Tuesday, May 21, 2024

ಪ್ರಾಯೋಗಿಕ ಆವೃತ್ತಿ

ಕೆಟ್ಟಕಾಲದ ಒಳ್ಳೆಯ ಸುದ್ದಿಗೆ ನಿಟ್ಟುಸಿರುಗರೆವ ಮುನ್ನ….

ಮಾಚಯ್ಯ ಎಂ ಹಿಪ್ಪರಗಿ

ಎಲೆಕ್ಟೋರಲ್ ಬಾಂಡ್ ಬಹಿರಂಗ ಪಡಿಸುವ ಕುರಿತಂತೆ ಇವತ್ತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನಿಂದ ಬಹಳಷ್ಟು ಪ್ರಜಾತಂತ್ರವಾದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕೇಂದ್ರ ಸರ್ಕಾರಕ್ಕೂ, ಅದರ ಆಣತಿಯಂತೆ ನಡೆಯುತ್ತಿರುವ ಎಸ್ ಬಿ ಐ ಮತ್ತು ಚುನಾವಣಾ ಆಯೋಗದ ಆಡಳಿತಗಾರರಿಗೂ ನಮ್ಮ ಸರ್ವೋಚ್ಛ ನ್ಯಾಯಾಲಯ ಬಿಸಿ ಮುಟ್ಟಿಸಿದೆ ಎಂಬುದು ನಮ್ಮೆಲ್ಲರ ನಿಟ್ಟುಸಿರಿಗೆ ಕಾರಣ. ಈಗ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಎಲೆಕ್ಟೋರಲ್ ಬಾಂಡ್ ಅವ್ಯವಹಾರ ನಡೆಸಿದ ಬಿಜೆಪಿ ಬೆತ್ತಲಾಗಲಿದೆ ಎಂಬ ಬಹುಕೋಟಿ ನಿರೀಕ್ಷೆಯೂ ನಮ್ಮದಾಗಿರಬಹುದು. ಆ ನಿರೀಕ್ಷೆ ಎಷ್ಟರಮಟ್ಟಿಗೆ ನಿಜವಾಗಲಿದೆ ಅನ್ನೋದು ನಂತರದ ಮಾತು. ಆದ್ರೆ ನಾವಿರುವ ಇಂಥಾ ಕಡುಕೆಟ್ಟ ಕಾಲದಲ್ಲಿ, ಸಾಧ್ಯಂತವೇ ಇಲ್ಲದ ಒಳ್ಳೆಯ ಸುದ್ದಿಯೊಂದು ಅಪ್ಪಳಿಸುತ್ತದೆಯೆಂದರೆ ಅದಕ್ಕೆ ಖುಷಿ ಪಡುವುದಕ್ಕಿಂತಲೂ ಅನುಮಾನದಿಂದ ನೋಡುವ ಅಗತ್ಯದ ತುರ್ತಿದೆ.

ಇಲ್ಲಿಗೆ ಕೆಲವೇ ದಿನಗಳ ಹಿಂದೆ, ಈಗ ನಿಟ್ಟಿಸಿರುವ ಬಿಡುತ್ತಿರುವ ನಾವುಗಳೇ ದೇಶದ ಎಲ್ಲಾ ಸಂಸ್ಥೆಗಳು, ಅಂದ್ರೆ ಚುನಾವಣಾ ಆಯೋಗ, ಸಿಬಿಐ, ಇಡಿ, ಐಟಿ, ಕೊನೆಗೆ ನ್ಯಾಯಾಲಯಗಳು ಕೂಡಾ ಆಳುವವರ ಕೈಗೊಂಬೆಯಂತೆ ವರ್ತಿಸುತ್ತಿವೆ ಅಂತ ಮೂದಲಿಸಿದ್ದನ್ನು ಮರೆಯಲಾದೀತೆ? ಹಾಗೆ ಮೂದಲಿಸಲು ನಮಗೆ ಸಾಕಷ್ಟು ಸಮರ್ಥನೆಗಳಿದ್ದವು. ಹಲವು ಪ್ರಕರಣಗಳಲ್ಲಿ ಹೊರಬಿದ್ದಿದ್ದ ತೀರ್ಪುಗಳು ಅದೆಷ್ಟು ಆಘಾತಕಾರಿಯಾಗಿರಲಿಲ್ಲ. ನ್ಯಾಯಾಂಗದಲ್ಲೂ ರಾಜಕೀಯ ಹಸ್ತಕ್ಷೇಪದ ಗೆರೆಗಳ ಗುಮಾನಿ ಎದ್ದು ಕಾಣುತ್ತಿತ್ತು. ಇಷ್ಟೆಲ್ಲ ನಿಯಂತ್ರಣಕ್ಕೆ ಒಳಗಾಗಿದ್ದ ನ್ಯಾಯಾಲಯಗಳು, ಈಗ ದಿಢೀರ್ ಅಂತ, ಯಾವ ಆಡಳಿತಾತ್ಮಕ ಬದಲಾವಣೆಯೂ ಇಲ್ಲದೆ, ಜನಪರವಾಗಿ ಆಳುವ ಸರ್ಕಾರದ ವಿರುದ್ಧ ತೀರ್ಪು ನೀಡುತ್ತವೆಂದರೆ, ಅದನ್ನು ನಾವು ಹೇಗೆ ಸ್ವೀಕರಿಸಬೇಕು?

