ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿ ಸರ್ಕಾರಿ ಓಣಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಮಳವಳ್ಳಿ ತಾಲೂಕು ಆಡಳಿತ ಮೀನಾಮೇಷದ ನೀತಿ ಅನುಸರಿಸಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ರಾಜ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರೇಹಳ್ಳಿ ಗ್ರಾಮದ ಸರ್ವೇ ನಂ ೬೮೮ ಹಾಗೂ ೭೦೨ರ ಮಧ್ಯದ ಓಣಿ ರಸ್ತೆಯಿಂದ ಸರ್ವೇ ನಂ ೬೮೩ ಹಾಗೂ ೬೭೫ರ ಮಧ್ಯದವರೆಗಿನ ಸರ್ಕಾರಿ ಓಣಿ ರಸ್ತೆಯನ್ನು ತೆರವು ಮಾಡಲು ಮುಂದಾಗಿ ಕೆಲವೇ ಅಡಿಗಳಷ್ಟು ತೆರವು ಮಾಡಿ ನಿಲ್ಲಿಸಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಸರ್ವೆ ನಂ ೭೦೨ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಸ್ಥಳ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಓಣಿ ರಸ್ತೆಯ ಅಕ್ಕಪಕ್ಕದ ಜಮೀನಿನವರು ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದರಿಂದ ಇತರೇ ಜಮೀನಿನವರಿಗೆ ವ್ಯವಸಾಯ ಮಾಡಲು, ಕೃಷಿ ಸಾಮಗ್ರಿಗಳನ್ನು ಸಾಗಿಸಲು ತೊಂದರೆಯಾಗಿದೆ ಎಂದು ತಿಳಿಸಿದರು.
ರೈತರ ಒತ್ತಾಯದ ಮೇರೆಗೆ ಒತ್ತುವರಿ ತೆರವಿಗೆ ಮುಂದಾದ ಮಳವಳ್ಳಿ ತಾಲೂಕು ಆಡಳಿತ, ಒತ್ತುವರಿದಾರರ ಕುಮ್ಮಕ್ಕಿಗೆ ಒಳಗಾಗಿ ತೆರವು ಕಾರ್ಯ ಸ್ಥಗಿತಗೊಳಿಸಿದೆ. ಈ ರಸ್ತೆಯ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನಕ್ಕೆ ನೇರ ಸಂಪರ್ಕ ಒದಗಿಸುವ ರಸ್ತಯೂ ಆಗಿದ್ದು, ಜಿಲಲಾಧಿಕಾರಿಗಳು, ಸರ್ವೇ ಅಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಗ್ರಾಮದ ರಾಚೇಗೌಡ, ಸುಬ್ಬೇಗೌಡ, ಕಿರಣ್ಕುಮಾರ್, ಪ್ರವೀಣ್ ಇದ್ದರು.




