Thursday, September 19, 2024

ಪ್ರಾಯೋಗಿಕ ಆವೃತ್ತಿ

ಪರೀಕ್ಷಾರ್ಥ ಸ್ಪೋಟಕ್ಕೆ ರೈತಸಂಘದ ತೀವ್ರ ವಿರೋಧ: ಪ್ರತಿಭಟನೆ

ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ 20 ಕಿ.ಮೀ ಪ್ರದೇಶದಲ್ಲಿ ಗಣಿಗಾರಿಕೆ ಸಂಬಂಧ ಜಾರ್ಖಂಡ್ ವಿಜ್ಞಾನಿಗಳ ತಂಡದ ಪರೀಕ್ಷಾರ್ಥ ಸ್ಪೋಟಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ರೈತಸಂಘದ ನೂರಾರು ಕಾರ್ಯಕರ್ತರು ಕೆಆರ್ ಎಸ್ ಜಲಾಶಯದ ಮುಖ್ಯ ಗೇಟ್ ಮುಂಭಾಗ ಧರಣಿ ನಡೆಸಿ, ಜಾರ್ಖಂಡ್ ಮೂಲದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡಕ್ಕೆ ಪರೀಕ್ಷಾರ್ಥ ಸ್ಪೋಟ ನಡೆಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕೆಆರ್ ಎಸ್ ಜಲಾಶಯ ಮುಂಭಾಗ ರೈತಸಂಘದ ಕಾರ್ಯಕರ್ತರು ಚಳುವಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಜಾರ್ಖಂಡ್ ವಿಜ್ಞಾನಿಗಳ ತಂಡ ಟ್ರಯಲ್ ಬ್ಲಾಸ್ಟ್ ನಡೆಸಲು ಗಣಿಗಾರಿಕೆ ಸ್ಥಳಕ್ಕೆ ತೆರಳಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಗಣಿಗಾರಿಕೆ ಬಳಿ ವಾಹನಗಳ ಮೂಲಕ ತೆರಳಿದ ರೈತರಿಗೆ ಕಾವೇರಿಪುರ ಗ್ರಾಮಕ್ಕೆ ಆಗಮಿಸಿದಾಗ, ಗಣಿಗಾರಿಕೆ ಪರವಾಗಿದ್ದ ಗಣಿ ಮಾಲೀಕರ ಬೆಂಬಲಿಗರು ನ್ಯಾಯ ಬದ್ಧವಾದ ಟ್ರಯಲ್ ಬ್ಲಾಸ್ಟ್ ನಡೆಸಲಿ ಎಂದು ಘೋಷಣೆ ಕೂಗುತ್ತಾ ರೈತಸಂಘದ ಕಾರ್ಯಕರ್ತರಿಗೆ ಅಡ್ಡಿಪಡಿಸಿದರು.

ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಇಟ್ಟು ಗಣಿಗಾರಿಕೆ ಪರವಾದ ಗುಂಪು ರೈತರನ್ನು ತಡೆಯಲು ಯತ್ನಿಸಿದರು. ಒಂದು ಹಂತದಲ್ಲಿ ಎರಡೂ ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಪೋಲಿಸರು ಮಧ್ಯೆ ಪ್ರವೇಶಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದರು.

ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಗೆ ಸೇರಿದ ಬೇಬಿಬೆಟ್ಟದ ಸಮೀಪದಲ್ಲಿರುವ ಕಾವೇರಿಪುರಕ್ಕೆ ರೈತಸಂಘದ ಕಾರ್ಯಕರ್ತರು ಆಗಮಿಸಿದಾಗ, ಸ್ಥಳದಲ್ಲಿದ್ದ ಟ್ರಯಲ್ ಬ್ಲಾಸ್ಟ್ ನಡೆಸಲಿ ಎನ್ನುವ ಮತ್ತೊಂದು ಗುಂಪೊಂದು ರೈತಸಂಘದ ವಾಹನಗಳನ್ನು ರಸ್ತೆಯಲ್ಲೇ ತಡೆದು, ಪರಸ್ಪರ ತಳ್ಳಾಟ,ನೂಕಾಟ ಮಾಡುತ್ತಾ, ಕಿರುಚಾಡುತ್ತಾ, ಕೊನೆಗೆ ಕೈ ಕೈ ಮಿಲಾಯಿಸಿದರು.