ಇದು ಮತ್ತೊಂದು ಹುನ್ನಾರದ ಭಾಗವಾಗಿರಬಹುದೇ ಎಂಬ ಅನುಮಾನದಿಂದಲೇ ಇದನ್ನು ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ. ಆ ಗುಮಾನಿಯಿಂದ ನೋಡಲು ಮುಂದಾದಾಗ, ಚುನಾವಣೆಯನ್ನೆ ರದ್ದು ಮಾಡಲು ಹೀಗೆಲ್ಲ ಆಟವಾಡಲಾಗುತ್ತಿದೆಯಾ? ಅಥವಾ ಅಕಸ್ಮಾತ್, ಈ ಚುನಾವಣೆಯ ನಂತರ ತಾವು ಅಧಿಕಾರ ಕಳೆದುಕೊಂಡು, ಬೇರೊಂದು ಪಕ್ಷ ಅಧಿಕಾರಕ್ಕೇರಿದರೂ, ಎಲೆಕ್ಟೋರಲ್ ಬಾಂಡ್ ಮೂಲಕ ನಡೆಸಲಾದ ಅವ್ಯವಹಾರ ಬಯಲಿಗೆ ಬರದಂತೆ, ತಾವಿದ್ದ ಅವಧಿಯಲ್ಲೇ ಅದನ್ನು ಕಗ್ಗಂಟಾಗಿಸಿ, ಸಂಕೀರ್ಣಗೊಳಿಸುವ ರಾಜಕೀಯ ಹುನ್ನಾರಗಳೇನಾದರೂ ನಡೆಯುತ್ತಿವೆಯಾ ಎಂಬ ಆತಂಕಗಳು ಕಾಡಲಾರಂಭಿಸುತ್ತವೆ.

ಎಲೆಕ್ಟೋರಲ್ ಬಾಂಡ್ ಗಳ ಮಾಹಿತಿ ಬಹಿರಂಗ ಪಡಿಸಲೇಬೇಕು ಅಂತ ಸುಪ್ರೀಂ ಕೋರ್ಟ್ ಒತ್ತಡ ತರುವ ವೇಳೆಯಲ್ಲೇ, ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಹುದ್ದೆಗೆ ಅರುಣ್ ಗೋಯಲ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಆತ ರಾಜಕೀಯ ಒತ್ತಡಕ್ಕೆ ಈಡಾಗಿದ್ದ ಎನ್ನಲು, ಆತನಿದ್ದಷ್ಟೂ ಕಾಲ ಸರ್ಕಾರಕ್ಕೆ ಸವಾಲೊಡ್ಡುವಂತೆ ಕೆಲಸ ಮಾಡಿದವನೇನಲ್ಲ. ಹೆಚ್ಚೂಕಮ್ಮಿ ಇಡೀ ಚುನಾವಣಾ ಆಯೋಗವನ್ನೇ ಬಿಜೆಪಿಯ ಭಟ್ಟಂಗಿಯಾಗಿಸುವಷ್ಟು ಸೊರಗಿಸಿಹಾಕಿದ್ದ. ಅಂತವನು ಸಾರ್ವತ್ರಿಕ ಚುನಾವಣಾ ಸನಿಹದಲ್ಲಿರುವಾಗ ರಾಜೀನಾಮೆ ಕೊಡುವುದಕ್ಕೆ ಅರ್ಥವೇನುಂಟು? ಒಂದುಕಡೆ ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆಯೆ ಕುಸಿದುಹೋಗಿದೆ; ಮತ್ತೊಂದೆಡೆ, ಚುನಾವಣಾ ಆಯುಕ್ತರೇ ಆ ಹುದ್ದೆಗೆ ರಾಜೀನಾಮೆ ನೀಡಿ ತಾಂತ್ರಿಕ ಸಮಸ್ಯೆಯನ್ನು ತಂದೊಡ್ಡಿದ್ದಾರೆ; ಇನ್ನೊಂದೆಡೆ, ಎಲೆಕ್ಟೋರಲ್ ಬಾಂಡ್ ಗಳ ಮೇಲೆ ನ್ಯಾಯಾಂಗ ತೀವ್ರ ವಿಚಾರಣೆಗೆ ಮುಂದಾಗಿ ಕುತೂಹಲ ಹುಟ್ಟಿಸಿದೆ; ಈ ಹಿಂದೆ ದೇಶಾದ್ಯಂತ ಉಂಟಾಗಿದ್ದ ಅಗಾಧ ಪ್ರತಿರೋಧ, ಪ್ರತಿಭಟನೆಯ ಹೊರತಾಗಿಯೂ ಈಗ ವಿವಾದಿತ ಸಿಎಎ ಜಾರಿಗೂ ಅಧಿಸೂಚನೆ ಪ್ರಕಟಿಸಲಾಗಿದೆ…. ಹೀಗೆ ಜನರನ್ನು ಒಟ್ಟಾರೆ ಪ್ರಕ್ಷುಬ್ಧತೆಗೆ ತಳ್ಳಿ, ಚುನಾವಣೆಯನ್ನೇ ಬರಖಾಸ್ತು ಮಾಡಿ, ಈ ಸರ್ಕಾರ ಅಧಿಕೃತವಾಗಿ ಸರ್ವಾಧಿಕಾರ ಆಡಳಿತಕ್ಕೆ ಮುನ್ನುಡಿ ಬರೆಯಲಾರದು ಎಂದು ತಲ್ಲಣಿಸದೆ ಇರುವುದು ಹೇಗೆ?

ಇಂತಹ ಅತಿರೇಕವ್ಯಾವುದೂ ಘಟಿಸಲಾರದು ಎಂಬುದು ನನ್ನ ಆಶಯ. ಆದರೆ ನಮ್ಮಂತವರ ಆಶಯಗಳಿಗೆ ಇದು ಅಚ್ಚೇ ದಿನ್ ಅಲ್ಲ ಎನ್ನುವುದು ವಾಸ್ತವ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!