ಶುಶ್ರೂಷಕ ವೃತ್ತಿಯು ಬೇರೆಲ್ಲಾ ವೃತ್ತಿಗಳಿಗಿಂತ ಶ್ರೇಷ್ಠ ಮತ್ತು ಮಹತ್ವಪೂರ್ಣವಾದುದ್ದೆಂದು ಬೆಂಗಳೂರಿನ ಆರ್ ಆರ್ ನರ್ಸಿಂಗ್ ಕಾಲೇಜಿನ ಡೀನ್ ಡಾ.ಕೆ.ರಾಮು ಅಭಿಪ್ರಾಯಪಟ್ಟರು.
ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಜರುಗಿದ ದೀಪ ಪ್ರಜ್ವಲನ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನರ್ಸಿಂಗ್ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಮರ್ಪಣ ಭಾವವನ್ನು ಮೈಗೂಡಿಸಿಕೊಂಡಾಗ ಮಾತ್ರ ವೃತ್ತಿಯ ಪಾವಿತ್ರ್ಯವನ್ನು ಉಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಕರ್ತವ್ಯ ನಿರ್ವಹಿಸಬೇಕು. ಸಹಾನುಭೂತಿ ಸಮರ್ಪಣೆ ಮತ್ತು ಅಜೀವ ಕಲಿಕೆಯ ಮೌಲ್ಯವನ್ನು ಒತ್ತಿ ಹೇಳಿದರು. ರೋಗಿ ಕೇಂದ್ರಿತ ಆರೈಕೆ ವಹಿಸುವ ನಿರ್ಣಾಯಕ ಪಾತ್ರದ ಬಗ್ಗೆ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ರೋಗಿಗಳನ್ನು ಆರೈಕೆ ಮಾಡುವಲ್ಲಿ ನೀವು ಕಲಿತ ಕೌಶಲಗಳು ಮತ್ತು ನೀವು ನಡೆಸುವ ಸಂವಹನ ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ ಉತ್ತಮ ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲರಾದ ಪ್ರೊ ಕೆ ಆರ್ ಶೋಭಾ ಅವರು ಉದಯೋನ್ಮುಖ ದಾದಿಯರಿಗೆ ಪ್ರಮಾಣ ವಚನ ಬೋಧಿಸಿದರು. ಎಸಿಯು ಕುಲಪತಿ ಡಾ.ಎಂ ಎ ಶೇಖರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಂಶುಪಾಲರಾದ ವಿಕ್ಟೋರಿಯಾ ಸರ್ವಂದು ದಿನದ ಮಹತ್ವವನ್ನು ಕುರಿತು ಹಿತನುಡಿಗಳನ್ನಾಡಿದರು.
ವೇದಿಕೆಯಲ್ಲಿ ರಿಜಿಸ್ಟ್ರಾರ್ ಡಾ.ಎಂ ಜಿ ಶಿವರಾಮು, ಡೀನ್ ಡಾ. ರಮೇಶ್ ಇತರರಿದ್ದರು.




