Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ನದಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ | ಕೆ.ಆರ್.ಎಸ್ ನಿಂದ 30 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಬಿಡುಗಡೆ

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ, ಇದರಿಂದಾಗಿ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಹರಿಸಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯ ನೀರಿನಮಟ್ಟ 120.90 ಅಡಿಗೆ ತಲುಪಿದ್ದು, 20,315 ಕ್ಯೂಸೆಕ್ ಒಳಹರಿವಿದೆ. 18,300 ಕ್ಯೂಸೆಕ್ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.

ಇದರ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಂಭವವಿದ್ದು, ಜಲಾಶಯದಿಂದ ಸುಮಾರು 30 ಸಾವಿರದಿಂದ 50 ಸಾವಿರ ಕ್ಯೂಸೆಕ್ ವರಗೆ ನೀರನ್ನು ಹರಿಸಲಾಗುವುದು, ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಈ ಮೂಲಕ ಕೋರಲಾಗಿದೆ.

ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿ ತೀರದ ಪ್ರದೇಶಗಳಾದ ಕಾರೇಕುರ, ರಂಗನತಿಟ್ಟು, ಶ್ರೀರಂಗಪಟ್ಟಣ ಟೌನಿನ ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಸ್ಥಾನ, ಸಂಗಮ್, ಘೋಸಾಯ್‌ ಘಾಟ್, ಪಶ್ಚಿಮವಾಹಿನಿ ಸ್ಥಳಗಳಲ್ಲಿ ಸಾರ್ವಜನಿಕರು ನದಿ ಬಳಿಗೆ ಹೋಗದಂತೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಪುರುಷೋತ್ತಮ ಸತ್ತೀಗೇರಿ ಆದೇಶ ಹೊರಡಿಸಿದ್ದಾರೆ.

ಶ್ರೀರಂಗಪಟ್ಟಣ ಟೌನಿನ ಪಶ್ಚಿಮವಾಹಿನಿ, ಸಂಗಮ್, ಘೋಸಾಯ್‌ ಘಾಟ್, ಸ್ನಾನಘಟ್ಟ, ಜಿ.ಬಿ.ಹೊಳೆ ಮತ್ತು ಇತರೆ ಸ್ಥಳಗಳಲ್ಲಿ ಆಸ್ತಿ ವಿಸ್ತರ್ಜನೆ, ಪಿಂಡ ಪ್ರದಾನ ಇತ್ಯಾದಿ ಪೂಜಾ ಕಾರ್ಯಗಳನ್ನು ನಡೆಸಿದಲ್ಲಿ ಅನಾಹುತಗಳು ಉಂಟಾಗಿ ಸಾವು ನೋವು ಸಂಭವ ಜಾಸ್ತಿಯಾಗಿರುತ್ತದೆ. ಅಸ್ತಿ ವಿಸರ್ಜನೆ, ಪಿಂಡ ಪ್ರದಾನ ಇತ್ಯಾದಿ ಕಾರ್ಯಗಳನ್ನು ನಡೆಸುವಾಗ ಸಾರ್ವಜನಿಕರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಗಳು ವರದಿಯಾಗಿರುತ್ತದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಜೂ.25ರಿಂದ ಜೂ. 30ರವರೆಗೆ ಅಥವಾ ಪ್ರವಾಹ ತಗ್ಗುವವರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