Wednesday, July 24, 2024

ಪ್ರಾಯೋಗಿಕ ಆವೃತ್ತಿ

ಮುಖ್ಯಮಂತ್ರಿಗೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲು ಶ್ರಮಿಕ ನಿವಾಸಿಗಳ ನಿರ್ಧಾರ

ಮಂಡ್ಯ ನಗರದ ಆರ್‌ಟಿಓ ಕಛೇರಿ ಎದುರಿನ ಕಾಳಪ್ಪ ಬಡಾವಣೆಯ ಜಾಗದ ವಿಚಾರವನ್ನು ಇತ್ಯರ್ಥಗೊಳಿಸಿ ಅದರ ಅಂತಿಮ ಡಿಕ್ಲರೇಶನ್‌ ಕೂಡಲೇ ಹೊರಡಿಸಬೇಕು.ಇಲ್ಲದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಕೂಡಲೇ ಈ ಬಗ್ಗೆ ಖಚಿತ ಹೆಜ್ಜೆ ಮುಂದಿಡದಿದ್ದಲ್ಲಿ ಮುಖ್ಯಮಂತ್ರಿಗಳಿಂದಲೇ ಸಮಸ್ಯೆಯ ಪರಿಹಾರವನ್ನು ಆಗ್ರಹಿಸಲು ಜುಲೈ 21 ರಂದು ಕೆ.ಆರ್.ಪೇಟೆಗೆ ಆಗಮಿಸುವ ಮುಖ್ಯಮಂತ್ರಿ ಯವರನ್ನು ಭೇಟಿ ಮಾಡುವ ಸಲುವಾಗಿ ಮಂಗಳವಾರ ಜುಲೈ 19ರಿಂದ ಪಾದಯಾತ್ರೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

2006 ರಲ್ಲಿ ಸರ್ಕಾರ ವಾಂಬೆ ಯೋಜನೆಯಡಿಯಲ್ಲಿ 80 ಮನೆಗಳನ್ನು ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿದ ಸಂದರ್ಭದಿಂದ ಇಲ್ಲಿಯ ತನಕ ಕೇವಲ ಬಾಯಿಮಾತಿನ ಭರವಸೆಗಳನ್ನು ಬಿಟ್ಟರೆ ಅಲ್ಲಿನ ನಿವಾಸಿಗಳಿಗೆ ಭೂಮಿ ಹಕ್ಕನ್ನು ಕೊಡಿಸುವ ಕೆಲಸ ಸರ್ಕಾರದಿಂದ ಆಗಿಲ್ಲ.

ಇದರಿಂದಾಗಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರ ಇಲ್ಲದೆ, ವಸತಿಯನ್ನು ನಿರ್ಮಿಸಿಕೊಳ್ಳುವ ಯಾವ ಯೋಜನೆಯ ಅಡಿಯಲ್ಲೂ ಫಲಾನುಭವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸರಿಯಾದ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂದರೂ ಪ್ರತಿ ಬಾರಿ ಪರದಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಲೆಕ್ಕಿಗರ ಸಹಾಯಕ ಸಂಘಟನೆಯ ಕೆಲವರು ನಮಗೂ ನಿವೇಶನ ಮಂಜೂರಾಗಿದೆ ಎಂದು ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ನಗರಸಭೆ ನಿರ್ಮಿಸಿ ಕೊಟ್ಟಿದ್ದ ಶೌಚಾಲಯವನ್ನು ಅತಿಕ್ರಮಣ ಮಾಡಿದ್ದಾರೆ.

ಸ್ಲಂ ಎಂದು ಘೋಷಣೆ ಮಾಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಜಿಲ್ಲಾಡಳಿತ ಕಾಳಪ್ಪ ಬಡಾವಣೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಕಾಳಪ್ಪ ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆರ್ಮುಗಂ ಮಾತನಾಡಿ, ಕೋವಿಡ್ ಕಾಲದಲ್ಲಿ ನಮ್ಮ ಪೌರಕಾರ್ಮಿಕ ಸಮುದಾಯವನ್ನು ಕೋವಿಡ್ ವಾರಿಯರ್ಸ್ ಎಂದೆಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹೊಗಳುತ್ತಿದ್ದರು. ಆದರೆ ನಮ್ಮ ಜನರಿಗೆ ಮನೆಯಿಲ್ಲ,ಹಕ್ಕು ಪತ್ರ ಇಲ್ಲ.ಕಳೆದ 5೦ ವರ್ಷಗಳಿಂದ ಅಭದ್ರತೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನಾವು ಪಟ್ಟಣದ ಕಸ ಗುಡಿಸಿ,ಚರಂಡಿ ಸ್ವಚ್ಛ ಮಾಡಲಷ್ಟೇ ಬೇಕಾಗಿರೋದು.ನಮ್ಮನ್ನು ಮನುಷ್ಯರೆಂದು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿಯ ಎನ್.ಸುಬ್ರಹ್ಮಣ್ಯ ಮಾತನಾಡಿ, ಕಾಳಪ್ಪ ಬಡಾವಣೆಯ ನಿವಾಸಿಗಳು, ಸುಮಾರು 50 ವರ್ಷಗಳಿಂದ ವಾಸವಿದ್ದಾರೆ. ಆ ಜಾಗದಲ್ಲಿ ಸುಮಾರು 80 ಕುಟುಂಬಗಳು ವಾಸವಿದ್ದು, ಹಲವಾರು ಹೋರಾಟಗಳು ನಡೆದು 2007ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಘೋಷಣೆ ಮಾಡಲಾಗಿತ್ತು.

ಆದರೆ, ಪಟ್ಟಭದ್ರರ ದಬ್ಬಾಳಿಕೆ ಮತ್ತು ಶ್ರಮಿಕ ನಿವಾಸಿಗಳ ರಕ್ಷಣೆ ಮಾಡಬೇಕಾದವರೇ ಶಾಮೀಲಾಗಿ ಎಸಗಿದ ಮೋಸದಿಂದಾಗಿ ಬಹಳ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ತಮ್ಮ ವಾಸದ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ನಿವಾಸಿಗಳು ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದರು.

ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ಹಲವಾರು ವರ್ಷಗಳಿಂದ ಕಾಳಪ್ಪ ಬಡಾವಣೆಯ ಭೂಮಿ ಸಮಸ್ಯೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಾ ಬರಲಾಗಿದೆ. ಹಲವಾರು ಅಧಿಕಾರಿಗಳು ಬದಲಾವಣೆ ಆದರೂ ಇಲ್ಲಿಯ ಜನರ ಸಮಸ್ಯೆ ಬಗೆಹರಿದಿಲ್ಲದಿರುವುದು ನೋವಿನ ಸಂಗತಿ ಎಂದರು.

ಕರ್ನಾಟಕ ಜನಶಕ್ತಿ ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ಮಹಿಳಾ ಮುನ್ನಡೆಯ ಪೂರ್ಣಿಮಾ, ಕಾಳಪ್ಪ ಬಡಾವಣೆಯ ಮಹಿಳಾ ಮುಖಂಡರಾದ ತುಳಸಮ್ಮ, ಲಕ್ಷ್ಮಮ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!