ಸಂಜು ಆಲಕೆರೆ
ಪಂಚು : ಲೋ ಪಂಚು ವಿಷ್ಯ ಗೊತ್ತಾಯ್ತ
ಸಂಚು : ಏನ್ ಆರ್ ಸಿ ಬಿ ಕಪ್ ಗೆಲ್ತಾ
ಪಂಚು : ಏನೋ ನೀನು ಯಾವಾಗ್ ನೋಡಿದ್ರು ಆರ್ ಸಿ ಬಿ, ಆರ್ ಸಿ ಬಿ ಅಂತಿರ್ತೀಯ,
ಸಂಚು : ನಿನ್ಗೆ ಅರ್ಥ ಆಗಲ್ಲ ಬಿಡು, ಆರ್ ಸಿ ಬಿ ನಮ್ಮ ಕರ್ನಾಟಕದ ತಂಡ ಕನ್ನಡಿಗರು ಸಪೋರ್ಟ್ ಮಾಡ್ ಬೇಕು, ನಿನ್ಗೆ ಗೊತ್ತಾಗಲ್ಲ…

ಪಂಚು : ಐ ಪಿ ಎಲ್ ಬಗ್ಗೆ ನಿನ್ನ ಅಭಿಪ್ರಾಯ
ಸಂಚು : ಐಪಿಎಲ್ ಅಂದ್ರೆ ಆರ್ ಸಿ ಬಿ ಅಂದ್ರೆ ಐಪಿಎಲ್ ಅಷ್ಟೇ..
ಪಂಚು : ನೇರವಾಗಿ ವಿಷ್ಯಕ್ಕೆ ಬರ್ತೀನಿ, ಐಪಿಎಲ್ ಬೆಟ್ಟಿಂಗ್ ಬಗ್ಗೆ ಏನ್ ಗೊತ್ತು ನಿನ್ಗೆ..
ಸಂಚು : ಬೆಟ್ಟಿಂಗ್ ಅನ್ನೋದು ದುಡ್ಡಿರೋರ ದುಡಿಮೆ, ದುಡ್ ಇಲ್ದೇ ಇರೋರು ಸಾಲ ಮಾಡ್ಕೊಂಡು ಸಂಪಾದನೆ ಮಾಡೋಕೆ ಹೋಗ್ತಾರೆ, ಶವವಾಗಿ ಆಚೆ ಬರ್ತಾರೆ..
ಪಂಚು : ನೀನು ಆಡ್ತಿದ್ದೆ ತಾನೇ, ಕಷ್ಟ ಪಟ್ಟು ಕೂಡಿಟ್ಟ ದುಡ್ಡೆಲ್ಲ ಹೋದ್ಮೇಲೆ, ಆ ಕಡೆ ತಿರುಗಿಯೂ ನೋಡಿಲ್ಲ, ಆದ್ರೆ ಎರಡು ದಿನದ ಹಿಂದೆ ಯಾವಳೋ ಬೇವರ್ಸಿ ಫೋನ್ ಮಾಡಿ ಸಾರ್ ಬೋನಸ್ ಕೊಡ್ತೀವಿ ಬೆಟ್ಟಿಂಗ್ ಆಡಿ ಯಾರಿಗ್ ಗೊತ್ತು ನಿಮ್ ಲಕ್ ಇದ್ರೆ ಕೋಟಿ ಗೆಲ್ಬಹುದು ಅಂತ..
ಸಂಚು : ನೀನ್ ಏನ್ ಹೇಳ್ದೆ
ಪಂಚು : ದುಡ್ ಯಾರ್ ನಿಮ್ ಅಪ್ಪ ಕೊಟ್ಟನ, ನನ್ ಫೋನ್ ನಂಬರ್ ಯಾರ್ ಕೊಟ್ರು ಅಂತ ಕೇಳಿದಿಕ್ಕೆ, ನಮ್ದು ಸರ್ಕಾರದಿಂದ ಮಾನ್ಯತೆ ಪಡೆದಿರುವ ಅಧಿಕೃತ ಬೆಟ್ಟಿಂಗ್ ಅಪ್ಲಿಕೇಶನ್ ಸಾರ್, ಈ ನಂಬರ್ ಫೈಯರ್ ಪ್ಲೇ ನಲ್ಲಿ ರಿಜಿಸ್ಟರ್ ಆಗಿತ್ತು ಅಲ್ಲಿಂದ ಕೊಟ್ರು ಅಂತ ಹೇಳ್ತಾಳೆ.. ಕನ್ನಡದಲ್ಲಿ ಸ್ಪಷ್ಟವಾಗಿ ಮಾತಾಡ್ತಾಳೆ, ಎಲ್ಲಿರೋದು ಅಂತ ಹೇಳಿದ್ರೆ ಹೈದರಾಬಾದ್ ಅಂತಾಳೆ, ಕನ್ನಡ ಮಾತಾಡಿದಕ್ಕೆ ಧನ್ಯವಾದಗಳು, ಮನೆಹಾಳು ಮಾಡೋಕೆ ಕನ್ನಡ ಬಳಸಬೇಡಿ ಅಂತ ಬಾಯಿಗೆ ಬಂದಹಾಗೆ ಬೈದು ಸುಮ್ಮನಾದೆ..
