Sunday, November 22, 2026

ಪ್ರಾಯೋಗಿಕ ಆವೃತ್ತಿ

ಶ್ರಮಿಕ ನಿವಾಸಿಗಳ ಅಹವಾಲು ಆಲಿಸದ ಜಿಲ್ಲಾಡಳಿತ: ಸಿಎಂ ಬಳಿಗೆ ಪಾದಯಾತ್ರೆ

ಕಾಳಪ್ಪ ಬಡಾವಣೆಯ ನಿವಾಸಿಗಳು ಸ್ಲಂ ಘೋಷಣೆಗಾಗಿ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಇಂದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತ ಸ್ಪಂದಿಸದ ಕಾರಣ ಕೆ.ಆರ್. ಪೇಟೆ ಕಡೆಗೆ ಶ್ರಮಿಕ ನಿವಾಸಿಗಳು ಪಾದಯಾತ್ರೆ ಹೊರಟಿದ್ದಾರೆ.

ಜುಲೈ 21ರಂದು ಕೆ.ಆರ್. ಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವುದರಿಂದ ಅಲ್ಲಿ ಹಕ್ಕೊತ್ತಾಯ ಪತ್ರ ಸಲ್ಲಿಸಲು ತೀರ್ಮಾನಿಸಿ ಪಾದಯಾತ್ರೆ ಹೊರಟರು.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯ ಬಳಿ ನೂರಾರು ಸಂಖ್ಯೆಯಲ್ಲಿದ್ದ ಶ್ರಮಿಕ ನಿವಾಸಿಗಳು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಐದು ದಿನಗಳಿಂದ ಶ್ರಮಿಕ ಕನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಯಾಗಲಿ, ಬೇರೆ ಅಧಿಕಾರಿಗಳಾಗಲಿ ಬರಲಿಲ್ಲ‌.ಶ್ರಮಿಕ ನಿವಾಸಿಗಳ ಪರ ಇವರಿಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪಾದಯಾತ್ರೆಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ ಸಮತಳ, ಮರಿಯಪ್ಪ ಹಾಗೂ ಕರಿಯಪ್ಪ ಗುಡಿಮನಿ ತಮಟೆ ಹೊಡೆಯುವುದರ ಮೂಲಕ ಚಾಲನೆ ನೀಡಿದರು.

ಕುಮಾರ ಸಮತಲ ಅವರ ಮಾತನಾಡಿ, ಕಳೆದ 50 ವರ್ಷಗಳಿಂದ ಸ್ಲಂ ನಿವಾಸಿಗಳು ಕಾಳಪ್ಪ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದರೂ ಅವರಿಗೆ ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಕಾಳಪ್ಪ ಬಡಾವಣೆಯನ್ನು ಸ್ಲಂ ಎಂದು ಘೋಷಣೆ ಮಾಡಲು ಜಿಲ್ಲಾಧಿಕಾರಿ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ.ಬಿಜೆಪಿ ಸರ್ಕಾರ ಬಡಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರಮಿಕ ನಿವಾಸಿಗಳು ಸರ್ಕಾರದ ಎಕರೆಗಟ್ಟಲೆ ಜಮೀನು ಕೇಳುತ್ತಿಲ್ಲ. ಅವರು ಇರುವ ಸಣ್ಣ ಜಾಗದಲ್ಲಿ ಸ್ಲಂ ಎಂದು ಘೋಷಣೆ ಮಾಡಿ ಹಕ್ಕುಪತ್ರ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ಅದನ್ನು ಕೊಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಇದು ಸರಿಯಲ್ಲ ಎಂದರು. ಮರಿಯಪ್ಪನವರು ಮಾತನಾಡಿ, ರಾಜ್ಯ ಸರ್ಕಾರ ಬಡ ಜನರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಅವರ ಪರವಾಗಿ ಜಿಲ್ಲಾಡಳಿತ ಇರಬೇಕಿತ್ತು, ಆದರೆ ಕಳೆದ ಐದು ದಿನಗಳಿಂದ ಜಿಲ್ಲಾಧಿಕಾರಿ ಸೌಜನ್ಯಕ್ಕೆ ಬರದೆ ಇರುವುದು ಅವರ ಬಡಜನ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಪಾದಯಾತ್ರೆ ಮಾಡದಂತೆ ಎಸ್ಪಿ ಯತೀಶ್ ಶ್ರಮಿಕ ಮುಖಂಡರಿಗೆ ಮನವಿ ಮಾಡಿದರು.ನಾವು ಆದಷ್ಟು ಶಾಂತಿಯಿಂದ ಪಾದಯಾತ್ರೆ ನಡೆಸುವುದಾಗಿ ಪೋಲಿಸರಿಗೆ ತಿಳಿಸಿದ ಪ್ರತಿಭಟನಾಕಾರರು ನೂರಾರು ಸಂಖ್ಯೆಯಲ್ಲಿ ಕೆ.ಆರ್.ಪೇಟೆ ಕಡೆ ಪಾದಯಾತ್ರೆ ಹೊರಟರು.

ಕರ್ನಾಟಕ ಜನಶಕ್ತಿಯ ಅಧ್ಯಕ್ಷ ಕೃಷ್ಣ ಪ್ರಕಾಶ್, ಸಿದ್ದರಾಜು, ಪೂರ್ಣಿಮಾ, ಕಮಲ,ಜ್ಯೋತಿ, ಅಂಜಲಿ, ಶಿಲ್ಪ, ಸುಬ್ರಹ್ಮಣ್ಯ,ನಾಗೇಶ್, ಕಾಳಪ್ಪ ಬಡಾವಣೆಯ ಮುಖಂಡರಾದ ಆರ್ಮುಗಂ,ತುಳಸಮ್ಮ ಅಂಜಲಿ,ಶಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ನೂರಾರು ಶ್ರಮಿಕ ನಿವಾಸಿಗಳು ಪಾದಯಾತ್ರೆಯಲ್ಲಿ ಹೊರಟಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