ಪೊಲೀಸರು ಮಧ್ಯೆ ಪ್ರವೇಶ ಮಾಡಿದರೂ ಸಹ ಕೂಗಾಟ, ಕಿರುಚಾಟ ಕಡಿಮೆ ಆಗಲಿಲ್ಲ. ಸುಮಾರು ಅರ್ಧಗಂಟೆ ಕಾಲ ಟ್ರಯಲ್ ಬ್ಲಾಸ್ಟ್ ಪರ ಹಾಗೂ ವಿರೋಧದ ಜಗಳ ನಡೆಯಿತು. ನಂತರ ಸ್ಥಳಕ್ಕೆ ಹೆಚ್ಚಿನ ಪೊಲೀಸರು ಆಗಮಿಸಿದಾಗ, ಎರಡೂ ಕಡೆ ದೂರದಲ್ಲಿ ಬ್ಯಾರಿಕೇಡ್ ಇಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಈ ಸಂದರ್ಭದಲ್ಲಿ ರೈತಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ,ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಾರ್ಖಂಡ್ ವಿಜ್ಞಾನಿಗಳ ತಂಡ ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗಣಿಗಾರಿಕೆ ಸ್ಥಳ ಮುಗಿಸಿ, ನಂತರ ಎಸ್ಟಿಜಿ ಗಣಿಗಾರಿಕೆ ಸ್ಥಳಕ್ಕೆ ವಿಜ್ಞಾನಿಗಳ ತಂಡ ಆಗಮಿಸಿದಾಗ, ಟ್ರಯಲ್ ಬ್ಲಾಸ್ಟ್ ನಡೆಸಬಾರದೆಂದು ಅಧಿಕಾರಿಗೆ ಪ್ರಶ್ನಿಸಲು ಆಗಮಿಸಿದ ಕೆಲ ರೈತಸಂಘದ ಕಾರ್ಯಕರ್ತರು ಹಾಗೂ ಗಣಿ ಪರವಾದ ಕಾರ್ಯಕರ್ತರ ನಡುವೆ ಮತ್ತೆ ತೀವ್ರ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಹರಸಾಹಸ ಪಟ್ಟು ಜನರನ್ನು ಚದುರಿಸಿದರು.ಗಲಾಟೆ ನಡೆದಾಗ ವಿಜ್ಞಾನಿಗಳ ತಂಡ ಮೂಕ ಪ್ರೇಕ್ಷಕರಾಗಿ ವೀಕ್ಷಿಸಿ, ಅವರ ಕೆಲಸ ಮಾಡಿಕೊಂಡು ತೆರಳಿದರು.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪಾಂಡವಪುರ ಅಧ್ಯಕ್ಷ ಚಿಕ್ಕಾಡೆ ಹರೀಶ್ ನೇತೃತ್ವದಲ್ಲಿ ರೈತಸಂಘದ ಐನೂರಕ್ಕೂ ಹೆಚ್ಚು ಕಾರ್ಯಕರ್ತರಿದ್ದರು. ಗೂಂಡಾಗಿರಿಗೆ ಧಿಕ್ಕಾರ
ರೈತಸಂಘದ ಹೋರಾಟಗಾರರ ಮೇಲೆ ಗೂಂಡಾ ರೀತಿ ವರ್ತಿಸಿರುವ ಗಣಿ ಮಾಲೀಕರ ಪರವಾದ ಜನರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸಬೇಕು ಎಂದು ರೈತಸಂಘದ ಕಾರ್ಯಕರ್ತರು ಕಾವೇರಿಪುರದ ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜಾರ್ಖಂಡ್ ವಿಜ್ಞಾನಿಗಳ ತಂಡ ಪೊಲೀಸ್ ರಕ್ಷಣೆಯೊಂದಿಗೆ ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗಣಿಗಾರಿಕೆ ಕೇಂದ್ರ, ಎಸ್.ಎಲ್.ವಿ ಕ್ರಷರ್, ಎಸ್.ಟಿ.ಜಿ ಕ್ರಷರ್ ಕೇಂದ್ರಗಳಿಗೆ ಭೇಟಿ ನೀಡಿ,ಟ್ರಯಲ್ ಬ್ಲಾಸ್ಟ್ ನಡೆಸಲು ಒಂದು ನಿರ್ದಿಷ್ಟ ಸ್ಥಳವನ್ನು ನಿಗದಿ ಪಡಿಸುತ್ತಿದ್ದರು.