ಸಂಚು : ಒಳ್ಳೆ ಕೆಲ್ಸ, ಇನ್ನೊಂದ್ ತಿಳ್ಕೊ ಐಪಿಎಲ್ ಅಂದ್ರೆ ಆರ್ ಸಿ ಬಿ, ಆರ್ ಸಿ ಬಿ ಅಂದ್ರೆ ಐಪಿಎಲ್ ಅಂತ ಐಪಿಎಲ್ ಅಂದ್ರೆ ಬೆಟ್ಟಿಂಗ್, ಬೆಟ್ಟಿಂಗ್ ಅಂದ್ರೆ ಐಪಿಎಲ್
ಪಂಚು : ಹಿಂಗೇ ಮಾತಾಡಿದ್ರೆ ಕೇಸ್ ಹಾಕ್ತಾರೆ ನಿನ್ ಮೇಲೆ,
ಸಂಚು : ಐಪಿಎಲ್ ಬೆಟ್ಟಿಂಗ್ ಆಡಿ ಊರು ಬಿಟ್ಟೋರು, ಪ್ರಾಣ ಕಳೆದುಕೊಂಡಿರುವವರ ದಾಖಲೆಗಳು ಪೊಲೀಸ್ ಇಲಾಖೆನಲ್ಲೆ ಸಿಗುತ್ತೆ, ನಾನೇನು ತಪ್ ಮಾತಾಡಿಲ್ಲ ಬಿಡು,
ಪಂಚು : ನಿಜಕ್ಕೂ ನೀನು ಆ ಬೆಟ್ಟಿಂಗ್ ಭೂತದಿಂದ ತಪ್ಪಿಸಿಕೊಂಡು ಆಚೆ ಬಂದದ್ದು ಖುಷಿ ಆಯ್ತು,
ಸಂಚು : ಲೋ ಸುಮ್ನಿರೋ ನಾನ್ ಬೆಟ್ಟಿಂಗ್ ಆಡ್ತಿದ್ದೆ ಅಂತ ಯಾರಿಗೂ ಗೊತ್ತಿಲ್ಲ..ನೀನು ಯಾರಿಗೂ ಹೇಳ್ಬೇಡ
ಪಂಚು : ಎಷ್ಟೋ ಜನ ಹೀಗೆ ಬೆಟ್ಟಿಂಗ್ ಆಡ್ತಾರೆ ಯಾರಿಗೂ ಗೊತ್ತಾಗಲ್ಲ, ಒಂದು ದಿನ ಇದ್ದಕ್ಕಿಂದಂತೆ ಹೆಣವಾದಾಗಲೇ ಪೊಲೀಸ್ ತನಿಖೆಯಿಂದ ಎಲ್ಲರಿಗೂ ತಿಳಿಯೋದು ಇವ್ನು ಬೆಟ್ಟಿಂಗ್ ಆಡ್ತಿದ್ದ ಅಂತ, ಆಗ ಅವನು ನಮ್ಮನ್ನೆಲ್ಲ ಬಿಟ್ಟುವೊದನಲ್ಲ ಅನ್ನೋ ನೋವಿಗಿಂತ ಬೆಟ್ಟಿಂಗ್ ನಲ್ಲಿ ಸೋತು ಅನ್ಯಾಯವಾಗಿ ಜೀವ ಕಳೆದುಕೊಂಡನಲ್ಲ ಬಡ್ಡಿಮಗ ತು ಇವ್ನ್ ಜನ್ಮಕ್ಕೆ ಅಂತ ಮನಸಿಗೆ ಬಂದ ಹಾಗೆ ಬೈತಾರೆ..
ಸಂಚು : ಹೌದು ಮಗಾ ನಮ್ಮಂತ ಮಿಡಲ್ ಕ್ಲಾಸ್ ಜನರು ಬೆಟ್ಟಿಂಗ್ ಆಡೋದು ಸೋಕಿಗಾಗಿ ಅಲ್ಲ, ಎಲ್ಲ ಸಮಸ್ಯೆಗಳಿಗೆ ದುಡ್ಡೇ ಮುಖ್ಯ ಅನ್ನೋ ವಾತಾವರಣ ಸೃಷ್ಟಿಯಾಗಿರುವಾಗ, ಕಡಿಮೆ ಅವಧಿಯಲ್ಲಿ ಹೆಚ್ಚು ದುಡ್ಡು ಮಾಡುವ ಗೀಳಿಗೆ ಬಿದ್ದು ಬದುಕನ್ನೇ ಹಾಳು ಮಾಡ್ಕೋತೀವಿ..
