ಮಂಡ್ಯ ಜಿಲ್ಲೆಯ ವಿ.ಸಿ.ನಾಲೆಯ ಸುತ್ತಲಿನ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಹೆಚ್ಚು ಅಪಘಾತವಾಗುವ ವಲಯಗಳನ್ನು ಗುರುತಿಸಿ 35 ಕಿ.ಮೀ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ರಸ್ತೆ ತಡೆಗೋಡೆ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಮಂಡ್ಯ ವಿ.ಸಿ.ನಾಲೆ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ತಡೆಗಟ್ಟುವ ಕುರಿತು ಸಭೆ ನಡೆಸಿ ಮಾತನಾಡಿದರು.
ವಿ.ಸಿ.ನಾಲೆಯ ರಸ್ತೆಗಳಲ್ಲಿ ಕಳೆದ 2 ವರ್ಷಗಳಿಂದ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 15 ಜನ ಮೃತ ಪಟ್ಟಿರುತ್ತಾರೆ. ಇದನ್ನು ತಡೆಗಟ್ಟಲು ತಾಂತ್ರಿಕ ಸಮಿತಿ ರಚಿಸಿ ಈಗಾಗಲೇ 20 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ವಿ.ಸಿ. ನಾಲೆ ವ್ಯಾಪ್ತಿಯಲ್ಲಿ ಅಂದಾಜು 540 ಕಿ.ಮೀ ವ್ಯಾಪ್ತಿಯಾಗಿದ್ದು, ಸಂಪೂರ್ಣವಾಗಿ ತಡೆಗೋಡೆ ನಿರ್ಮಿಸುವುದು ಕಷ್ಟಕರ. ಅಪಘಾತ ವಲಯಗಳನ್ನು ಗುರುತಿಸಿ ಲೋಕೋಪಯೋಗಿ ಇಲಾಖೆಯಿಂದ 20 ಕಿ.ಮೀ ಹಾಗೂ ನೀರಾವರಿ ಇಲಾಖೆಗಳಿಂದ 13 ಕಿ.ಮೀನಷ್ಟು ಕ್ರ್ಯಾಷ್ ಬ್ಯಾರಿಯರ್ ನಿರ್ಮಿಸಲಾಗಿದೆ. ಅಪಘಾತವಾದ ನಂತರ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸುವುದರ ಬದಲು ಇಲಾಖೆಯ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿ, ಕಾಮಗಾರಿ ಕೈಗೊಳ್ಳುವುದು ಉತ್ತಮ ಎಂದರು.
ಕ್ರ್ಯಾಷ್ ಬ್ಯಾರಿಯರ್ ನಿರ್ಮಾಣದ ಜೊತೆಗೆ, ವೈಜ್ಞಾನಿಕ ರೋಡ್ ಹಂಪ್ ನಿರ್ಮಾಣ, ರಂಬಲ್ ಸ್ಟ್ರಿಪ್ ನಿರ್ಮಾಣ, ಸೂಚನಾ ಪಲಕಗಳನ್ನು ಅಳವಡಿಸುವ ಕೆಲಸಗಳನ್ನು ಕೈಗೊಳ್ಳುವಂತೆ ಈಗಾಗಲೇ ತಿಳಿಸಲಾಗಿತ್ತು. ಲೋಕೋಪಯೋಗಿ, ಕಾವೇರಿ ನೀರವರಿ ನಿಗಮ, ಹೇಮಾವತಿ ನಾಲಾ ವಿಭಾಗದವರು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದರು.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಹೆಚ್ಚಿನ ಭಾಗದ ರಸ್ತೆ ಬರಲಿದ್ದು, ಇಲಾಖೆಗೆ ನೀಡಲಾಗುವ ಅನುದಾನದಲ್ಲಿ ಅಪಘಾತ ತಡೆಗಟ್ಟಲು ಅನುದಾನ ಮೀಸಲಿಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆತುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಾಪಾಲಕ ಅಭಿಯಂತರ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಶಂಕರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.