ರೈತಸಂಘದ ಪ್ರತಿಭಟನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಆಗಮಿಸಿದಾಗ,ಟ್ರಯಲ್ ಬ್ಲಾಸ್ಟ್ ನಡೆಸುವ ಕುರಿತು ರೈತಸಂಘದ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದಾಗ, ಟ್ರಯಲ್ ಬ್ಲಾಸ್ಟ್ ನಿಲ್ಲಿಸುವ ಅಧಿಕಾರ ನನಗಿಲ್ಲ ಎಂದು ಸ್ಪಷ್ಟಪಡಿಸಿ,ನಂತರ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಸಂಜೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತಸಂಘ ಮುಖಂಡರ ಸಭೆ ನಡೆಸಲು ನಿರ್ಧರಿಸಿದ ನಂತರ ರೈತಸಂಘದ ಪ್ರತಿಭಟನೆ ಹಿಂತೆಗೆದುಕೊಂಡರು.

ಪರೀಕ್ಷಾರ್ಥ ಸ್ಪೋಟ ಬೇಡ

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆಆರ್ ಎಸ್ ಸುತ್ತಮುತ್ತಲಿನ 20 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಶಾಶ್ವತವಾಗಿ ಗಣಿಗಾರಿಕೆ ಸ್ಥಗಿತಗೊಳಿಸಲಿ. ಕನ್ನಂಬಾಡಿ ಕಟ್ಟೆಗೆ ಅಪಾಯದ ಸೂಚನೆ ಎದುರಾಗಿದೆ. ಅಪಾಯ ಹಂತದಲ್ಲಿ ಪರೀಕ್ಷಾರ್ಥ ಸ್ಪೋಟ ಮಾಡೋದು ಬೇಡ.ಇದರಿಂದ ಕನ್ನಂಬಾಡಿ ಕಟ್ಟೆಗೆ ಅಪಾಯ ಆಗೋದು ಬೇಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಮನಹರಿಸಿ, ಟ್ರಯಲ್ ಬ್ಲಾಸ್ಟ್ ನಿಲ್ಲಿಸುವಂತೆ ಸೂಚಿಸಲಿ ಎಂದು ಒತ್ತಾಯಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಜಾರ್ಖಂಡ್ ವಿಜ್ಞಾನಿಗಳು ಕಳ್ಳರಿದ್ದಂತೆ. ಅವರ ವರದಿ ಶುದ್ಧ ಸುಳ್ಳಾಗಿದೆ. ಟ್ರಯಲ್ ಬ್ಲಾಸ್ಟ್ ವರದಿ ಗಣಿ ಮಾಲೀಕರ ಪರವಾಗಿ ನೀಡುತ್ತಾರೆ. ಟ್ರಯಲ್ ಬ್ಲಾಸ್ಟ್ ಬೇಡವೇ ಬೇಡ ಎಂದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!