ಪಂಚು : ಎಲ್ ನೋಡಿದ್ರು ಬೆಟ್ಟಿಂಗ್ ಆಪ್ ಪ್ರಮೋಷನ್, ಐಪಿಎಲ್ ಬೆಟ್ಟಿಂಗ್ ಜಾಲ ಅಂತ ಗೊತ್ತಿದ್ರು ಅಟ್ಟಕ್ಕೆ ಹೇರಿಸಿ ಆರತಿ ಮಾಡ್ತಿದ್ದಾರೆ..
ಸಂಚು : ಆರ್ ಸಿ ಬಿ ಈಸಲ ಗೆದ್ರೆ ಗೆಲುವು 1 ಅಷ್ಟೇ ಸೋತ್ರೆ ಇನ್ನೊಂದು ಸೋಲು ಅಷ್ಟೇ ಆದ್ರೆ ಆರ್ ಸಿ ಬಿ ಕಪ್ ಗೆಲ್ತಾರೆ ಅಂತ ಶ್ರಮಬಿದ್ದು ಸಾಲ ಮಾಡಿ ಆರ್ ಸಿ ಬಿ ಮೇಲೆ ಬೆಟ್ಟಿಂಗ್ ಕಟ್ಟಿರ್ತಾರಲ್ಲ , ಒಂದ್ ವೇಳೆ ಆರ್ ಸಿ ಬಿ ಸೋತ್ರೆ, ಅವರ ಕಥೆ ಏನ್ ಆಗ್ಬಹುದು..
ಪಂಚು : ಒಳ್ಳೆದ್ ಮಾತಾಡು ಈ ಸಲ ಆರ್ ಸಿ ಬಿ ಗೆಲ್ಲುತ್ತೆ.. ನಿಮ್ಮಂತೋರೆ ಕಣೋ ಬೆಟ್ಟಿಂಗ್ ಆಡೋರ ಸಾವಿಗೆ ಕಾರಣ ಅಂದ್ರೆ ಕ್ರೇಜ್ ಹುಟ್ಟಿಸೋದು ಇಷ್ಟೊಂದ್ ಜನ ಹೇಳ್ತಿದ್ದಾರೆ ಅಂದ್ರೆ ಇವರು ಹೇಳಿದಂಗೆ ಆಗುತ್ತೆ ಅಂತ ಬೆಟ್ಟಿಂಗ್ ಆಡಿ ಸೋತು ಸೋತು ಸಾವಿಗೆ ಶರಣಾಗ್ತಾರೆ..
ಸಂಚು : ನಾವೇನ್ ಬೆಟ್ಟಿಂಗ್ ಆಡಿ ಅಂತ ಹೇಳಿದ್ವ, ನಮಗೆ ಇಷ್ಟ ಇರುವ ತಂಡಗಳಿಗೆ ಸಪೋರ್ಟ್ ಮಾಡ್ತೀವಿ ಅಷ್ಟೇ..
ಪಂಚು : ಏನೋ ಮಾಡ್ರಪ್ಪ ಎಸ್ಟ್ ಹೇಳಿದ್ರು ಅಷ್ಟೇ ನಿಮ್ಗೆ..
ಸಂಚು : ಬಾ ನಾಳೆ ಆರ್ ಸಿ ಬಿ ಗೆದ್ರೆ ಭರ್ಜರಿ ಬಾಡೂಟ ಹಾಕಿಸ್ತೀನಿ..
ಪಂಚು : ಆರ್ ಸಿ ಬಿ ಸೋತ್ರು ಕೂಡಾ ಬಾಡೂಟ ಮಾಡುವಂತೆ ಬಿಡು,
ಸಂಚು : ಯಾರೋ ಅವ್ನು ಆರ್ ಸಿ ಬಿ ಸೋತ್ರೆ ಬಾಡೂಟ ಹಾಕಿಸೋನು..
ಪಂಚು : ಹೆತ್ತವರಿಗೆ ಸಾಲದ ಹೊರೆವರೆಸಿ ಬೆಟ್ಟಿಂಗ್ ಆಡಿ ಸೋತು ಇವತ್ತು ಸಾಯುವ ಮಕ್ಕಳಿಗೆ 11ನೇ ದಿನಕ್ಕೆ ತಿಥಿ ಮಾಡ್ತಿರ್ತಾರಲ್ಲ ಅಂತಹ ಮನೆಗಳಿಗೆ ಹೋಗಿ ತಿಥಿ ಊಟ ಮಾಡ್ಕೊಂಡ್ ಬನ್ನಿ..
ಸಂಚು : 😥
ಪಂಚು : ಇವತ್ತು ಎಷ್ಟೇ ಕಷ್ಟ ಅಂತ ನಿಮ್ ಬೆಟ್ಟಿಂಗ್ ಆಡೋ ಫ್ರೆಂಡ್ ಫೋನ್ ಮಾಡಿ ಕೇಳಿ ಕೊಂಡರು ದುಡ್ ಕೊಡಬೇಡಿ, ಬಡ್ಡಿ ಆಸೆಗೆ ಸಾಲ ಕೊಡುವವರು ಬೆಟ್ಟಿಂಗ್ ಆಡೂರಿಗೆ ಸಾಲ ಕೊಡ್ಬೇಡಿ.. 🙏🏻




