸಿ ಸಂಯೋಜಕಿ ಸುಮ ಮತ್ತು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.




