ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿತು.ಆ ಮೂಲಕ 17 ವರ್ಷಗಳ ಸತತ ಪ್ರಯತ್ನದ ನಂತರ ಆರ್ ಸಿ ಬಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿ 6 ರನ್ ಗಳಿಂದ ಸೋಲನ್ನಪ್ಪಿತು.17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿ ಎತ್ತಿ ಹಿಡಿಯಿತು. ಆ ಮೂಲಕ ಕೋಟ್ಯಾಂತರ ಕನ್ನಡಿಗರ ಹಾಗೂ ಕ್ರಿಕೆಟ್ ಅಭಿಮಾನಿಗಳ ಬಹು ವರ್ಷಗಳ ಆಸೆ ಈಡೇರಿಸಿತು.
ಪಂಜಾಬ್ ಕಿಂಗ್ಸ್ ಸೋಲಿಗೆ ಕೃನಾಲ್ ಪಾಂಡ್ಯ ಮುನ್ನುಡಿ ಬರೆದರು.ಶಶಾಂಕ್ ಸಿಂಗ್,ಇಂಗ್ಲಿಸ್ ಬಿಟ್ಟರೆ ಉಳಿದ ಬ್ಯಾಟರ್ ಗಳು ವಿಫಲರಾದರು.
ವಿರಾಟ್ ಕೊಹ್ಲಿ43, ರಜತ್ ಪಾಟೀದಾರ್ 26, ಲಿವಿಂಗ್ಸ್ಟೋನ್ 25, ಜಿತೇಶ್ ಶರ್ಮಾ 24,ಮಯಾಂಕ್ ಅಗರ್ವಾಲ್ 24 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಸ್ಫೋಟಕ ಆಟಗಾರ ಫಿಲ್ ಸಾಲ್ಟ್ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 16 ರನ್ಗಳಿಸಿ ಜೇಮಿಸನ್ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಮಯಾಂಕ್ 2ನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಜೊತೆಗೆ 28 ಎಸೆತಗಳಲ್ಲಿ 38 ರನ್ ಗಳಿಸಿದರು. ಮಯಾಂಕ್ 18 ಎಸೆತಗಳಲ್ಲಿ 24 ರನ್ ಗಳಿಸಿ ಚಹಾಲ್ ಬೌಲಿಂಗ್ನಲ್ಲಿ ಅರ್ಶದೀಪ್ ಸಿಂಗ್ಗೆ ಕ್ಯಾಚ್ ನೀಡಿದರು
ಕ್ರೀಸ್ಗೆ ಬಂದ ನಾಯಕ ರಜತ್ ಪಾಟೀದಾರ್ 16 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 26 ರನ್ಗಳಿಸಿ ಜೇಮಿಸನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇವರು ಔಟಾಗುವ ಮುನ್ನ ಕೊಹ್ಲಿ ಜೊತೆಗೆ 40 ರನ್ಗಳ ಜೊತೆಯಾಟ ನೀಡಿದರು. ಟೂರ್ನಿಯಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಲಿವಿಂಗ್ಸ್ಟೋನ್ 4ನೇ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಜೊತೆಗೆ 24 ಎಸೆತಗಳಲ್ಲಿ 35 ರನ್ ಸೇರಿಸಿದರು. ಕೊಹ್ಲಿ 35 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 43 ರನ್ಗಳಿಸಿದರೆ, ಲಿವಿಂಗ್ಸ್ಟೋನ್ 15 ಎಸೆತಗಳಲ್ಲಿ 25 ರನ್ಗಳಿಸಿ ಔಟ್ ಆದರು.ಜಿತೇಶ್ ಶರ್ಮಾ 10 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 24 ರನ್ಗಳಿಸಿ 18ನೇ ಓವರ್ನಲ್ಲಿ ಔಟ್ ಆದರು. ಶೆಫರ್ಡ್ 9 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 17 ರನ್ಗಳಿಸಿ 19ನೇ ಓವರ್ನ 2ನೇ ಎಸೆತದಲ್ಲಿ ಅರ್ಶದೀಪ್ ಸಿಂಗ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇವರ ವಿಕೆಟ್ ನೊಂದಿಗೆ ಆರ್ಸಿಬಿಯ 200 ಕನಸು ನುಚ್ಚುನೂರಾಯಿತು. 20ನೇ ಓವರ್ನಲ್ಲಿ ಅರ್ಶದೀಪ್ ಕೇವಲ 3 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಒಟ್ಟಾರೆ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 190ಕ್ಕೆ ಸೀಮಿತವಾದರು.
ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್ 40ಕ್ಕೆ3, ಕೈಲ್ ಜೇಮಿಸನ್ 48ಕ್ಕೆ3,ಎಮರ್ ಜೈ 35ಕ್ಕೆ1, ವೈಶಾಕ್ ವಿಜಯ್ ಕುಮಾರ್ 30ಕ್ಕೆ1, ಯುಜೇಂದ್ರ ಚಹಲ್ 37ಕ್ಕೆ1 ವಿಕೆಟ್ ಪಡೆದರು.
ಕೊಯ್ಲಿ ಭಾವುಕ
ಆರ್ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿ, ಮೈದಾನದಲ್ಲೇ ಕಣ್ಣೀರಿಟ್ಟಿರು.ಉಳಿದ ಆಟಗಾರರು ಭಾವುಕರಾದರು. ಇತ್ತ ಕರ್ನಾಟಕ ಸೇರಿದಂತೆ ಎಲ್ಲೆಡೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಒಂದೊಂದು ವಿಕೆಟ್ ಪತನ ಆದಾಗಲೂ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತ್ತು. ತಡ ರಾತ್ರಿಯಾದರೂ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಬೆಂಗಳೂರಿನ ಬೀದಿ ಬೀದಿಯಲ್ಲಿ ಪಟಾಕಿ ಸಿಟಿಸಿ ಸಂಭ್ರಮ ಶುರುವಾಗಿದೆ. 18ನೇ ಆವೃತ್ತಿಯಲ್ಲಿ ಆರ್ಸಿಬಿ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಐಪಿಎಲ್ ಟೂರ್ನಿಗೆ ಹೊಸ ಚಾಂಪಿಯನ್ ಆಗಿದೆ.
ಪಂಜಾಬ್ ಇನ್ನಿಂಗ್ಸ್
191 ರನ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಆರಂಭ ಉತ್ತವಾಗಿತ್ತು. ಮೊದಲ ವಿಕೆಟ್ಗೆ ಪಂಜಾಬ್ ಕಿಂಗ್ಸ್ 43 ರನ್ ಸಿಡಿಸಿತ್ತು. ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ ಸಿಮ್ರನ್ ಸಿಂಗ್ ಜೊತೆಯಾಟ ಪಂಜಾಬ್ ಆತ್ಮವಿಶ್ವಾಸ ಹೆಚ್ಚಿಸಿತ್ತು. ಪ್ರಿಯಾಂಶ್ ಆರ್ಯ 24 ರನ್ ಕಾಣಿಕೆ ನೀಡಿದರೆ, ಪ್ರಬಸಿಮ್ರನ್ 26 ರನ್ ಸಿಡಿಸಿ ಔಟಾದರು. ಆದರೆ ಜೋಶ್ ಇಂಗ್ಲಿಸ್ ಆಟ ಆರ್ಸಿಬಿಗೆ ತಲೆನೋವಾಗಿ ಪರಿಣಿಸಿತು. 4 ಸಿಕ್ಸರ್ ಮೂಲಕ ಇಂಗ್ಲಿಸ್ ಅಬ್ಬರಿಸಿದರು. ಈ ಮೂಲಕ 39 ರನ್ ಸಿಡಿಸಿದರು. ಆದರೆ ನಾಯಕ ಶ್ರೇಯಸ್ ಅಯ್ಯರ್ 1 ರನ್ ಸಿಡಿಸಿ ಮುಗ್ಗರಿಸಿದರು. ನೆಹಾಲ್ ವಧೆರಾ 15 ರನ್ ಸಿಡಿಸಿ ಔಟಾದರು. ಭರ್ಜರಿ ಸಿಕ್ಸರ್ ಮೂಲಕ ಅಬ್ಬರಿಸಿದ ಮಾರ್ಕಸ್ ಸ್ಟೊಯ್ನಿಸ್ ಮರು ಎಸೆದಲ್ಲಿ ವಿಕೆಟ್ ಕೈಚೆಲ್ಲಿದರು. ಶಶಾಂಕ್ ಸಿಂಗ್ ಹೋರಾಟ ನೀಡಿದರೂ ಪ್ರಯೋಜನವಾಗಲಿಲ್ಲ.




